ADVERTISEMENT

‘ಬಸವೇಶ್ವರರ ಆಶಯಗಳಿಗೆ ವಿಶ್ವಮನ್ನಣೆ’

ಜಮಖಂಡಿ: ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗಿ

ವೆಂಕಟೇಶ್ ಜಿ.ಎಚ್
Published 7 ಮೇ 2018, 6:51 IST
Last Updated 7 ಮೇ 2018, 6:51 IST
ಜಮಖಂಡಿಯ ಸಮಾವೇಶದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುದೇವ ರಾನಡೆ ಅವರ ಭಾವಚಿತ್ರ ನೀಡಿ ಗೌರವಿಸಲಾಯಿತು.
ಜಮಖಂಡಿಯ ಸಮಾವೇಶದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುದೇವ ರಾನಡೆ ಅವರ ಭಾವಚಿತ್ರ ನೀಡಿ ಗೌರವಿಸಲಾಯಿತು.   

ಜಮಖಂಡಿ: ‘ಕಾಂಗ್ರೆಸ್‌ನವರಿಗೆ 50 ವರ್ಷ ಕಾಲ ಬಸವೇಶ್ವರರು ನೆನಪಾಗಿರಲಿಲ್ಲ. ಸಂಸತ್ ಭವನದ ಆವರಣದಲ್ಲಿ ಬಸವಣ್ಣನ ಪುತ್ಥಳಿ ಅನಾವರಣಕ್ಕೆ ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಬರಬೇಕಾಯಿತು’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟೀಕಿಸಿದರು.

ನಗರದಲ್ಲಿ ಭಾನುವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಬಸವೇಶ್ವರರ ಆಶಯಗಳನ್ನು ವಿಶ್ವದ ಎದುರು ಒಯ್ಯುವ ನಿರ್ಧಾರ ನಮ್ಮ ಸರ್ಕಾರ ಮಾಡಿದೆ. ಆ ನಿಟ್ಟಿನಲ್ಲಿ ಲಂಡನ್‌ನ ಥೇಮ್ಸ್ ನದಿಯ ದಡದಲ್ಲಿ ಅವರ ಪುತ್ಥಳಿ ಅನಾವರಣ ಮಾಡುವ ಅವಕಾಶ ನನಗೆ ದೊರೆಯಿತು’ ಎಂದು ಸ್ಮರಿಸಿದರು.

ಕರ್ನಾಟಕದ ಕಬ್ಬು ಬೆಳೆಗಾರರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಯಾವುದೋ ಜನ್ಮದ ದ್ವೇಷ ಇದ್ದಂತಿದೆ. ಹಾಗಾಗಿ ಸೂಕ್ತ ಸಂದರ್ಭದಲ್ಲಿ ಕಾರ್ಖಾನೆಗಳಿಂದ ಅವರಿಗೆ ಬಿಲ್ ಕೊಡಿಸುವ ವ್ಯವಸ್ಥೆ ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದ ಮೋದಿ, ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಕಬ್ಬಿಗೆ ₹5.50 ಬೆಂಬಲ ಬೆಲೆ ನೀಡಲು ನಿರ್ಧರಿಸಿದೆ. ಆ ಹಣವನ್ನು ಕಾರ್ಖಾನೆಗಳಿಗೆ ಕೊಡುವುದಿಲ್ಲ. ಬದಲಿಗೆ ನೇರವಾಗಿ ಬೆಳೆಗಾರರ ಬ್ಯಾಂಕ್ ಖಾತೆಗೆ ಹಾಕಲಾಗುವುದು’ ಎಂದರು.

ADVERTISEMENT

ಸಕ್ಕರೆ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ನಿಯಂತ್ರಣದಲ್ಲಿದೆ. ಹಾಗಾಗಿ ಅಲ್ಲಿನ ಏರುಪೇರು ನಿಭಾಯಿಸಲು ಇಥೆನಾಲನ್ನು ಪೆಟ್ರೋಲ್‌ ಜೊತೆ ಬೆರೆಸಲು ಅವಕಾಶ ನೀಡಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಈ ಕೆಲಸ ಮಾಡಲು ಬಿಜೆಪಿ ಅಧಿಕಾರಕ್ಕೆ ಬರಬೇಕಾಯಿತು ಎಂದು ವಿರೋಧಿಗಳಿಗೆ ಕಟುಕಿದರು.

ನೇಕಾರರಿಗೆ ನೆರವಿನ ಭರವಸೆ: ಇಂಡಿಯಾ ಹೋಂ ಮೇಡ್ ಬಜಾರ್ ಹೆಸರಿನಲ್ಲಿ ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಮಾಡಿ ಇಳಕಲ್ ಸೀರೆ ಸೇರಿದಂತೆ ಇಲ್ಲಿನ ನೇಕಾರರ ಎಲ್ಲಾ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯುವಂತೆ ಮಾಡುವುದಾಗಹಿ ಹೇಳಿದ ಮೋದಿ, ನೇಕಾರರಿಗೆ ಯಂತ್ರೋಪಕರಣ ಖರೀದಿಗೆ ಸಹಾಯಧನ, ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ನಿರ್ಧರಿಸಿದ್ದೇವೆ ಎಂದರು.

‘ಬಾಗಲಕೋಟೆ ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನೇಕಾರರ ನೆರವಿಗೆ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸುವುದಾಗಿ ಕಳೆದ ಚುನಾವಣೆ ವೇಳೆ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದನ್ನು ಈಡೇರಿಸಿದ್ದಾರಾ’ ಎಂದು ಪ್ರಶ್ನಿಸಿದ ಮೋದಿ, ‘ಕೊಟ್ಟ ಮಾತಿನಂತೆ ಸಿ.ಎಂ ನಡೆದುಕೊಂಡಿದ್ದಾರೋ ಇಲ್ಲವೋ ಜೋರಾಗಿ ಹೇಳಿ’ ಎಂದು ಕೇಳಿದರು. ಆಗ ಇಲ್ಲ ಎಂಬ ಉತ್ತರ ಒಕ್ಕೊರಲಿನಿಂದ ಕೇಳಿಬಂದಿತು. ಹಾಗಿದ್ದರೆ ಸುಳ್ಳು ಹೇಳುವ ವ್ಯಕ್ತಿಯನ್ನು ಜಿಲ್ಲೆಯೊಳಗೆ ಏಕೆ ಬಿಟ್ಟುಕೊಳ್ಳುತ್ತೀರಿ. ಹೊರಗೆ ದೂಡಿ ಎಂದರು.

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮೂಲಕ ರೈತರ ನೆರವಿಗೆ ನಿಂತಿದೆ. ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಎಲ್ಲಾ ಸಂದರ್ಭದಲ್ಲೂ ವಿಮೆ ಖಾತರಿ ದೊರೆಯಲಿದೆ. ಈ ಯೋಜನೆಯಡಿ ಇಲ್ಲಿಯವರೆಗೆ ಕರ್ನಾಟಕಕ್ಕೆ ₹1100 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.

ಮಹಿಳೆಯರ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಮೋದಿ, ಬೇಟಿ ಬಚಾವೊ, ಪಡಾವೊ ಯೋಜನೆ ಆರಂಭಿಸಿರುವುದನ್ನು ಉಲ್ಲೇಖಿಸಿದರು. ಈ ಯೋಜನೆಯನ್ನೂ ಟೀಕಿಸುವ ಕೆಲಸ ವಿರೋಧಿಗಳಿಂದ ನಡೆಯುತ್ತಿದೆ ಎಂದು ಹೇಳಿದ ಅವರು, ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸಿ ಅವರ ಸುರಕ್ಷತೆಯ ಬಗ್ಗೆ ಸರ್ಕಾರಕ್ಕೆ ಇರುವ ಬದ್ಧತೆಯನ್ನು ಪ್ರಕಟಪಡಿಸಿರುವುದಾಗಿ ಹೇಳಿಕೊಂಡರು.

ಸಮಾವೇಶದ ಆರಂಭದಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಈ ವೇಳೆ ಶಾಸಕ ಗೋವಿಂದ ಕಾರಜೋಳ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕರಾದ ಸಿದ್ದು ಸವದಿ, ದೊಡ್ಡನಗೌಡ ಪಾಟೀಲ, ವೀರಣ್ಣ ಚರಂತಿಮಠ, ರಾಜಶೇಖರ ಶೀಲವಂತರ, ನಾರಾಯಣ ಸಾ ಭಾಂಡಗೆ ಹಾಜರಿದ್ದರು.

ಕನ್ನಡದಲ್ಲಿ ಮಾತು ಆರಂಭ...

ಬಾಗಲಕೋಟೆ ಜಿಲ್ಲೆ ಜನತೆಗೆ ನನ್ನ ನಮಸ್ಕಾರಗಳು, ದೇವಿ ಬನಶಂಕರಿ ಅಮ್ಮನ ಚರಣಗಳಿಗೆ ಸಾಷ್ಟಾಂಗ ಪ್ರಣಾಮ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ. ‘ಇದು ವೀರ ಪುಲಿಕೇಶಿ ನಾಡು, ಬಾದಾಮಿ ಚಾಲುಕ್ಯರು, ಜಮಖಂಡಿ ಸಂಸ್ಥಾನದ ರಾಜರು ಆಳಿದ್ದಾರೆ. ಸ್ವಾತಂತ್ರ್ಯ ವೀರರಾದ ಹಲಗಲಿಯ ಬೇಡರು, ಗಿರಿಮಲ್ಲೇಶ್ವರ ಮಹಾರಾಜರು, ಗುರುದೇವ ರಾನಡೆ, ವಿಠ್ಠಲ್‌ ರಾಮ್‌ಜಿ ಶಿಂಧೆ ಅವರ ಮನೆಯವರಿಗೂ ನನ್ನ ನಮಸ್ಕಾರಗಳು’ ಎಂದು ಹೇಳಿದರು.

ಭಾಷಣದಲ್ಲಿ ಕುವೆಂಪು ಅವರ ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಸಾಲನ್ನು ಉಲ್ಲೇಖಿಸಿದರು.

ಪ್ರಧಾನಿ ಹಿಂದಿ ಭಾಷಣವನ್ನು ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ ಕನ್ನಡಕ್ಕೆ ಅನುವಾದಿಸಿದರು.ಮೊಳಗಿದ ಮೋದಿ, ಮೋದಿ ಘೋಷಣೆ: ಪ್ರಧಾನಿ ನರೇಂದ್ರ ಮೋದಿ ವೇದಿಕೆಗೆ ಬರುತ್ತಿದ್ದಂತೆಯೇ ಸಮಾವೇಶದಲ್ಲಿ ನೆರೆದವರು ಮೋದಿ, ಮೋದಿ ಘೋಷಣೆ ಆರಂಭಿಸಿದರು.

ಮೋದಿ, ಅಮಿತ್‌ ಶಾ, ಯಡಿಯೂರಪ್ಪ ಅವರ ಕಟೌಟ್ ಹಿಡಿದು, ಕೇಸರಿ ಟೋಪಿ, ಧ್ವಜ ಹಿಡಿದವರ ಜತೆ ಮೋದಿ ಮುಖವಾಡಗಳು ಕಾಣಿಸಿಕೊಂಡವು.

ಸಂಸದ ಪಿ.ಸಿ.ಗದ್ದಿಗೌಡರ ನೇತೃತ್ವದಲ್ಲಿ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಪ್ರಧಾನಿಗೆ ಬೃಹತ್ ಹಾರ ಹಾಕಿ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿದರು.

ಡಿ.ಸಿಗೂ ಸಂಚಾರ ದಟ್ಟಣೆ ಬಿಸಿ!

ಜಂಬಗಿ ಸೇತುವೆ ಸಮೀಪದ ಹೊಲದಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಸಂಜೆ 3.45ಕ್ಕೆ ಭದ್ರತಾ ಸಿಬ್ಬಂದಿಯೊಂದಿಗೆ ಮೂರು ಹೆಲಿಕಾಪ್ಟರ್‌ಗಳಲ್ಲಿ ಬಂದ ಪ್ರಧಾನಿ ನರೇಂದ್ರ ಮೋದಿ, ವೇದಿಕೆ ಹಿಂಭಾಗದಲ್ಲಿ ಸಿದ್ಧಪಡಿಸಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಇಳಿದು ವೇದಿಕೆಗೆ ಬಂದರು. 4 ಗಂಟೆಗೆ ಭಾಷಣ ಆರಂಭಿಸಿ 50 ನಿಮಿಷ ಮಾತನಾಡಿದರು.

ಸಂಜೆಯ ಬಿಸಿಲನ್ನೂ ಲೆಕ್ಕಿಸದೇ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಬೆಂಬಲಿಗರು ಭಾಷಣ ಆಲಿಸಿದರು. ಜಂಬಗಿ ರಸ್ತೆ ಚಿಕ್ಕದಾಗಿದ್ದು, ಮೋದಿ ಕಾರ್ಯಕ್ರಮ ಮುಗಿದ ನಂತರ ಸಾರ್ವಜನಿಕರು ಸಂಚಾರ ಹಾಗೂ ಜನ ದಟ್ಟಣೆಯಲ್ಲಿ ಸಿಲುಕಿದರು. ಒಬ್ಬರಿಗೊಬ್ಬರು ಒತ್ತಿಕೊಂಡೇ ಕಿ.ಮೀಗಟ್ಟಲೇ ನಡೆದರು.

ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ಸಿಇಒ ವಿಕಾಸ್ ಸುರಳಕರ್, ಐಪಿಎಸ್ ಅಧಿಕಾರಿ ಸಿ.ಬಿ.ರಿಷ್ಯಂತ್, ಐಜಿಪಿ ಅಲೋಕ್ ಕುಮಾರ್ ಇದ್ದ ವಾಹನಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿದವು. ಮೂರು ಕಿ.ಮೀ ಮುಂದೆ ಸಾಗಲು ಗಂಟೆಗಟ್ಟಲೇ ಕಾಯಬೇಕಾಯಿತು. ಸಮಾವೇಶಕ್ಕೆ ಬಂದವರು ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿದ್ದು, ಈ ದಟ್ಟಣೆಗೆ ಕಾರಣವಾಯಿತು. ಹಲವರು ಪಕ್ಕದ ಹೊಲಗಳ ಮುಳ್ಳುಕಂಟಿಗಳಲ್ಲೇ ಸಾಗಿದರು. ಕುಡಿಯುವ ನೀರಿನ ಸ್ಯಾಚೆಗಳನ್ನು ವಿತರಿಸಲಾಯಿತು.

**
ಇಲ್ಲಿ ಸೇರಿರುವ ಜನಸಮೂಹ ನೋಡಿದರೆ ನಿಮ್ಮ ಸಿ.ಎಂಗೆ ನಿದ್ರೆ ಬರುವುದಿಲ್ಲ. ಚಾಮುಂ<br/>ಡೇಶ್ವರಿಯಿಂದ ಓಡಿಬಂದಿರುವ ಅವರು ಇಲ್ಲಿಯೂ ಪಾರಾಗುವುದಿಲ್ಲ
– ನರೇಂದ್ರ ಮೋದಿ, ಪ್ರಧಾನ ಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.