ADVERTISEMENT

ಬಸವ ಶರಣ ಕಲಾ ಸಂಗ್ರಹಾಲಯ

ಕೂಡಲಸಂಗಮ: ಉಬ್ಬು ಚಿತ್ರದ ಮೂಲಕ ಶರಣರ ಬದುಕು ಅನಾವರಣ

ಶ್ರೀಧರ ಗೌಡರ
Published 3 ಡಿಸೆಂಬರ್ 2017, 5:43 IST
Last Updated 3 ಡಿಸೆಂಬರ್ 2017, 5:43 IST
ಬಸವ ಕಲಾ ಸಂಗ್ರಹಾಲಯದ ಒಳ ನೋಟ
ಬಸವ ಕಲಾ ಸಂಗ್ರಹಾಲಯದ ಒಳ ನೋಟ   

12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಬಸವಣ್ಣ ಹಾಗೂ ಸಮಕಾಲೀನ ಶಿವಶರಣರ ಬದುಕನ್ನು ಕಣ್ಣಿಗೆ ಕಟ್ಟಿಕೊಡುವ ತಾಣ ಇದು. ಬಸವಣ್ಣನ ವಿದ್ಯಾಭೂಮಿ, ಐಕ್ಯ ಸ್ಥಳವಾದ ಕೂಡಲಸಂಗಮಕ್ಕೆ ಬರುವ ಪ್ರವಾಸಿಗರಿಗೆ ಬಸವ ಶರಣ ಕಲಾ ಸಂಗ್ರಹಾಲಯದಲ್ಲಿ ಉಬ್ಬು ಚಿತ್ರದ ಮೂಲಕ ಪರಿಚಯಿಸುವ ಕಾರ್ಯವನ್ನು ಕಲಾವಿದ ಬಸವರಾಜ ಅನಗವಾಡಿ ಮಾಡಿದ್ದಾರೆ.

ಸಭಾ ಭವನದ ಬಳಿ ಇರುವ ಬಸವ ಕಲಾ ಸಂಗ್ರಾಲಯದಲ್ಲಿ 160ಕ್ಕೂ ಅಧಿಕ ಉಬ್ಬ ಚಿತ್ರಗಳಿವೆ. ಆಧುನಿಕ ತಂತ್ರಜ್ಞಾನದ ಮೂಲಕ ₹ 75 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾದ ಈ ಕಲಾ ಸಂಗ್ರಹಾಲಯಕ್ಕೆ ನಿತ್ಯ 300 ರಿಂದ 400 ಪ್ರವಾಸಿಗರು ಬರುತ್ತಾರೆ. ಬಸ ವಣ್ಣ ಹಾಗೂ ಸಮಕಾಲಿನ ಶರಣರ ಬದುಕು, ಕಾಯಕ, ವೈಚಾರಿಕ ವಿಚಾರಗಳೊಂದಿಗೆ ಅವರು ಎದುರಿ ಸಿದ ಶೋಷಣೆ, ಸಾಮಾಜಿಕ ಕಟ್ಟು ಪಾಡುಗಳ ಪರಿಚಯ ಪಡೆಯುತ್ತಾರೆ.

ಮೊದಲ ವಿಭಾಗದಲ್ಲಿ ಬಸವಣ್ಣನವರ ಬದುಕಿಗೆ ಸಂಬಂಧಿ ಸಿದ ಜನನ, ಬಾಲ್ಯ, ಜನೀವಾರ ನಿರಾಕರಣೆ, ಕೀಳ್ಚಾತಿಯವರೊಂದಿಗೆ ಬೆರೆತಿರುವುದು, ವಿಶಿಷ್ಟ ಲಿಪಿ ಓದುತ್ತಿರುವುದು, ಸಿಂಹಾಸನದ ಕೆಳಗಿರುವ ನಿಧಿ ತೆಗೆಯುವ ದೃಶ್ಯ, ಆಭರಣ ಕದ್ದ ಕಳ್ಳನ ಮನ ಪರಿವರ್ತನೆ, ಬಸವಣ್ಣ ಅಸ್ಪೃಶ್ಯರನ್ನು ಸ್ಪರ್ಶಿಸಿ ಸಮಾನತೆ ಸಾರುವದು, ಹರಳಯ್ಯ ತಂದ ಪಾದರಕ್ಷೆಯನ್ನು ಮೆಟ್ಟುವ ಮಧುವಯ್ಯ , ಹೀನ ಕುಲಜರು ಲಿಂಗ ಪೂಜಿಸುತ್ತಿರುವುದು, ಅನುಭವ ಮಂಟಪ, ಅನುಭವ ಮಂಟಪದಲ್ಲಿ ಅಲ್ಲಮಪ್ರಭು ಮತ್ತು ಇತರ ಶರಣರು, ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆ ಸಂಭ್ರಮ, ರಾಜ ಮುದ್ರೆಯನ್ನು ಹಿಂತಿರುಗಿಸುತ್ತಿರುವ ಬಸವಣ್ಣ, ಶಿಕ್ಷೆಗೆ ಗುರಿಯಾದ ಹರಳಯ್ಯ, ಏಳೆಹೂಟೆ ಪ್ರಸಂಗ, ಹುತ್ತಕ್ಕೆ ಹಾಲನ್ನೆರೆಯುವುದು, ದಿಟದ ನಾಗರವನ್ನು ಬಡಿಯುವ ಮೂಢನಂಬಿಕೆಯನ್ನು ತಡೆಯುತ್ತಿದ ಬಸವಣ್ಣನ ಚಿತ್ರಗಳು ಇವೆ.

ADVERTISEMENT

ಎರಡನೇ ವಿಭಾಗದಲ್ಲಿ ಶರ ಣರ ಕಾಯಕಕ್ಕೆ ಸಂಬಂಧಿಸಿದ ಉಬ್ಬುಚಿತ್ರಗಳಿದ್ದು, ಸೊಡ್ಡಳ ಬಾಚರಸ, ಮೋಳಿಗೆಯ ಮಾರಯ್ಯ, ಮಹಾದೇವಿ ದಂಪತಿ, ಕಟ್ಟಿಗೆ ಕಡೆ ಯುವ ಮಾರಯ್ಯ, ಬಟ್ಟೆ ಒಗೆಯುವ ಮಡಿವಾಳ ಮಾಚಿದೇವ, ಭತ್ತ ಕುಟ್ಟುವ ಕೊಟ್ಟಣದ ಸೋಮಮ್ಮ, ಕಾಯಕ ಜೀವಿಗಳ ಉಬ್ಬು ಚಿತ್ರ ಎಲ್ಲ ಪ್ರವಾಸಿಗರನ್ನು 12ನೇ ಶತಮಾನಕ್ಕೆ ಕರೆದುಕೊಂಡು ಹೋಗುತ್ತವೆ.

ಬಸವ ಶರಣ ಕಲಾ ಸಂಗ್ರ ಹಾಲಯದ ರೂವಾರಿಯಾದ ಬಸವರಾಜ ಅನಗವಾಡಿ ಕಣ್ಮನ ಸೆಳೆಯುವ ಆಲಮಟ್ಟಿ ಉದ್ಯಾನ, ಬಾದಾಮಿಯ ಮಾನವ ವಿಕಾಸ ಪಾರ್ಕ್‌, ಬೆಂಗಳೂರಿನ ಜಯಮಹಲ್ ಪಾರ್ಕ್‌, ಬಳ್ಳಾರಿ ವಿಜ್ಞಾನ ಪಾರ್ಕ್‌ಗಳ ಕಾರಣೀಕರ್ತರಾಗಿದ್ದಾರೆ.

‘ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸುವ ಈ ಸಂಗ್ರಹಾಲಯಕ್ಕೆ ₹10 ಪ್ರವೇಶ ಶುಲ್ಕವಿದೆ. ಶಾಲಾ ಮಕ್ಕಳಿಗೆ ರಿಯಾಯತಿ ದರದಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಬಸವಣ್ಣ ಹಾಗೂ ಸಮಕಾಲಿನ ಶರಣರ ಕಾಯಕದ ಬದುಕನ್ನು ಇಂದಿನ ಯುವ ಜನಾಂಗಕ್ಕೆ ಭಿತ್ತರಿಸುವ ಕಾರ್ಯವನ್ನು ಮಾಡುತ್ತಿದೆ’ ಎಂದು ಸಂಗ್ರಹಾಲಯದ ಮುಖ್ಯಸ್ಥ ಬಸವರಾಜ ಅನಗವಾಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.