ADVERTISEMENT

ಬಸ್ ಡಿಪೊ: ಇನ್ನೂ ನನಸಾಗದ ಕನಸು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 5:07 IST
Last Updated 25 ಅಕ್ಟೋಬರ್ 2017, 5:07 IST

ಹುನಗುಂದ : ಮೂರು ದಶಕಗಳ ಬೇಡಿಕೆಯ ಇಲ್ಲಿನ ಬಸ್ ಡಿಪೊ ಕಾರ್ಯಾರಂಭದ ಕನಸು ನನಸು ಇನ್ನೂ ನನಸಾಗಿಲ್ಲ. ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳುತ್ತಾರೆ. ಮೊದಲ ದಿನದಿಂದಲೂ ಕುಂಟುತ್ತಲೇ ಸಾಗಿಬಂದ ಕಾಮಗಾರಿ ಹೊಸ ವರ್ಷದ ವೇಳೆಗಾದರೂ ಪೂರ್ಣಗೊಳ್ಳಲಿದೆಯೇ ಎಂಬುದು ಸ್ಥಳೀಯರ ಪ್ರಶ್ನೆ.

ಆರಂಭದಲ್ಲಿ ಕಾಮಗಾರಿ ತೀವ್ರತೆ ಪಡೆದು ಕಾಂಪೌಂಡ್ ಗೋಡೆಯ ಕಾಮಗಾರಿ ಮುಗಿದಿತ್ತು, ಈ ಮಧ್ಯೆ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಕೊನೆಗೆ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡು ಕಾಮಗಾರಿ ಮತ್ತೆ ಆರಂಭವಾಗಿದೆ.

ಇದನ್ನು ಡಾ.ಡಿ.ಎಂ.ನಂಜುಂಡಪ್ಪ ಹಿಂದುಳಿದ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ₨5 ಕೋಟಿ ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ. ಈಗ ಕಂಪೌಂಡ್, ಮುಖ್ಯ ಕಟ್ಟಡ, ವರ್ಕ್ ಶೆಡ್, ಉಪಕರಣ ಮತ್ತು ಇತರ ವಸ್ತುಗಳ ಸಂಗ್ರಹ ಕಟ್ಟಡ ನಿರ್ಮಿಸಲಾಗುತ್ತಿದೆ.

ADVERTISEMENT

ಇನ್ನು ಇಂಧನ ಸಂಗ್ರಹ ಘಟಕ, ಬಸ್ ಸ್ವಚ್ಛತಾ ಘಟಕ, ಸುರಕ್ಷತಾ ಕೋಣೆ, ನೆಲಹಾಸು ನಿರ್ಮಾಣ ಮತ್ತು ಜನರೇಟರ್ ಕೋಣೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಆರಂಭವಾದ ದಿನದಿಂದಲೇ ಸುಮಾರು 70 ಮಾರ್ಗಗಳಿಗೆ ಈ ಘಟಕದಿಂದ ಬಸ್‌ ಹೊರಡುತ್ತವೆ.

ಅಲ್ಲದೇ ಬಸ್ ನಿಲ್ದಾಣದ ಅಭಿವೃದ್ಧಿ, ಅದರ ಮೇಲೆ ನಿರ್ಮಿಸುವ ವಸತಿ ಗೃಹ ಮತ್ತು ನಿರ್ವಾಹಕರು ಮತ್ತು ಚಾಲಕರ ವಿಶ್ರಾಂತಿ ಗೃಹಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅದಕ್ಕೂ ಅನುದಾನ ಮಂಜೂರಿಯಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

‘ಕಾಮಗಾರಿ ಇನ್ನಷ್ಟು ತೀವ್ರಗತಿಯಲ್ಲಿ ನಡೆದು ಈ ಭಾಗದ ಜನರಿಗೆ ಅದರ ಲಾಭ ಸಿಗುವಂತಾಗಬೇಕು’ ಎಂದು ಇಲ್ಲಿನ ನಾಗರಿಕ ಸೇವಾ ಸುಧಾರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಬಿ. ಕಂಬಾಳಿಮಠ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.