ADVERTISEMENT

ಬಾಗಲಕೋಟೆಯಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 10:28 IST
Last Updated 20 ಜೂನ್ 2013, 10:28 IST
ಬಾಗಲಕೋಟೆ ನಗರದಲ್ಲಿ ಬುಧವಾರ ಸಂಜೆ ಧಾರಾಕಾರ ಮಳೆ ಸುರಿಯಿತು.
ಬಾಗಲಕೋಟೆ ನಗರದಲ್ಲಿ ಬುಧವಾರ ಸಂಜೆ ಧಾರಾಕಾರ ಮಳೆ ಸುರಿಯಿತು.   

ಬಾಗಲಕೋಟೆ: ನಗರ ಸೇರಿದಂತೆ ಆಸುಪಾಸು ಬುಧವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಬಾದಾಮಿ, ಅಮೀನಗಡ, ಕಮತಗಿ ಮತ್ತು ಬೀಳಗಿಯಲ್ಲಿ ಕೆಲ ಹೊತ್ತು ತುಂತುರು ಮಳೆಯಾಗಿದೆ.

ಟಿಕೆಟ್ ಇಲ್ಲದೇ ರೈಲು ಪ್ರಯಾಣ!: ಮಳೆಯಿಂದಾಗಿ ಬಾಗಲಕೋಟೆ ನಗರದ ರೈಲು ನಿಲ್ದಾಣದಲ್ಲಿ ವಿದ್ಯುತ್ ವ್ಯತ್ಯಯದ ಜೊತೆಗೆ ಜನರೇಟರ್ ಕೂಡ ಕೈಕೊಟ್ಟ ಕಾರಣ ಇಂಟರ್‌ನೆಟ್ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಹುಬ್ಬಳ್ಳಿ, ವಿಜಾಪುರ, ಸೊಲ್ಲಾಪುರ ಇತರೆಡೆ ಹೋಗಲು ಆಗಮಿಸಿದ್ದ ಪ್ರಯಾಣಿಕರಿಗೆ ಟಿಕೆಟ್ ನೀಡಲು ಸಾಧ್ಯವಾಗದೇ ತೊಂದರೆಯಾಯಿತು.

ಬಸ್‌ಗಳಲ್ಲಿ ನೀಡುವಂತೆ ಕೈಬರಹದ ಟಿಕೆಟ್ ಅನ್ನು ಕೆಲವು ಪ್ರಯಾಣಿಕರಿಗೆ ನೀಡಲಾಯಿತು. ಆದರೆ, ಎಲ್ಲ ಪ್ರಯಾಣಿಕರಿಗೆ ಕೈಬರಹದ ಟಿಕೆಟ್ ನೀಡಲು ಸಾಧ್ಯವಾಗದ ಕಾರಣ ಬಹಳಷ್ಟು ಪ್ರಯಾಣಿಕರಿಗೆ ಟಿಕೆಟ್ ಇಲ್ಲದೇ ರೈಲನ್ನು ಏರಲು ಅವಕಾಶ ಕಲ್ಪಿಸಲಾಯಿತು.

ಬಾಗಲಕೋಟೆ ನಗರದ ಶಾಂತಿ ಆಸ್ಪತ್ರೆ ಎದುರು ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿದುಹೋಗದೇ ರಸ್ತೆ ಮೇಲೆ ಉಕ್ಕಿ ಹರಿದ ಕಾರಣ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಯಿತು.

ರೈತರ ಆತಂಕ: ಜೂನ್ ಮೊದಲ ವಾರದಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾದ ಕಾರಣ ರೈತರು ಹೆಸರು, ಸೋಯಾ ಬಿತ್ತನೆ ಮಾಡಿದ್ದು, ಬೀಜ ಮೊಳಕೆಯೊಡೆಯುತ್ತಿದೆ. ಕೆಲವೆಡೆ ಗಿಡಗಳು ಇದೀಗ ಚಿಗುರೊಡೆಯುತ್ತಿದ್ದು, ಹತ್ತು ದಿನಗಳಿಂದ ಮಳೆಯಾಗದೇ ಇರುವುದರಿಂದ ಬಾದಾಮಿ ಮತ್ತು ಹುನಗುಂದ ತಾಲ್ಲೂಕಿನ ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ. ಬಾಗಲಕೋಟೆ ತಾಲ್ಲೂಕು ಹೊರತುಪಡಿಸಿ ಜಿಲ್ಲೆಯಾದ್ಯಂತ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ.

ಕೃಷ್ಣೆಗೆ ನೀರು: ಬೋಟ್‌ಗೆ ಚಾಲನೆ
ಬನಹಟ್ಟಿ: ನೆರೆಯ ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಇಲ್ಲಿಗೆ ಸಮೀಪ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಇಲ್ಲಿಯ ಬ್ಯಾರೇಜ್ ಮೇಲೆ ನೀರು ಹರಿಯುತ್ತಿರುವುದರಿಂದ ಬುಧವಾರದಿಂದ ಬೋಟ್‌ಗೆ ಚಾಲನೆ ನೀಡಲಾಗಿದೆ.

ಎರಡು ತಿಂಗಳಿಂದ ಸಂಪೂರ್ಣವಾಗಿ ಬತ್ತಿದ ಕೃಷ್ಣಾ ನದಿಯಿಂದ ಈ ಭಾಗದ ಜನರಿಗೆ ಮತ್ತು ಬೆಳೆಗಳಿಗೆ ಸಾಕಷ್ಟು ತೊಂದರೆಯಾಗಿತ್ತು. ಈಗ ರೈತರಲ್ಲಿ ಖುಷಿಯಾಗಿದೆ.

`ಅಥಣಿ ತಾಲ್ಲೂಕಿನ ನದಿ ತೀರದ ಗ್ರಾಮಗಳ ಜನರು ಜಮಖಂಡಿ ತಾಲ್ಲೂಕಿನ ರಬಕವಿ ಹಾಗೂ ಬನಹಟ್ಟಿಗೆ ವ್ಯಾಪಾರದ ಸಲುವಾಗಿ ಬರಲು ಬುಧವಾರದಿಂದ ಬೋಟ್‌ಅನ್ನು ಬಳಸುತ್ತಿದ್ದಾರೆ. ಬುಧವಾರ ಬೆಳಿಗ್ಗೆ 6 ಕ್ಕೆ ಹಿಪ್ಪರಗಿ ಜಲಾಶಯಕ್ಕೆ 35 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ನೀರಿನ ಮಟ್ಟ 520 ಮೀ. ಇದ್ದು ಹೊರ ಹರಿವು 25 ಸಾವಿರ ಕ್ಯೂಸೆಕ್ ಇದೆ' ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದರು.

ಎರಡು ದಿನಗಳಿಂದ ಕೃಷ್ಣಾ ನದಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಬರುತ್ತಿದ್ದು ಅಪಾಯದ ಮಟ್ಟ ಮೀರಿ ಹರಿಯುವ ಸಂಭವ ಇದ್ದು ನದಿ ಪಾತ್ರದ ಗ್ರಾಮಗಳ ಜನರು ಸುರಕ್ಷತೆಯ ಸ್ಥಳಗಳಿಗೆ ಹೋಗಬೇಕೆಂದು ತಹಶೀಲ್ದಾರ್ ಆರ್.ವಿ. ಕಟ್ಟಿ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.