ADVERTISEMENT

ಬಾದಾಮಿ: ಕಾಂಗ್ರೆಸ್‌ನಲ್ಲಿ ಭಿನ್ನಮತ

ಪ್ರಜಾವಾಣಿ ವಿಶೇಷ
Published 9 ಏಪ್ರಿಲ್ 2013, 6:45 IST
Last Updated 9 ಏಪ್ರಿಲ್ 2013, 6:45 IST

ಬಾಗಲಕೋಟೆ: ಬಾದಾಮಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕ ವಿಷಯದಲ್ಲಿ ಸ್ಫೋಟಗೊಂಡ ಅಸಮಾಧಾನ ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಗಳ ನಡುವೆಯೇ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಗುಂಪೊಂದು ಬೆಂಗಳೂರಿಗೆ ತೆರಳಿದ್ದು, ಚಿಮ್ಮನಕಟ್ಟಿಗೆ ಟಿಕೆಟ್ ನೀಡಬೇಕು ಎಂದು ಒತ್ತಡ ಹೇರಿದೆ.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ನೇತೃತ್ವದಲ್ಲಿ ಬೀಳಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಟಿ.ಪಾಟೀಲ ಮತ್ತು ಬಾದಾಮಿ ಕ್ಷೇತ್ರದ ಟಿಕೆಟ್ ವಂಚಿತ ಅಭ್ಯರ್ಥಿ ಬಿ.ಬಿ. ಚಿಮ್ಮನಕಟ್ಟಿ ಮತ್ತು ಮಾಜಿ ಸಚಿವ ಅಜಯಕುಮಾರ ಸರನಾಯಕ, ಜಿ.ಪಂ. ಸದಸ್ಯರಾದ ಡಾ.ಎಂ.ಜಿ. ಕಿತ್ತಲಿ, ಎಫ್.ಆರ್.ಪಾಟೀಲ, ಡಾ. ಎಂ.ಎಚ್.ಚಲವಾದಿ, ಆರ್.ಡಿ. ದಳವಾಯಿ ಮತ್ತಿತರರು ಶನಿವಾರ ರಾತ್ರಿಯೇ ಬೆಂಗಳೂರಿಗೆ ತೆರಳಿದ್ದು, ಭಾನುವಾರ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದಾರೆ.


`ಜಿಲ್ಲೆಯ ಒಟ್ಟು ಏಳು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಿಂದ ಸ್ಪರ್ಧಿಸಲು ಹಳಬರಿಗೆ ಅವಕಾಶ ನೀಡಿರುವುದು ಸೂಕ್ತ. ಆದರೆ, ಬಾದಾಮಿ ಕ್ಷೇತ್ರಕ್ಕೆ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಹೊರತಾಗಿ ಡಾ.ದೇವರಾಜ ಪಾಟೀಲರಿಗೆ ಟಿಕೆಟ್ ಘೋಷಣೆ ಮಾಡಿರುವುದರಿಂದ ಕ್ಷೇತ್ರದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಇದರಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಚಿಮ್ಮನಕಟ್ಟಿ ಅವರಿಗೆ ಕೊನೆಯ ಅವಕಾಶ ನೀಡಬೇಕು' ಎಂದು ಜಿಲ್ಲೆಯ ಮುಖಂಡರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

`ಪಕ್ಷದಿಂದ ಟಿಕೆಟ್ ನೀಡದಿದ್ದರೆ ಸ್ವತಂತ್ರವಾಗಿ ಸ್ಪರ್ಧೆಗಿಳಿಯುವುದಾಗಿ ಚಿಮ್ಮನಕಟ್ಟಿ  ವರಿಷ್ಠರಿಗೆ ಎಚ್ಚರಿಕೆ ನೀಡಿದ್ದು, ನಿಷ್ಠಾವಂತ ಕಾರ್ಯಕರ್ತನಾದ ತಮ್ಮನ್ನು ನಿರ್ಲಕ್ಷಿಸಿರುವುದು ಏಕೆ' ಎಂದು ಪಕ್ಷದ ವರಿಷ್ಠರ ವಿರುದ್ಧ ಹರಿಹಾಯ್ದರು ಎನ್ನಲಾಗಿದೆ.

`ಕುರುಬ ಸಮಾಜದ ಅತ್ಯಧಿಕ ಮತದಾರರು ಇರುವ ಬಾದಾಮಿ ತಾಲ್ಲೂಕಿನ 33 ಹಳ್ಳಿಗಳು ಬೀಳಗಿ ಮತಕ್ಷೇತ್ರಕ್ಕೆ ಒಳಪಡುವುದರಿಂದ ಕುರುಬ ಸಮುದಾಯ ಮುನಿದರೆ ಬೀಳಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೂ ಅಡೆತಡೆ' ಎಂದು ವರಿಷ್ಠರೆದುರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜೆ.ಟಿ.ಪಾಟೀಲ ಅವರನ್ನು `ಪ್ರಜಾವಾಣಿ' ಸಂಪರ್ಕಿಸಿದಾಗ, `ಬೆಂಗಳೂರಿಗೆ ಕುಟುಂಬದೊಂದಿಗೆ ಬಂದಿದ್ದೇನೆ, ಚಿಮ್ಮನಕಟ್ಟಿ ಪರ ಪಕ್ಷದ ವರಿಷ್ಠರನ್ನು ಭೇಟಿ ಮಾಡಿಲ್ಲ' ಎಂದರು.

ಇಬ್ಬರೂ ಕುರುಬರೇ: `ಡಾ.ದೇವರಾಜ ಪಾಟೀಲ ಮತ್ತು ಬಿ.ಬಿ.ಚಿಮ್ಮನಕಟ್ಟಿ ಇಬ್ಬರೂ ಕುರುಬ ಸಮಾಜಕ್ಕೇ ಸೇರಿರುವಾಗ ಸಮಾಜದ ಮತದಾರರು ಯಾರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೂ ಬೆಂಬಲಿಸುತ್ತಾರೆ' ಎಂದು ಕುರುಬ ಸಮಾಜದ ಮುಖಂಡರು ಹೇಳುತ್ತಾರೆ.

ವಕಾಲತು ಸಾಧ್ಯವಿಲ್ಲ: ಟಿಕೆಟ್ ಹಂಚಿಕೆ ಗೊಂದಲ ಕುರಿತು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, `ಬಾದಾಮಿ ಕ್ಷೇತ್ರಕ್ಕೆ ನಾನೂ ಆಕಾಂಕ್ಷಿಯಾಗಿದ್ದ ಕಾರಣ ಚಿಮ್ಮನಕಟ್ಟಿಗೆ ಟಿಕೆಟ್ ಕೊಡಿ ಎಂದು ವರಿಷ್ಠರಿಗೆ ಮನವಿ ಮಾಡಲಾಗದು.
ಬೆಂಗಳೂರಿಗೆ ತೆರಳದೆ ಹುನಗುಂದ ಮತ್ತು ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿಗಳ ಪರ 9ಕ್ಕೂ ಅಧಿಕ ಹಳ್ಳಿಗಳಿಗೆ ಭೇಟಿ ನೀಡಿ ಮತಯಾಚಿಸಿದೆ. ಪಕ್ಷದ ವಕ್ತಾರನಾದ್ದರಿಂದ ಹೈಕಮಾಂಡ್ ನಿಲುವು ಪ್ರಶ್ನಿಸಲಾಗದು, ಟಿಕೆಟ್ ನೀಡಿದವರ ಪರ ಕೆಲಸ ಮಾಡುತ್ತೇನೆ' ಎಂದರು.

ಜೆಡಿಎಸ್‌ಗೆ ಖುಷಿ: ಕಾಂಗ್ರೆಸ್ ಗೊಂದಲಗಳು ಜೆಡಿಎಸ್ ಅಭ್ಯರ್ಥಿ ಮಹಾಂತೇಶ ಮಮದಾಪುರ ಹುರುಪಿಗೆ ಕಾರಣ.
ಈಗಾಗಲೇ ಕ್ಷೇತ್ರದಲ್ಲಿ ಹೆಚ್ಚು ಜನಪ್ರಿಯತೆ ಮತ್ತು ಜನಸಂಪರ್ಕ ಸಾಧಿಸಿರುವ ಮಮದಾಪುರ, ಮತದಾರರ ನೆಚ್ಚಿನ ಅಭ್ಯರ್ಥಿ. ಕ್ಷೇತ್ರದಲ್ಲಿ ಮತದಾನದ ವೇಳೆ ಜಾತಿ ಲೆಕ್ಕಾಚಾರ ನಡೆಯದೇ ಹೋದರೆ ಜೆಡಿಎಸ್‌ಗೆ ವರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

`ಅಧಿಕೃತ ಅಭ್ಯರ್ಥಿ ಗೆಲುವಿಗೆ ಶ್ರಮ'
`ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಯಾವ ಅಭ್ಯರ್ಥಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು `ಬಿ'  ಫಾರ್ಮ್ ನೀಡುತ್ತಾರೋ ಅವರನ್ನು ಬಹುಮತದಿಂದ ಆಯ್ಕೆ ಮಾಡಲು ತಾವು ಬದ್ಧ' ಎಂದು ಕಾಂಗ್ರೆಸ್ ಮುಖಂಡ, ಕೆರೂರು ತಾ.ಪಂ. ಮಾಜಿ ಸದಸ್ಯ ರಮೇಶ ಮತ್ತಿಕಟ್ಟಿ ಮತ್ತು ಇಸ್ಮಾಯಿಲ್ ಖಾಜಿ ತಿಳಿಸಿದರು. `ಹೈಕಮಾಂಡ್ ಯಾರನ್ನು ಕಣಕ್ಕೆ ಇಳಿುತ್ತಾರೆ ಅವರನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದು' ನಗರದಲ್ಲಿ ಭಾನುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಕಾಂಗ್ರೆಸ್ ವರಿಷ್ಠರು  ಸೂಕ್ತ ವ್ಯಕ್ತಿ ಗುರುತಿಸಿ ಅವರ ಜನಪ್ರಿಯತೆ ಮೆಚ್ಚಿ ಟಿಕೆಟ್ ನೀಡುತ್ತಾರೆ ಅವರನ್ನು ಬೆಂಬಲಿಸುತ್ತೇವೆ' ಎಂದರು.
`ನಾಯಕರು ಅಸಮಾಧಾನ ಬಿಟ್ಟು ಕಾಂಗ್ರೆಸ್  ಅಭ್ಯರ್ಥಿ ಗೆಲ್ಲಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತರಲು ಪ್ರಯತ್ನಿಸಬೇಕು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT