ADVERTISEMENT

ಬಿಜೆಪಿ ದಲಿತರ ವೈರಿ: ಬೆಣ್ಣೂರ ಆರೋಪ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 4:56 IST
Last Updated 3 ಏಪ್ರಿಲ್ 2018, 4:56 IST

ಬಾಗಲಕೋಟೆ: ‘ಬಿಜೆಪಿಯಿಂದ ದೇಶದಲ್ಲಿನ ದಲಿತರ ಸ್ವಾಭಿಮಾನ ಹಾಗೂ ಹಕ್ಕುಗಳಿಗೆ ಧಕ್ಕೆ ಬಂದೊದಗಿದೆ’ ಎಂದು ಕಾಂಗ್ರೆಸ್ ಮುಖಂಡ ಮುತ್ತಣ್ಣ ಬೆಣ್ಣೂರ ಆರೋಪಿಸಿದ್ದಾರೆ.‌ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಬಿಜೆಪಿ ಪರಿಶಿಷ್ಟರ ಪರಮ ವೈರಿಯಾಗಿದೆ. ಉತ್ತರ ಪ್ರದೇಶದಲ್ಲಿ ಪರಿಶಿಷ್ಟರಿಗೆ ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿ ರದ್ದುಮಾಡಿದೆ. ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ರದ್ದುಪಡಿಸುವಂತೆ ಸುಪ್ರೀಂಗೆ ಆದೇಶ ಹೊರಡಿಸುವಂತೆ ಮಾಡಿದ್ದಾರೆ. ದಲಿತ ನೌಕರರಿಗೆ ಹಿಂಬಡ್ತಿ ನೀಡುವಂತೆ ಮಾಡಲಾಗಿದೆ. ಸಂವಿಧಾನ ಬದಲಿಸುವ ಮಾತುಗಳನ್ನಾಡುವ ಇಂತವರಿಂದ (ಬಿಜೆಪಿ) ದಲಿತರ ಉದ್ಧಾರ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.‘ಮುಗ್ದ ಜನಾಂಗವನ್ನು ವಂಚಿಸಿ ಚುನಾವಣೆಯಲ್ಲಿ ಲಾಭ ಪಡೆದುಕೊಳ್ಳುವ ನಾಟಕ ರಾಜ್ಯದಲ್ಲಿ ನಡೆಯುವುದಿಲ್ಲ. ಸಭೆ–ಸಮಾರಂಭಗಳಲ್ಲಿ ದಲಿತರ ಬಗ್ಗೆ ಕಾಳಜಿ ತೋರಿಸಿ ನಂತರ ವಿಷಕಾರುವ ಗುಣ ಎಲ್ಲರಿಗೂ ಗೊತ್ತಾಗಿದೆ’ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.