ADVERTISEMENT

ಬಿವಿವಿ ಕಲಾ ಕಾಲೇಜಿಗೆ ನ್ಯಾಕ್ ಭೇಟಿ ಇಂದು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 8:10 IST
Last Updated 17 ಆಗಸ್ಟ್ 2012, 8:10 IST

ಬಾಗಲಕೋಟೆ: ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯಕ್ಕೆ ಇದೇ 17 ಮತ್ತು 18 ರಂದು ನ್ಯಾಕ್ ಸಮಿತಿ ಭೇಟಿ ನೀಡಲಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಆಂಧ್ರಪ್ರದೇಶದ ಉಸ್ಮಾನಿಯಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ತಿರುಪತಿರಾವ್, ತಮಿಳುನಾಡಿನ ಗಾಂಧಿಗ್ರಾಮದ ಗಾಂಧಿ ಗ್ರಾಮ ಗ್ರಾಮೀಣ ಸಂಸ್ಥೆಯ ಪ್ರಾಧ್ಯಾಪಕ ಡಾ.ಎಂ.ಎ.ಸುಧೀರ ಹಾಗೂ ಮುಂಬೈನ ಶೈಲೇಂದ್ರ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ವಿಠ್ಠಲ ಮಾರುತಿ ಇಂಗವಾಳೆ ಅವರನ್ನೊಳಗೊಂಡ ನ್ಯಾಕ್ ಸಮಿತಿ ಆಗಮಿಸಲಿದೆ ಎಂದರು.

ಕಾಲೇಜಿನ ಪ್ರಗತಿಗಾಗಿ ಯುಜಿಸಿಯು 11ನೇ ಯೋಜನಾ ಅವಧಿಯಲ್ಲಿ ಮಹಾವಿದ್ಯಾಲಯಕ್ಕೆ ರೂ.1.22 ಕೋಟಿ ಮಂಜೂರು ಮಾಡಿತ್ತು. ಅದರಲ್ಲಿ ರೂ.47 ಲಕ್ಷ ಬಿಡುಗಡೆಯಾಗಿದೆ. ಮಹಾವಿದ್ಯಾಲಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಂಘವು ರೂ. 45 ಲಕ್ಷ ನೀಡಿದೆ ಎಂದು ತಿಳಿಸಿದರು.

2004-05 ರಲ್ಲಿ ಮೊದಲನೇ ನ್ಯಾಕ್ ಸಮಿತಿ ಸದಸ್ಯರು ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಬಿ ಪ್ಲಸ್, ಪಸ್ಲ್ ಗ್ರೇಡ್ ನೀಡಿತ್ತು. ಈಗ ಭೇಟಿ ನೀಡಲಿರುವ ತಂಡ ಉತ್ತಮ ಗ್ರೇಡ್ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾವಿದ್ಯಾಲಯವು 14 ಬೋಧನಾ ಕೊಠಡಿ ಹಾಗೂ ಪ್ರಯೋಗಾಲಯ, ನಾಲ್ಕು ಕಡೆ ಎಲ್‌ಸಿಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಇತ್ತೀಚಿಗೆ ಇಂಗ್ಲಿಷ್ ಭಾಷಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಗ್ರಂಥಾಲಯದಲ್ಲಿ ವಿವಿಧ ಭಾಷೆಯ 70 ಸಾವಿರ ಗ್ರಂಥಗಳಿವೆ ಎಂದರು.

ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜನೆಗೊಳಪಟ್ಟಿರುವ ಮಹಾವಿದ್ಯಾಲಯದಲ್ಲಿ  ಬಿಎ ವರ್ಗದಲ್ಲಿ 752 ವಿದ್ಯಾರ್ಥಿಗಳು, ಕನ್ನಡ ಮತ್ತು ಇಂಗ್ಲಿಷ್ ಸ್ನಾತಕೋತ್ತರ ವಿಭಾಗದಲ್ಲಿ 65 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 44 ಜನ ಬೋಧಕರು ಮತ್ತು 30 ಜನ ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಕ್ರೀಡಾ ಕ್ಷೇತ್ರದಲ್ಲಿ 55 ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯ ಪ್ರತಿನಿಧಿಸಿದ್ದಾರೆ. ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ ಮೂವರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯದ ರ‌್ಯಾಂಕ್ ಪಡೆದಿದ್ದಾರೆ ಎಂದು ತಿಳಿಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ಮೊರಬದ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಗೌರವ ಕಾರ್ಯದರ್ಶಿ ವೀರಣ್ಣ ಹಲಕುರ್ಕಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.