ADVERTISEMENT

ಬಿಸಿಲ ಬೇಗೆಯಲ್ಲಿ ತಂಪೆರೆದ ವರುಣ

ಬಿರುಗಾಳಿ ಸಹಿತ ಧಾರಾಕಾರ ಮಳೆ-: ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 6 ಮೇ 2014, 10:33 IST
Last Updated 6 ಮೇ 2014, 10:33 IST
ಮಳೆಯಲ್ಲಿ ಹಾಡು ಹಗಲೇ ಕತ್ತಲಾವರಿಸಿ ಮಬ್ಬುಗತ್ತಲಿನಲ್ಲಿಯೇ ವಾಹನಗಳು ದೀಪ ಉರಿಸಿ ಸಂಚರಿಸಬೇಕಾಯಿತು.
ಮಳೆಯಲ್ಲಿ ಹಾಡು ಹಗಲೇ ಕತ್ತಲಾವರಿಸಿ ಮಬ್ಬುಗತ್ತಲಿನಲ್ಲಿಯೇ ವಾಹನಗಳು ದೀಪ ಉರಿಸಿ ಸಂಚರಿಸಬೇಕಾಯಿತು.   

ಕೆರೂರ: ಪಟ್ಟಣದಲ್ಲಿ ಮುಂಜಾನೆ 9 ಗಂಟೆಯಿಂದ ನೆತ್ತಿ ಸುಡುವ ಬಿರು ಬಿಸಿಲು, ನಾಗರಿಕರು ಮೇ ತಿಂಗಳ ಬಿರು ಬಿಸಿಲಿಗೆ ಬಸವಳಿದು ಹೋಗಿರುವ ಜೊತೆಗೆ ಸೆಖೆಯ ಸಂಕಟದಲ್ಲಿ ಬೆವರಿನ ಮುದ್ದೆಯಂತಾಗಿ ಯಾವಾಗ ಸಂಜೆಯಾಗಿತ್ತೋ ಎಂದು ಜಪಿಸುವಂತಾಗಿತ್ತು.

ಆದರೆ ಸೋಮವಾರ ಮಧ್ಯಾಹ್ನ ವಾತಾವರ­ಣ­ದಲ್ಲಿ ಬದಲಾವಣೆ ಕಂಡು ಬಂದಿತು.  ಸೀಮಂತ, ಮದುವೆಯಲ್ಲಿ ಸಿಹಿಯೂಟ ಉಂಡು ಬಂದವರು ಝಳದಿಂದ ಪಾರಾಗುವುದು ಹೇಗೆ ಎಂಬ ಸಂಕಟದಲ್ಲಿದ್ದಾಗಲೇ ಅಂದಾಜು 3 ಗಂಟೆ ಸುಮಾರಿಗೆ ಬಾನ ತುಂಬೆಲ್ಲಾ ಆವರಿಸಿದ್ದ ಕಪ್ಪ­ಡರಿ­ದ ಕರಿ ಮೋಡಗಳ ರಾಶಿಯ ಮಧ್ಯೆ ಗಡಗಡ, ಗುಡುಗಿನ ಸದ್ದು, ಕೋಲ್ಮಿಂಚಿನ ಬೆಳಕಿನ ಸೆಳೆತ ಬಿಸಿಲಿನ ಬೇಗೆಯಲ್ಲಿ ಕಾದ ಭುವಿಗೆ ಮಳೆಯ ಸಿಂಚನವಾದರೆ ಸಂಕಟದಲ್ಲಿದ್ದ ನಾಗರಿ­ಕರ ಮೊಗದಲ್ಲಿ ಅಮೃತ ಸಿಕ್ಕಷ್ಟು ಸಂತಸ, ನೆಮ್ಮದಿ.

ನಂತರ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ಈ ನಡುವೆ ಎದೆ ನಡುಗಿಸುವಂತಹ ಸಿಡಿಲಿನ ‘ಕಡ್‌, ಕಡಲ್‌’ ಸದ್ದು ಮೂರ್ನಾಲ್ಕು ಬಾರಿ ಗ್ರಾಮೀಣ ಪ್ರದೇಶದಲ್ಲಿ ಅಪ್ಪಳಿಸಿದ್ದು ಶಬ್ದದಿಂದ ಅನುಭವಕ್ಕೆ ಬಂದಿತು ಎಂದು ಪಾನ ಅಂಗಡಿಯ ಪುನೀತ ತಮಗಾದ ಅನುಭವ ಹೇಳಿದರು.

ಮನೆಗಳ ಮಾಳಿಗೆ ಹಾಗೂ ಉಪ್ಪರಿಗೆಯಿಂದ ಒಂದೇ ಸಮನೆ ನೀರು ಸುರಿದರೆ, ಹಳ್ಳ,ಕೊಳ್ಳ ಮತ್ತು ಚರಂಡಿ ಗಳು ತುಂಬಿ ಹರಿದವಲ್ಲದೇ ಸ್ಥಳೀಯ ತರಕಾರಿ ಮಾರುಕಟ್ಟೆ ಮಳೆ ನೀರಿನಿಂದ ಆವೃತಗೊಂಡಿತು. ಮಧ್ಯಾಹ್ನವೇ ಏಕಾ ಏಕಿ ಸುರಿದ ಮಳೆಯಿಂದ ಪರದಾಡಿದ ತರಕಾರಿ ವ್ಯಾಪಾರಿಗಳು ತಮ್ಮ ಸಲಕರಣೆಗಳನ್ನು ರಕ್ಷಿಸಿಕೊಳ್ಳು ವಲ್ಲಿ ಹೆಣಗಾಡಿದರು.

ಮಳೆಯಿಂದ ರಾಷ್ಟ್ರೀಯ ಹೆದ್ದಾರಿ (218) ರಲ್ಲಿ ವಾಹನ ಸಂಚಾರ ತೀವ್ರ ಅಸ್ತವ್ಯಸ್ತವಾಗಿತ್ತು. ಕಾರ್ಮೋ­ಡಗಳ ಪರಿ­ಣಾಮ ಮಧ್ಯಾಹವೇ ಮಬ್ಬುಗತ್ತಲು ಆವರಿಸಿ­ದಂತಾಗಿ ಹಗಲು ಹೊತ್ತಿನಲ್ಲೇ ವಾಹನಗಳು ದೀಪ ಹಾಕಿ ಸಂಚರಿಸಬೇಕಾಯಿತು. ಮದುವೆ ಇತರೆ ಮಂಗಲ ಕಾರ್ಯಗಳಿಗೆ ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಸಾಗುತ್ತಿದ್ದ ಪ್ರಯಾಣಿಕರು ಮಳೆಯಲ್ಲಿ ನೆನೆದು ತೊಪ್ಪೆಯಾಗಿದ್ದು ಕಂಡು ಬಂದಿತು.

ಮಳೆ ನೀರಿನ ಸದ್ಬಳಕೆ: ರಭಸದ ಮಳೆಯಲ್ಲಿ ಮನೆ ಮಾಳಿಗೆಯಿಂದ ಜೋರಾಗಿ ಬೀಳುವ ನೀರನ್ನು ಬ್ಯಾರಲ್‌ಗ ಳಲ್ಲಿ ಸಂಗ್ರಹಿಸಿ ಬೇಸಿಗೆಯ ಅವಧಿಯ ಬವಣೆ ತೊಲಗಿಸಲು ನೆಹರುನಗರದ ಗೃಹಿಣಿ ದಾಕ್ಷಾಯಣಿ ಅವರು ಮಳೆ ನೀರಿನ ಸದ್ಬಳಕೆಗೆ ಮುಂದಾಗಿದ್ದು ಗಮನ ಸೆಳೆಯಿತು.

ಇತ್ತ ಪಟ್ಟಣ ಪಂಚಾಯ್ತಿ ಪಟ್ಟಣಿಗರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಹೆಣಗುತ್ತಿರುವಾಗಲೇ ಉತ್ತಮವಾಗಿ (ಅಂದಾಜು 4 ಸೆಂ.ಮೀ) ಸುರಿದ ‘ವರುಣರಾಯ’ ಆಡಳಿತವನ್ನು ಸ್ವಲ್ಪ ಕಾಲ ನಿರಾಳವಾಗಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.