ಬಾಗಲಕೋಟೆ: ಬೆಳಗುತ್ತಿರುವ ವಿದ್ಯುತ್ ದೀಪ, ತಿರುಗುತ್ತಿ ರುವ ಫ್ಯಾನ್, ಕಸ ಗುಡಿಸಿ, ನೆಲ ಸ್ವಚ್ಛಗೊಳಿಸಿ ಸಾಹೇಬರ ಆಗಮನದ ನಿರೀಕ್ಷೆಯಲ್ಲಿ ಜವಾನರು, ಅವಸರದಲ್ಲಿ ಸ್ನಾನ ಮುಗಿಸಿ ನೇರವಾಗಿ ಕಚೇರಿಗೆ ಹಾಜರಾದ ಸಿಬ್ಬಂದಿ, ಹೋಟೆಲ್‌ನಲ್ಲಿ ತಿಂಡಿತಿನ್ನುಲು ಮುಗಿಬಿದ್ದ ಸಿಬ್ಬಂದಿ. ಕೆಲಸದ ನಿಮಿತ್ತ ಬಾಗಿಲಲ್ಲಿ ಗಂಟೆಗಟ್ಟಲೆ ಕಾದು ನಿಂತಿರುವ ಸಾರ್ವಜನಿಕರು.
ಇದು ನವನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಬೆಳಿಗ್ಗೆ 8ಗಂಟೆಗೆ ಕಂಡುಬಂದ ಚಿತ್ರಣ. ಬೇಸಿಗೆ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡಿರುವ ರಾಜ್ಯ ಸರ್ಕಾರ ಕೆಲಸದ ಅವಧಿಯನ್ನು ಬೆಳಿಗ್ಗೆ 8ರಿಂದ ಮಧ್ಯಹ್ನಾ 1.30ಕ್ಕೆ ಮಿತಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಸೋಮವಾರ `ಪ್ರಜಾವಾಣಿ~ ಪ್ರತಿನಿಧಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ವಿವಿಧ ಕಚೇರಿಗಳಿಗೆ ಭೇಟಿ ನೀಡಿದಾಗ ಸಮಯಕ್ಕೆ ಸರಿಯಾಗಿ ಸರ್ಕಾರಿ ಅಧಿಕಾರಿ ಗಳು ಕಚೇರಿಗೆ ಹಾಜರಾಗದೇ ಇರುವುದು ಪ್ರತ್ಯಕ್ಷವಾಗಿ ಕಂಡುಬಂದಿತು.
ಯಾವಾವ ಕಚೇರಿಗೆ ಭೇಟಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿ.ಪಂ. ಉಪಕಾರ್ಯದರ್ಶಿ, ಬಿಸಿಎಂ ಕಚೇರಿ, ಸಮಾಜ ಕಲ್ಯಾಣಾಧಿಕಾರಿ ಕಚೇರಿ, ಅಬಕಾರಿ ಉಪ ಆಯುಕ್ತರ ಕಚೇರಿ, ಯೋಜನಾ ನಿರ್ದೇಶಕರ ಕಚೇರಿ, ಜಿ.ಪಂ. ಕಾರ್ಯಪಾಲಕ ಎಂಜಿನಿಯರ್ ಕಚೇರಿಗಳಿಗೆ ಸೋಮವಾರ ಬೆಳಿಗ್ಗೆ 8ರಿಂದ 9 ಗಂಟೆ ಅವಧಿಯಲ್ಲಿ ಭೇಟಿ ನೀಡಲಾಯಿತು.
ಈ ಸಂದರ್ಭದಲ್ಲಿ ಯಾವೊಬ್ಬ ಅಧಿಕಾರಿಗಳು ಕಚೇರಿಗೆ ಆಗಮಿಸಿರಲಿಲ್ಲ, ಕೇವಲ ಜವಾನರು, ಗುಮಾಸ್ತರು, ಎಫ್‌ಡಿಎ, ಎಸ್‌ಡಿಎ, ಅಕೆಕಾಲಿಕ ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಿರುವುದು ಕಂಡುಬಂತು. ಇನ್ನು ಕೆಲ ಕಚೇರಿಗಳಿಗೆ ಹಾಜರಾಗಿದ್ದ ಸಿಬ್ಬಂದಿ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಚಹ- ತಿಂಡಿ ತಿನ್ನಲು ಜಿಲ್ಲಾಡಳಿತ ಭವನದಲ್ಲಿರುವ ಕ್ಯಾಂಟೀನ್‌ಗೆ ಹೋಗಿರುವುದು ತಿಳಿದುಬಂದಿತು.
ಕೆಲಸದ ಅವಧಿ ಬದಲಾವಣೆ ಆದೇಶ ಜಾರಿಯಾಗಿ 9 ದಿನ ಕಳೆದರೂ ಇನ್ನೂ ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳು ವಿಳಂಬವಾಗಿ ಒಂಬತ್ತು, ಹತ್ತು ಗಂಟೆಗೆ ಒಬ್ಬೊಬ್ಬರಾಗಿ ಆಗಮಿಸುತ್ತಿರುವುದು ಕಂಡುಬಂದಿತು.
ಜಿಲ್ಲಾಡಳಿತ ಭವನದಲ್ಲೇ ಇರುವ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರದ ಕಚೇರಿಯ ಬಾಗಲನ್ನೇ ತೆರೆದಿರಲಿಲ್ಲ, ಇದೇ ಕಚೇರಿಗೆ ಸಕಾಲಕ್ಕೆ ಆಗಮಿಸಿದ್ದ ಮಹಿಳಾ ಉದ್ಯೋಗಿಯೊಬ್ಬರು ಬಾಗಿಲಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಕಂಡುಬಂದಿತು. ಮತ್ತೆ ಕೆಲ ಕಚೇರಿಗಳಲ್ಲಿ ಸಿಬ್ಬಂದಿ ದಿನಪತ್ರಿಕೆಗಳನ್ನು ಓದುವುದರಲ್ಲಿ ತಲ್ಲೆರಾಗಿರುವುದು ಕಂಡುಬಂದಿತು.
ಸಿಬ್ಬಂದಿಗೇ ಒಗ್ಗದ ಬದಲಾವಣೆ: ಈ ಸಂದರ್ಭದಲ್ಲಿ ಕೆಲ ಸರ್ಕಾರಿ ಸಿಬ್ಬಂದಿಗಳನ್ನು (ಹೆಸರನ್ನು ಬರೆಯಬೇಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರ ಹೆಸರನ್ನು ಬರೆಯ ಲಾಗಿಲ್ಲ) `ಪ್ರಜಾವಾಣಿ~ ಮಾತನಾಡಿಸಿದಾಗ, ಕಚೇರಿ ಕೆಲಸದ ಅವಧಿ ಬದಲಾವಣೆ ಮಾಡಿರುವುದರಿಂದ ಯಾವುದೇ ಪ್ರಯೋ ಜವಿಲ್ಲ, ಬೆಳಿಗ್ಗೆ ಬೇಗನೆ ಎದ್ದು ಅವಸರದಲ್ಲಿ ಬರಬೇಕಾಗುತ್ತದೆ, ಇನ್ನೂ ಮಧ್ಯಾಹ್ನ 1.30ಕ್ಕೆ ಉರಿ ಬಿಸಿಲಿನಲ್ಲಿ ಕಚೇರಿಯಿಂದ ಮನೆಗೆ ಹೋಗಬೇಕಾಗುತ್ತದೆ ಎಂದರು.
ಬೇಸಿಗೆ ದಿನವಾಗಿರುವುದರಿಂದ ರಾತ್ರಿ ವೇಳೆ ಸರಿಯಾಗಿ ನಿದ್ರೆ ಬರುವುದಿಲ್ಲ, ಮುಂಜಾವಿನಲ್ಲಿ ವಾತಾವರಣ ಸ್ವಲ್ಪ ತಂಪಾಗಿರು ವುದರಿಂದ ನಿದ್ರೆ ಬರುತ್ತದೆ. ಬೆಳಿಗ್ಗೆ 8 ಗಂಟೆಗೆ ಕಚೇರಿಗೆ ಬರಬೇಕಾಗಿರುವುದರಿಂದ 6 ಗಂಟೆಗೆ ಏಳ ಬೇಕಾಗುತ್ತದೆ.
ನಿದ್ರೆಯೂ ಸರಿಯಾಗಿ ಆಗಲ್ಲ, ಮನೆಯಲ್ಲಿ ಚಹ-ತಿಂಡಿಯನ್ನು ತಿಂದು ಬರಲು ಆಗುವುದಿಲ್ಲ, ಮಧ್ಯಾಹ್ನದ ಊಟವೂ ಸಮಯಕ್ಕೆ ಸರಿಯಾಗಿ ಆಗಲ್ಲ, ಒಟ್ಟಾರೆ ಕೆಲಸದ ಅವಧಿ ಬದಲಾವಣೆಯಿಂದ ಸರ್ಕಾರಿ ಸಿಬ್ಬಂದಿಗೆ, ಸಾರ್ವಜನಿಕರಿಗೆ ಅಂತಹ ಯಾವುದೇ ಅನುಕೂಲವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕಟ್ಟುನಿಟ್ಟಿನ ಸೂಚನೆ: ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಜಿ.ಪಾಟೀಲ ಅವ ರನ್ನು ಮಾತನಾಡಿಸಿದಾಗ, ಸಮಯಕ್ಕೆ ಸರಿಯಾಗಿ ಅಧಿಕಾರಿ ಗಳು ಕಚೇರಿಗೆ ಹಾಜರಾಗಲೇ ಬೇಕು, ಈ ವಿಯಷದಲ್ಲಿ ಯಾವುದೇ ಸಬೂಬು ನೀಡುವಂತಿಲ್ಲ, ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಜಿಲ್ಲಾ ಪಂಚಾಯಿತಿಯ ಎಲ್ಲಾ ಇಲಾಖೆ ಸಿಬ್ಬಂದಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.
ವ್ಯತಿರಿಕ್ತ ಪರಿಣಾಮ: ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲ ವಾಗಲಿ ಎಂದು ಜಾರಿಯಾಗಿರುವ ಹೊಸ ಕಾಲಾವಧಿಯಿಂದ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ತತ್ತರಿಸಿರುವ ಈ ಸಂದರ್ಭದಲ್ಲಿ ಸರ್ಕಾರಿ ಸಿಬ್ಬಂದಿ ಹೆಚ್ಚು ಸಮಯ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ. ಆದರೆ ಎಂದಿನಂತೆ 10 ಗಂಟೆಗೆ ಆಗಮಿಸುವ ಅಧಿಕಾರಿಗಳು ಮತ್ತೆ ಮಧ್ಯಾಹ್ನಕ್ಕೆ ಮನೆಗೆ ತೆರಳುವುದರಿಂದ ಸಾರ್ವಜನಿಕರ ಅಸಮಾದಾನಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.