ADVERTISEMENT

ಭಾಷೆ ಜೀವನದ ಕ್ರಮ: ಥೋರಟ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 6:50 IST
Last Updated 15 ಮಾರ್ಚ್ 2011, 6:50 IST
ಭಾಷೆ ಜೀವನದ ಕ್ರಮ: ಥೋರಟ್
ಭಾಷೆ ಜೀವನದ ಕ್ರಮ: ಥೋರಟ್   

ಇಳಕಲ್: ಭಾಷೆ ಕೇವಲ ಸಂವಹನ ಸಾಧನ ಮಾತ್ರವಲ್ಲ. ಅದು ಒಂದು ಜೀವನ ಕ್ರಮ, ಒಂದು ಸಂಸ್ಕೃತಿಯೂ ಹೌದು. ದೇಶದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹಿನ್ನಡೆಯಾದರೆ ಅದರ ದುಷ್ಪರಿಣಾಮ ನಮ್ಮ ಸಂಸ್ಕೃತಿ ಹಾಗೂ ಪರಂಪರೆಗೂ ತಟ್ಟುತ್ತದೆ. ದೇಶದ ವೈವಿಧ್ಯತೆ ನಾಶವಾಗುತ್ತದೆ ಎಂದು ಪುಣೆಯ ಇಂಗ್ಲಿಷ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಅಶೋಕ ಥೋರಟ್ ಅಭಿಪ್ರಾಯಪಟ್ಟರು.

ಅವರು ಸೋಮವಾರ ನಗರದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಎಸ್.ವಿ.ಎಂ. ಕಲೆ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ದಲ್ಲಿ ಆಯೋಜಿಸಿದ ವಿಚಾರ ಸಂಕಿರಣ ವಸಾಹತೋತ್ತರ ನಂತರ ಭಾರತೀಯ ಭಾಷೆಗಳು’ ವಿಚಾರ ಸಂಕಿರಣದಲ್ಲಿ ಆಶಯ ಭಾಷಣ ಮಾಡಿದರು.ವಸಾಹತೋತ್ತರ ಭಾರತದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಸಾಹಿತ್ಯ ಸಮೃದ್ಧವಾಗಿ ಬೆಳೆದಿದ್ದರೂ, ಜಾಗತಿಕ ಮಟ್ಟದಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ವಾಣಿಜ್ಯ ಕ್ಷೇತ್ರದ ಅವಶ್ಯಕತೆಗಳನ್ನು ಪೂರೈಸಲು ಅಸಮರ್ಥವಾದ ಹಿನ್ನೆಲೆಯಲ್ಲಿ ಇಂಗ್ಲಿಷ್ ಭಾಷೆಯ ನಾಗಲೋಟ ಮುಂದುವರಿದಿದೆ.

ಪರಿಣಾಮವಾಗಿ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವ ಜನರ ಪ್ರತಿಶತಃ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಯುತ್ತಿದೆ ಎಂದರು.ಕನ್ನಡ, ಮರಾಠಿ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಜ್ಞಾನ ಸೃಷ್ಟಿಸಿ, ಈ ಭಾಷೆಗಳಿಗೆ ಉದ್ಯೋಗ ದೊರಕಿಸಿಕೊಡುವ ಸಾಮರ್ಥ್ಯ ತಂದು ಕೊಡಬೇಕಾಗಿದೆ. ಭಾಷೆಗಳ ಬೆಳವಣಿಗೆ ದೃಷ್ಟಿಯಿಂದ ಭಾಷೆಗಳ ನಡುವೆ ಕೊಡುಕೊಳ್ಳುವಿಕೆ ನಡೆಯುತ್ತಲೇ ಇರುತ್ತದೆ. ಆಗಲೇ ಭಾಷೆಗಳು ಸಮೃದ್ಧವಾಗಿ ಬೆಳೆಯುತ್ತವೆ. ವಸಾಹತೋತ್ತರ ಕಾಲಘಟ್ಟದಲ್ಲಿ ಇಂಗ್ಲಿಷನೊಂದಿಗೆ ಪ್ರಾದೇಶಿಕ ಭಾಷೆಗಳು ಕೊಡುಕೊಳ್ಳುವಿಕೆ ಮಾಡಿಕೊಂಡು ಬಂದಿವೆ ಎಂದು ಹೇಳಿದರು.  

  ಇನ್ನೊಂದು ವಿಚಾರ ಸಂಕಿರಣ ‘ಸುಸ್ಥಿರ ಘನ ತ್ಯಾಜ್ಯ ನಿರ್ವಹಣೆ’ ಕುರಿತು ಆಶಯ ಭಾಷಣ ಮಾಡಿದ ಬಾಗಲಕೋಟೆ ಬಸವೇಶ್ವರ  ಎಂಜಿನಿಯರಿಂಗ್ ಪ್ರಾಧ್ಯಾಪಕ ಡಾ.ಸಿ.ಬಿ. ಶಿವಯೋಗಿಮಠ, 2003 ರಲ್ಲಿ ಸುಪ್ರೀಂ ಕೋರ್ಟ್ ಆದೇಶವು, ಘನತ್ಯಾಜ್ಯ ನಿರ್ವಹಣೆಯಲ್ಲಿ ಸ್ಥಳೀಯ ಸಂಸ್ಥೆಗಳ ತೋರಬೇಕಾದ ಆಸ್ಥೆಯ ಬಗ್ಗೆ ವಿವರವಾಗಿ ತಿಳಿಸಿದೆ. ಆಡಳಿತದಲ್ಲಿ ದಕ್ಷತೆ ಹಾಗೂ ಬದ್ಧತೆ ಇದ್ದಲ್ಲಿ ಮಾತ್ರ ನಗರಗಳು ಸ್ವಚ್ಛವಾಗಿರುತ್ತವೆ. ಜನಸಂಖ್ಯೆ ಹೆಚ್ಚಳ ಹಾಗೂ ಜನರ ಕೊಳ್ಳುವ ಸಾಮಾರ್ಥ್ಯವು ತ್ಯಾಜ್ಯದ ಪ್ರಮಾಣ ಹೆಚ್ಚಲು ಕಾರಣವಾಗಿದೆ ಎಂದರು.

ಗುರು ಮಹಾಂತ ಸ್ವಾಮೀಜಿ, ಇತರ ಭಾಷೆಗಳಿಗಿಂದ ಇಂಗ್ಲಿಷ್ ಬಲ್ಲವರು ಹೆಚ್ಚು ನಾಗರಿಕರು, ಇತರರು ಕಡಿಮೆ ಎನ್ನುವ ಕೀಳರಿಮೆ, ಭ್ರಮೆಯಿಂದ ಹೊರಬರಬೇಕು. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮವನ್ನು ನಂತರದ ವ್ಯಾಸಂಗದಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಓದುವದನ್ನು ಕಡ್ಡಾಯ ಮಾಡಿ ಎಂದು ಸರಕಾರವನ್ನು ಕೋರಿದರು.

ಡಾ.ಮಹಾಂತ ಸ್ವಾಮೀಜಿ ವಿಚಾರ ಸಂಕಿರಣ ಉದ್ಘಾಟಿಸಿದರು. ಸಂಘದ ಕಾರ್ಯದರ್ಶಿ ಅಶೋಕ ಬಿಜ್ಜಲ ಅಧ್ಯಕ್ಷತೆ ವಹಿಸಿದ್ದರು. ಶಿವಪ್ಪ ಮ್ಯಾಗೇರಿ, ಎನ್.ಎಲ್. ಕನ್ನೂರ, ನಗರಸಭೆ ಅಧ್ಯಕ್ಷ ವೆಂಕಟೇಶ ಗುಡಗುಂಟಿ, ಗ್ರಾನೈಟ್ ಫ್ಯಾಕ್ಟರಿ ಮಾಲೀಕರ ಸಂಘದ  ಅಧ್ಯಕ್ಷ ಮಂಜುನಾಥ ಶೆಟ್ಟರ್ ಉಪಸ್ಥಿತರಿದ್ದರು.ಪ್ರೊ.ಶಿಲ್ಪಾ ರಾಯ್ಕರ ಪ್ರಾರ್ಥನಾ ಗೀತೆ ಹಾಡಿದರು. ಪ್ರಾಚಾರ್ಯ ಆರ್.ಎಂ. ಶಿವಪೂಜಿಮಠ ಸ್ವಾಗತಿಸಿ ದರು. ಪ್ರೊ.ಶಂಭು ಬಳಿಗಾರ ಪರಿಚ ಯಿಸಿದರು. ಪ್ರೊ.ಎಸ್.ಎಸ್. ಅವಟಿ ಸಂದೇಶ ವಾಚಿಸಿದರು. ಪ್ರೊ.ಪಿ.ಎಸ್. ಕಂದಗಲ್ ನಿರೂಪಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.