ADVERTISEMENT

ಮಣ್ಣು ತಿಳಿದವನೇ ಒಕ್ಕಲಿಗ: ಕಣೇರಿ ಶ್ರೀ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 4:40 IST
Last Updated 16 ಸೆಪ್ಟೆಂಬರ್ 2011, 4:40 IST
ಮಣ್ಣು ತಿಳಿದವನೇ ಒಕ್ಕಲಿಗ: ಕಣೇರಿ ಶ್ರೀ
ಮಣ್ಣು ತಿಳಿದವನೇ ಒಕ್ಕಲಿಗ: ಕಣೇರಿ ಶ್ರೀ   

ಜಮಖಂಡಿ: ಒಕ್ಕಲುತನ ಮಣ್ಣಿನ ಮೇಲೆ ಅವಲಂಬಿಸಿದೆ. ಮಣ್ಣು ತಿಳಿದವನೇ ಒಕ್ಕಲಿಗ. ಒಕ್ಕಲುತನವನ್ನು ಪ್ರೀತಿಯಿಂದ ಮತ್ತು ಮನಸ್ಸಿ ನಿಂದ ಮಾಡುವುದೇ ಅಧ್ಯಾತ್ಮ. ಒಕ್ಕಲಿಗರೆಲ್ಲರೂ ಅಧ್ಯಾತ್ಮಿಗಳು ಎಂದು ಕೊಲ್ಹಾಪುರ ಕಣೇರಿಯ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ನುಡಿದರು.

ಜಮಖಂಡಿಯ ಐತಿಹಾಸಿಕ ಪೋಲೊ ಮೈದಾನದಲ್ಲಿ ನಡೆಯುತ್ತಿರುವ ವಿಜಾಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರ ಅಧ್ಯಾತ್ಮಿಕ ಪ್ರವಚನ ನಿಮಿತ್ತ ಗುರುವಾರ ಏರ್ಪಡಿಸಿದ್ದ `ಕೃಷಿ ದರ್ಶನ~ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಆಧ್ಯಾತ್ಮಿಕವಾಗಿ ಕೃಷಿ ಚಟುವಟಿಕೆಗಳನ್ನು ಕೈಕೊಳ್ಳಬೇಕು. ಭೂಮಿಯಲ್ಲಿ ಬೆಳೆದು ನಿಂತ ಬೆಳೆ ಒಕ್ಕಗಲಿಗರ ಜೊತೆಗೆ ಮಾತನಾಡುವ ಭಾಷೆ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಒಕ್ಕಲಿಗರ ಅಧ್ಯಾತ್ಮ ಇರಬೇಕು. ಉದರ ನಿರ್ವಹಣೆ, ಮಕ್ಕಳ ಶಿಕ್ಷಣ, ಮನೆಮಾರು ನಡೆಸುವುದು ಒಕ್ಕಲುತನದ ಉದ್ದೇಶ ಎಂದರು.

ಮಣ್ಣಿನ ಬಣ್ಣದಲ್ಲಿ ಫಲವತ್ತತೆ ಇಲ್ಲ. ರಸಾಯನಿಕ, ಜೈವಿಕ, ಭೌತಿಕ ಫಲವತ್ತತೆ ಇದ್ದರೆ ಮಣ್ಣು ಸಮೃದ್ಧವಾಗಿರುತ್ತದೆ. ಬೆಳೆಗಳಿಗೆ ಬೇಕಾಗುವ 16 ಪ್ರಕಾರದ ಪೋಷಕಾಂಶಗಳು ಮಣ್ಣಿನ ರಸಾಯನಿಕ ಫಲವತ್ತತೆಯನ್ನು ನಿರ್ಧರಿಸುತ್ತವೆ. ಜೈವಿಕ ಫಲವತ್ತತೆಯನ್ನು ಉಳಿಸಲು ಬೆಳೆಗಳನ್ನು ಕಾಲ ಕಾಲಕ್ಕೆ ಬದಲಾಯಿಸಬೇಕು ಬೇಕು ಎಂದು ಹೇಳಿದರು.

ಮಣ್ಣು ಹರಿದು ಹೋಗದಂತೆ ಜಮೀನಿನಲ್ಲಿ ಬದುಗಳನ್ನು ನಿರ್ಮಿಸಿ ಬದುಗಳ ಮೇಲೆ ಗಿಡಗಳನ್ನು ನೆಡಬೇಕು. ಗಿಡಗಳು ಗಾಳಿಯನ್ನು ತಡೆಗಟ್ಟಲು ಸಹಾಯಕ. ಗಿಡಗಳನ್ನು ಎತ್ತರಕ್ಕೆ ಬೆಳೆಸುವುದರ ಜೊತೆಗೆ ಗಿಡದ ಟೊಂಗೆಗಳ ನಡುವೆ ನಿರ್ದಿಷ್ಟ ಅಂತರವನ್ನು ಕಾಪಾಡುವುದರಿಂದ ಅವು  ಬೆಳೆ ಚೆನ್ನಾಗಿ ಬೆಳೆಯುತ್ತದೆ ಎಂದು ತಿಳಿಸಿದರು.

ಜಮೀನಿಗೆ `ಉದರ~ ಹಸಿ ಮಾತ್ರಬೇಕು. ಅತಿಯಾಗಿ ನೀರು ನಿಲ್ಲಿಸಬಾರದು. ನೀರು ನಿಂತು ಗಾಳಿ ಇಲ್ಲದಾಗಿ ಬೆಳೆಯ ಬೇರುಗಳಿಗೆ ಉಸಿರಾಡಲು ಸಾಧ್ಯವಾಗುವುದಿಲ್ಲ. ಮಣ್ಣಿ ನಲ್ಲಿರುವ ಅಸಂಖ್ಯಾತ ಸೂಕ್ಷ್ಮ ಜೀವಾಣುಗಳನ್ನು ಜೋಪಾನ ಮಾಡಲು, ಜೈವಿಕ ಫಲವತ್ತತೆ ಕಾಪಾಡಲು ಹಿತಮಿತವಾಗಿ ನೀರು ಉಣಿಸಬೇಕು.

ದೇಶಿ ಬೀಜಗಳನ್ನು ಬಳಸಬೇಕು. ನಮ್ಮ ಜಮೀನಿನಲ್ಲಿ ಬೆಳೆದ ಬೀಜಗಳನ್ನು ಬೇರೆಯವರ ಜಮೀನಿನಲ್ಲಿ ಬೆಳೆದ ಬೀಜಗಳೊಂದಿಗೆ ಪ್ರತಿ 2-3 ವರ್ಷಕ್ಕೊಮ್ಮೆ ಬದಲಾಯಿಸಿಕೊಳ್ಳಬೇಕು. ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಒಕ್ಕಲುತನ ಅವಲಂಬಿತರ ಸಂಖ್ಯೆ ಕಡಿಮೆ  ಮಾಡಬೇಕು. ಸಂಪೂರ್ಣ ಸಾವಯವ ಕೃಷಿ ಅಳವಡಿಸಿಕೊಂಡು ವಿಷಮುಕ್ತ ಆಹಾರಧಾನ್ಯ ಬೆಳೆಯಬೇಕು. ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಬೇಕು ಎಂದು ನುಡಿದರು.

ಮಿರಜನ ಕೋಳೆಕರ ಮಠದ ರುದ್ರಪಶುಪತಿ ಶ್ರೀಗಳು ಹಾಗೂ ಜಮಖಂಡಿಯ ಕಲ್ಯಾಣ ಮಠದ ಗೌರಿಶಂಕರ ಶ್ರೀಗಳು ಆಶೀರ್ವಚನ ನೀಡಿದರು. ಮೈಗೂರಿನ ಶಿವಾನಂದ ಮಠದ ಮಲ್ಲಯ್ಯ ಶ್ರೀಗಳು ಪರಿಚಯಿಸಿದರು. ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ಮಾತನಾಡಿದರು.

ಮಾಜಿ ಕೇಂದ್ರ ಸಚಿವ ಸಿದ್ದು ನ್ಯಾಮಗೌಡ, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಆದ್ಯಕ್ಷ ಜಗದೀಶ ಗುಡಗುಂಟಿ, ಏಗಪ್ಪ ಸವದಿ ತಮ್ಮ ಅನಿಸಿಕೆ ಹಂಚಿಕೊಂಡರು. ಆಕಾಶವಾಣಿ ಕಲಾವಿದ ಶಿವಕುಮಾರ ಹಿರೇಮಠ, ಸರಸ್ವತಿ ಅಬರದ, ಚೇತನಾ ಪಾಟೀಲ `ರೈತಗೀತೆ~ ಹಾಡಿದರು. ಡಾ.ಬಿ.ಬಿ.ಶಿರಡೋಣಿ  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.