ADVERTISEMENT

ಮದ್ಯದಂಗಡಿಗಳ ತೆರವಿಗಾಗಿ ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 5:11 IST
Last Updated 20 ಅಕ್ಟೋಬರ್ 2017, 5:11 IST

ಜಮಖಂಡಿ: ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ ಅಕ್ರಮ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ವಿವಿಧ ಮಹಿಳಾ ಸಂಘಟನೆಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 4ನೇ ದಿನವಾದ ಗುರುವಾರವೂ ಮುಂದುವರಿದಿತ್ತು.

ಗ್ರಾಮದಲ್ಲಿ ಒಂದು ಹಾಗೂ ತೊದಲಬಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಚಿಕ್ಕಲಕಿ ಕ್ರಾಸ್‌ ರಸ್ತೆ ಪಕ್ಕದ ಕೃಷಿ ಜಮೀನಿನಲ್ಲಿ ತೆರೆದ ಎರಡು ಸೇರಿದಂತೆ ಒಟ್ಟು ಮೂರು ಮದ್ಯದಂಗಡಿಗಳ ತೆರವುಗೊಳಿಸುವಂತೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.

ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಮಂತ ಚೌರಿ ಅವರು ದೂರವಾಣಿ ಮೂಲಕ ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿಯೊಂದಿಗೆ ಈ ಕುರಿತು ಮಾತನಾಡಿದಾಗ ಇಲಾಖೆಯ ನಿಯಮಾವಳಿಗಳ ಪ್ರಕಾರ ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಗಿದೆ ಎಂಬ ಉತ್ತರ ನೀಡಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆಯಿತು.

ADVERTISEMENT

ವಾಣಿಜ್ಯ ಉಪಯೋಗಕ್ಕೆ ಕೃಷಿ ಜಮೀನು ಬಳಸಿಕೊಳ್ಳಬಾರದು ಎಂಬ ಸರ್ಕಾರದ ನಿಯಮದ ಉಲ್ಲಂಘನೆ ಮಾಡಲಾಗಿದೆ. ಆದಾಗ್ಯೂ, ಅಬಕಾರಿ ಇಲಾಖೆಯ ನಿಯಮಾವಳಿ ಪ್ರಕಾರ ಅನುಮತಿ ನೀಡಲಾಗಿದೆಎಂಬ ಅಧಿಕಾರಿಗಳ ಹೇಳಿಕೆ ಎಷ್ಟು ಸಮಂಜಸ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಗೀತಾ ಗಗನಮಲಿ, ಭಾಗವ್ವ ಕೋಳೆಕರ, ಶಾರವ್ವ ಭಜಂತ್ರಿ, ಸಾವಿತ್ರಿ ಹರಿಜನ, ಭರತವ್ವ ಹರಿಜನ, ಮಹಾದೇವಿ ಚೌರಿ, ಹುಲಗೆವ್ವ ಭಜಂತ್ರಿ, ಮೀನಾಕ್ಷಿ ಸಿಕ್ಕಲಗಾರ, ನೀಲವ್ವ ಹರಳೆ, ಕಲಾವತಿ ಹುಬ್ಬಳ್ಳಿ, ಕಸ್ತೂರಿ ಹುಬ್ಬಳ್ಳಿ ಭಾಗವಹಿಸಿದ್ದರು.

ನೋಟಿಸು: ಧರಣಿ ಸತ್ಯಾಗ್ರಹ ಸ್ಥಳಕ್ಕೆ ತಹಶೀಲ್ದಾರ್‌ ಪ್ರಶಾಂತ ಚನಗೊಂಡ ಗುರುವಾರ ಭೇಟಿ ನೀಡಿ ಧರಣಿ ನಿರತರೊಂದಿಗೆ ಮಾತನಾಡಿದರು. ಕೃಷಿ ಜಮೀನನ್ನು ವಾಣಿಜ್ಯ ಬಳಕೆಗಾಗಿ ಪರಿವರ್ತಿಸಿಕೊಂಡ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ. ಹಾಗಾಗಿ ಮದ್ಯದಂಗಡಿ ಮಾಲೀಕರಿಗೆ ಆ ಕುರಿತು ನೋಟಿಸು ಜಾರಿ ಮಾಡುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ರೈತ ಸಂಘದ ಮುಖಂಡ ಈರಪ್ಪ ಹಂಚಿನಾಳ ಧರಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿದರು. ಗಣೇಶ ಬಡಿಗೇರ, ಪ್ರಕಾಶ ಕೋಲಾರ, ಲಕ್ಷ್ಮಣ ಹರನಾಳ, ಸುಧೀರ ಭಜಂತ್ರಿ, ಸಂತೋಷ ಚೌರಿ, ಭೀಮಸಿ ಜಾನೋಜಿ, ಈರಪ್ಪ ಚೌರಿ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.