ADVERTISEMENT

ಮಲಪ್ರಭಾ ಪ್ರವಾಹ: ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 6:55 IST
Last Updated 21 ಸೆಪ್ಟೆಂಬರ್ 2011, 6:55 IST

ಕೆರೂರ: ಮಹಾರಾಷ್ಟ್ರದಲ್ಲಾದ ಅತಿವೃಷ್ಟಿಯಿಂದಾಗಿ ಮಲಪ್ರಭಾ ನದಿ ಉಕ್ಕಿ ಹರಿದು, ನದಿ ಪಾತ್ರದ ಹೊಲಗದ್ದೆಗಳು ಜಲಾವೃತವಾಗಿದ್ದವು. ಪ್ರವಾಹ ಪೀಡಿತ ಪ್ರದೇಶಗಳಿಗೆ ತಹಸೀಲ್ದಾರ ಮಹೇಶ ಕರ್ಜಗಿ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ನಡೆಸಿದರು.

ಮಲಪ್ರಭಾ ನದಿಯ ನೆರೆಹಾವಳಿಯಿಂದ ಹಾಗನೂರ, ಆಲೂರ ಎಸ್.ಕೆ,  ತಳಕವಾಡ, ಗೋವನಕೊಪ್ಪ ಮತ್ತಿತರ ಗ್ರಾಮಗಳ ಹೊಲಗಳು ಜಲಾವೃತವಾಗಿದ್ದವು. ರೈತರು ಸಾಲ ಮಾಡಿ ಬಿತ್ತಿದ್ದ ಬೆಳೆಗಳು ಹುಲುಸಾಗಿ ಬೆಳೆದಿದ್ದವು. ಈ ಬಾರಿ ಬಂಪರ್ ಬೆಳೆ ನಿರೀಕ್ಷೆಯಲ್ಲಿದ್ದ ಗೋವಿನಜೋಳ ಬೆಳೆದ ರೈತರು, ನೆರೆ ಹಾವಳಿಯಿಂದ ತೀವ್ರ ಹತಾಶರಾಗಿದ್ದಾರೆ.

ಬಡವರ ಹೊಟ್ಟೆ ಮೇಲೆ ಪ್ರವಾಹ ಬರೆ ಎಳೆದಂತಾಗಿದೆ. ನೆರೆ ಹಾವಳಿಯಿಂದ ನಷ್ಟಕ್ಕೀಡಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು. ಗ್ರಾಮಸ್ಥರಿಗೆ ರಕ್ಷಣೆ ಒದಗಿಸಬೇಕು ಎಂದು ಸಂತ್ರಸ್ತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ತಹಸೀಲ್ದಾರ ಮಹೇಶ ಕರ್ಜಗಿ ನೆರೆ ಸಂತ್ರಸ್ತರು ಹಾಗೂ ಬೆಳೆ ನಷ್ಟ ಅನುಭವಿಸಿದ ರೈತರಿಂದ ಅಹವಾಲು ಸ್ವೀಕರಿಸಿದರು. ಬೆಳೆ ಹಾನಿ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ, ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

924 ಹೆಕ್ಟೇರ್ ಹಾನಿ: ಮಲಪ್ರಭಾ ನದಿ ಪ್ರವಾಹದಿಂದ ಉತ್ತಮ ಇಳುವರಿ ನಿರೀಕ್ಷೆ ಇದ್ದ ಗೋವನಕೊಪ್ಪ ಹಾಗೂ ಇತರ ಗ್ರಾಮಗಳಲ್ಲಿ 924 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಸುಮಾರು ರೂ 1.42 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ. ಈ ಕುರಿತು ಕೃಷಿ ಇಲಾಖೆ ಸಮೀಕ್ಷೆ ನಡೆಸಿ, ಸಮಗ್ರ ವರದಿಯನ್ನು ತಹಸೀಲ್ದಾರರಿಗೆ ಸಲ್ಲಿಸಿದೆ. ಸರ್ಕಾರದಿಂದ ಪರಿಹಾರ ನಿರೀಕ್ಷಿಸಲಾಗುತ್ತಿದೆ ಎಂದು  ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.