ADVERTISEMENT

ಮಳೆ–ಗಾಳಿ ಅಬ್ಬರ; ಜನರು ತತ್ತರ

​ಪ್ರಜಾವಾಣಿ ವಾರ್ತೆ
Published 16 ಮೇ 2017, 7:28 IST
Last Updated 16 ಮೇ 2017, 7:28 IST
ಕಿರಸೂರಿನಲ್ಲಿ ಕಲ್ಲು ಬಿದ್ದು ಸಾವಿಗೀಡಾದ ಬಾಲಕಿ ದೀಪಾ ಪೋಷಕರಿಗೆ ಸಚಿವೆ ಉಮಾಶ್ರೀ ಪರಿಹಾರದ ಚೆಕ್ ವಿತರಿಸಿದರು. ಶಾಸಕ ಎಚ್.ವೈ.ಮೇಟಿ, ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ತಹಶೀಲ್ದಾರ್ ವಿನಯಕುಲಕರ್ಣಿ ಇದ್ದಾರೆ
ಕಿರಸೂರಿನಲ್ಲಿ ಕಲ್ಲು ಬಿದ್ದು ಸಾವಿಗೀಡಾದ ಬಾಲಕಿ ದೀಪಾ ಪೋಷಕರಿಗೆ ಸಚಿವೆ ಉಮಾಶ್ರೀ ಪರಿಹಾರದ ಚೆಕ್ ವಿತರಿಸಿದರು. ಶಾಸಕ ಎಚ್.ವೈ.ಮೇಟಿ, ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ತಹಶೀಲ್ದಾರ್ ವಿನಯಕುಲಕರ್ಣಿ ಇದ್ದಾರೆ   

ಬಾಗಲಕೋಟೆ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ಜೋರಾಗಿದೆ. ಸೋಮವಾರ ಬೆಳಗಿನ ಜಾವ ಸುರಿದ ಮಳೆಗೆ ಬಾಗಲಕೋಟೆ ತಾಲ್ಲೂಕಿನಲ್ಲಿ ವ್ಯಾಪಕ ಹಾನಿಯಾಗಿದೆ.ಮಳೆ ಜೊತೆಗೆ ಗಾಳಿ, ಗುಡುಗು–ಸಿಡಿಲಿನ ಅಬ್ಬರ ಹಾನಿ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ. ಇದರಿಂದ ವಿವಿಧೆಡೆ ಮರ, ವಿದ್ಯುತ್‌ ಕಂಬಗಳು ಧರೆಗುರುಳಿವೆ. ಮನೆ, ಶೆಡ್‌ಗಳ ಚಾವಣಿ ಹಾರಿ ಹೋಗಿವೆ. ಅಲ್ಲಲ್ಲಿ ಜಮೀನುಗಳಲ್ಲಿ ನೀರು ನಿಂತಿದ್ದು, ಒಡ್ಡುಗಳು ಕೊಚ್ಚಿ ಹೋಗಿವೆ.

ಜೀವಹಾನಿ: ತಾಲ್ಲೂಕಿನ ಕಿರಸೂರಿನ ತೋಟದ ಮನೆಯ ಮೇಲ್ಛಾವಣಿಯ ಕಲ್ಲು ಬಿದ್ದು ಬಾಲಕಿ ಬಲಿಯಾದರೆ, ತುಳಸಿಗೇರಿ ಗ್ರಾಮದ ತೋಟದ ಮನೆಯ ಚಾವಣಿ ಬಿದ್ದು 9 ವರ್ಷದ ಬಾಲಕಿ ಸರಸ್ವತಿ ತಪರೇಶಿ ಅವರ ತಲೆಗೆ ಪೆಟ್ಟುಬಿದ್ದಿದೆ. ನಾಗಸಂಪಿಗೆಯಲ್ಲಿ ಆಕಳು ಹಾಗೂ ಆಡು ಸಿಡಿಲಿಗೆ ಬಲಿಯಾಗಿವೆ.

ಇಲಾಳದಲ್ಲಿ ಎಮ್ಮೆ ಸಾವಿಗೀಡಾಗಿದೆ. ಬನ್ನಿದಿನ್ನಿಯ ಭೀಮಪ್ಪ ಗೌರಿ, ಯಲ್ಲವ್ವ ಸುರತಾನಿ, ಗೋವಿಂದಕೊಪ್ಪದ ಮಲ್ಲಪ್ಪ ಪಾಟೀಲ ಅವರ ತೋಟದ ಮನೆಗಳ ತಗಡು, ಬೊಮ್ಮಣಗಿ ಪುನ ರ್ವಸತಿ ಕೇಂದ್ರದಲ್ಲಿ ಸಂತ್ರಸ್ತರ ಶೆಡ್‌ಗಳ ಮೇಲ್ಛಾವಣಿ (ಪತ್ರಾಸು) ಹಾರಿಹೋಗಿವೆ. ರಾಂಪುರದಲ್ಲಿ ಏಳು ವಿದ್ಯುತ್ ಕಂಬಗಳು ಧರೆಗುರುಳಿವೆ.

ADVERTISEMENT

ಮುಗಳೊಳ್ಳಿಯಲ್ಲಿ ಮನೆಯ ಗೋಡೆ ಕುಸಿದಿದ್ದು, ದೇವನಾಳದಲ್ಲಿ ಆರು ಮನೆಗಳು ಹಾನಿಗೀಡಾಗಿವೆ. ಕಲಾದಗಿಯ ಗುರುಲಿಂಗೇಶ್ವರ ಪ್ರೌಢಶಾಲೆಯ ಚಾವಣಿ ತಗಡು ಹಾರಿಹೋಗಿವೆ.  ಬೊಮ್ಮಣಗಿ, ನಾಗಸಂಪಗಿಗೆ ತಹಶೀ ಲ್ದಾರ್ ವಿನಯಕುಲಕರ್ಣಿ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು.

ಮಳೆಯ ಬಿರುಸುಗೊಂಡು ಪರಿಣಾಮ ಬಾಗಲಕೋಟೆ ನಗರ, ವಿದ್ಯಾಗಿರಿ ಹಾಗೂ ನವನಗರದಲ್ಲೂ ಸಾಕಷ್ಟು ಹಾನಿಯಾಗಿದೆ. ಹತ್ತಾರು ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಕೆಲವೆಡೆ ಮರದ ಟೊಂಗೆಗಳು ಮುರಿದುಬಿದ್ದಿವೆ. ನವನಗರದ ವಾಂಬೆ ಕಾಲೊನಿಯಲ್ಲಿ ಶೆಡ್‌ಗಳ ತಗಡು ಹಾರಿಹೋಗಿವೆ.

ವಿದ್ಯಾಗಿರಿಯಲ್ಲಿ ಕಾರೊಂದರ ಮೇಲೆ ಮರ ಬಿದ್ದಿದೆ. ಜೆಸಿಬಿ ಸಹಾಯದಿಂದ ಪಕ್ಕಕ್ಕೆ ಸರಿಸಿ ಮರವನ್ನು ಕಡಿದು ಬೇರೆಡೆಗೆ ಸಾಗಿಸಲಾಯಿತು. ರೈಲು ನಿಲ್ದಾಣದ ಬಳಿ ಬೃಹತ್ ಮರ ನೆಲಕಚ್ಚಿದೆ. ಇದರಿಂದ ಕೆಲ ಕಾಲ ಸಂಚಾರ ವ್ಯತ್ಯಯವಾಯಿತು. ನವನಗರದ ಅಂಬೇಡ್ಕರ್ ಭವನದ ಬಳಿ ಎರಡು ವಿದ್ಯುತ್ ಕಂಬ ಬಿದ್ದಿವೆ.ಮಳೆ–ಗಾಳಿಗೆ ತಾಲ್ಲೂಕಿನ ಕಲಾದಗಿ, ಶಾರದಾಳ, ಮುಧೋಳ ತಾಲ್ಲೂಕಿನ ಉದಗಟ್ಟಿ ಹಾಗೂ ಬೀಳಗಿ ಪಟ್ಟಣದಲ್ಲಿ ಮನೆಗಳ ಛಾವಣಿ ಹಾರಿ ಹೋಗಿವೆ.

18 ಮಿ.ಮೀ ಮಳೆ: ಬಾಗಲಕೋಟೆ ಸುತ್ತಮುತ್ತಲೂ ಒಂದು ಗಂಟೆ ಅವಧಿಯಲ್ಲಿ 18 ಮಿ.ಮೀ ಮಳೆ ಯಾಗಿದೆ. ಕಳೆದೊಂದು ವಾರದಲ್ಲಿ 44 ಮಿ.ಮೀ ಮಳೆ ಬಿದ್ದಿದೆ ಎಂದು ತೋಟ ಗಾರಿಕೆ ವಿ.ವಿ. ಮಳೆಮಾಪನ ವಿಭಾಗದ ಮಾಹಿತಿಯಿಂದ ತಿಳಿದು ಬಂದಿದೆ.

ವಿದ್ಯುತ್ ವ್ಯತ್ಯಯ: ವಿದ್ಯುತ್ ಕಂಬಗಳು ಮುರಿದುಬಿದ್ದ ಪರಿಣಾಮ ನವನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮುಂಜಾನೆಯಿಂದಲೇ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ತಂಪೆರೆದ ಮಳೆ
ಹುನಗುಂದ: ಭಾನುವಾರ ರಾತ್ರಿ ಬಿದ್ದ ಮಳೆ ಕಾಯ್ದ ಭೂಮಿಗೆ ಒಂದಿಷ್ಟು ತಂಪೆರೆದಿದೆ. ಮಧ್ಯ ರಾತ್ರಿಗೆ ಭಾರಿ ಗುಡುಗು ಸಿಡಿಲಿನಿಂದ ಆರ್ಭಟ ಮಾಡುತ್ತಿದ್ದ ಮಳೆ ಸುಮಾರು ಅರ್ಧ ಗಂಟೆಯಾಗಿದೆ. ಇದರಿಂದ ಸೋಮ ವಾರ ಒಂದಿಷ್ಟು ತಂಪಿನ ವಾತಾವರಣ ಕಾಣಿಸಿಕೊಂಡಿತು.

₹ 4 ಲಕ್ಷ ಮೊತ್ತದ ಪರಿಹಾರ ಚೆಕ್‌ ವಿತರಣೆ

ಕಿರಸೂರಿಗೆ ಮಧ್ಯಾಹ್ನ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ, ಬಾಲಕಿಯ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಸರ್ಕಾರದಿಂದ ಪರಿಹಾರ ರೂಪವಾಗಿ ₹ 4 ಲಕ್ಷ ಮೊತ್ತದ ಚೆಕ್‌ ಅನ್ನು ದೀಪಾ ಪೋಷಕರಿಗೆ ನೀಡಿದರು. ಈ ವೇಳೆ ಪೋಷಕರ ರೋದನ ಮುಗಿಲು ಮುಟ್ಟಿತ್ತು.ಶಾಸಕ ಎಚ್.ವೈ,ಮೇಟಿ, ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ತಹಶೀಲ್ದಾರ್ ವಿನಯಕುಲಕರ್ಣಿ ಹಾಜರಿದ್ದರು.

ರಣಹದ್ದು ರಕ್ಷಣೆ: ಮಳೆಯ ಹೊಡೆತಕ್ಕೆ ರೆಕ್ಕೆಪುಕ್ಕ ತೋಯಿಸಿಕೊಂಡು ಮುಂದೆ ಹಾರಲಾಗದೇ ಬಿದ್ದು ಒದ್ದಾಡುತ್ತಿದ್ದ ರಣಹದ್ದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೆಳಿಗ್ಗೆ ರಕ್ಷಿಸಿದ್ದಾರೆ. ಬಸವೇಶ್ವರ ವೃತ್ತದಲ್ಲಿ ಅಸಹಾಯಕವಾಗಿ ಬಿದ್ದಿದ್ದ ಹದ್ದನ್ನು ಕಂಡು ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಶಿವಾನಂದ ಖೇಡಗಿ ಹಾಗೂ ಸಿಬ್ಬಂದಿ ಹದ್ದನ್ನು ರಕ್ಷಿಸಿ ಸಮೀಪದ ಪಶು ಆಸ್ಪತ್ರೆಗೆ ಒಯ್ದು ಚಿಕಿತ್ಸೆ ಕೊಡಿಸಿದರು. ಮಧ್ಯಾಹ್ನದ ವೇಳೆಗೆ ಚೇತರಿಸಿಕೊಂಡ ಹದ್ದನ್ನು ನಂತರ ಹಾರಿ ಬಿಡಲಾಯಿತು.

*

ಬಾಳೆ ಬೆಳೆ ನಾಶವಾದ ಹಾಗೂ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಗಳು ಬಂದಿವೆ. ಸಮೀಕ್ಷೆಯ ನಂತರ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು
ಎಸ್.ಎಸ್.ಪೂಜಾರಿ
ತಹಶೀಲ್ದಾರ್,  ಮುಧೋಳ

*

ಮನೆ ಕಳೆದುಕೊಂಡವರಿಗೆ ಹಾಗೂ ಬೆಳೆ ಹಾನಿಯಾದವರಿಗೆ ಕಾಟಾಚಾರದ ಪರಿಹಾರ ನೀಡದೆ ಕೂಡಲೇ ಹಾನಿ ಎಷ್ಟು ಪ್ರಮಾಣದಲ್ಲಿ ಆಗಿದೆ ಅಷ್ಟು ಹಣ ಪರಿಹಾರ ನೀಡಬೇಕು
ಗೋವಿಂದ ಕಾರಜೋಳ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.