ADVERTISEMENT

ಮಾಜಿ ದೇವದಾಸಿಯರ ಕಣ್ಣೀರು ಒರೆಸಿ

ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ: ದಲಿತ ಸೇನಾ ಸಮಿತಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 5:18 IST
Last Updated 26 ಅಕ್ಟೋಬರ್ 2017, 5:18 IST
ಮಾಜಿ ದೇವದಾಸಿಯರ ಕಣ್ಣೀರು ಒರೆಸಿ
ಮಾಜಿ ದೇವದಾಸಿಯರ ಕಣ್ಣೀರು ಒರೆಸಿ   

ಬಾಗಲಕೋಟೆ: ಮಾಜಿ ದೇವದಾಸಿ ಮಹಿಳೆಯರಿಗೆ ಕೃಷಿ ಭೂಮಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸೇನಾ ಸಮಿತಿ ಜಿಲ್ಲಾ ಘಟಕದಿಂದ ಬುಧವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ನವನಗರದ ಕಲಾಭವನದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ಸಂಘಟನೆಯ ಕಾರ್ಯಕರ್ತರು ಹಾಗೂ ಮಾಜಿ ದೇವದಾಸಿಯರು ಜಿಲ್ಲಾಡಳಿತ ಭವನದ ಎದುರು ಸಮಾವೇಶಗೊಂಡು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಮಾದರ ಮಾತನಾಡಿ, ‘ಮಾಜಿ ದೇವದಾಸಿ ಮಹಿಳೆಯರಿಗೆ ಸರ್ಕಾರ ಕೃಷಿ ಭೂಮಿ ಸರ್ಕಾರ ತೀರ್ಮಾನಿಸಲಾಗಿದೆ. ಅದರ ಘಟಕ ವೆಚ್ಚ ₹ 15 ಲಕ್ಷಗಳಾಗಿದ್ದು, ಶೇ 50ರಷ್ಟು ಸಹಾಯಧನ ಹಾಗೂ ಸಾಲದ ಮೊತ್ತಕ್ಕೆ ಶೇ 6ರ ಬಡ್ಡಿದರದಲ್ಲಿ ಫಲಾನುಭವಿ ಕಟ್ಟಬೇಕಾಗಿದೆ. ಆದರೆ ಇವರೆಲ್ಲ ಬಡವರಾಗಿದ್ದು, ಸಾಲ ಕಟ್ಟಲು ಅಸಮರ್ಥರಾಗಿದ್ದಾರೆ. ಆದ್ದರಿಂದ ಎರಡು ಎಕರೆ ಜಮೀನು ಉಚಿತವಾಗಿ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಮನೆ ಕಟ್ಟಲು ಸರ್ಕಾರ ₹ 1.50 ಲಕ್ಷ ಸಹಾಯಧನ ನೀಡುತ್ತಿದೆ. ಇದನ್ನು ₹ 3 ಲಕ್ಷಕ್ಕೆ ಹೆಚ್ಚಿಸಬೇಕು. ನಿವೇಶನ ಇಲ್ಲದವರಿಗೆ ನಿವೇಶನ ನೀಡಿ ಮನೆ ಕಟ್ಟಿಸಿ ಕೊಡಬೇಕು. ಮಾಜಿ ದೇವದಾಸಿಯರ ಮಕ್ಕಳ ಪುನರ್ವಸತಿಗಾಗಿ ಶಿಕ್ಷಣ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ದೇವದಾಸಿ ಮಹಿಳೆಯರ ಪುನರ್‌ ಸರ್ವೇಯಾಗಬೇಕು. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಾಣಂತಿಯರಿಗೆ ಬಿಸಿ ನೀರು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮಾಶಾಸನವನ್ನು ₹1500 ರಿಂದ ₹ 3 ಸಾವಿರಕ್ಕೆ ಹೆಚ್ಚಿಸಬೇಕು. ಮಾರಣಾಂತಿಕ ಕಾಯಿಲೆಗೆ ತುತ್ತಾದ ದೇವದಾಸಿಯರಿಗೆ ಉಚಿತ ಚಿಕಿತ್ಸೆ ನೀಡಬೇಕು. ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಬೇಕು ಎಂದು ಆಗ್ರಹಿಸಿದರು.

ಸಿದ್ದು ದೊಡಮನಿ, ನಾಗರಾಜ ಮನ್ನಿಕೇರಿ, ಹುಸನಪ್ಪ ಅವರಾದಿ, ನಿಜಪ್ಪ ಮಾದರ, ಲಕ್ಕವ್ವ ಬನಹಟ್ಟಿ, ಮುದಕವ್ವ ಮೆಳ್ಳಿಗೇರಿ, ಗ್ಯಾನವ್ವ ಚಲವಾದಿ, ಯಲ್ಲವ್ವ ಬಾದಾಮಿ, ರೇಣುಕಾ ಮ್ಯಾಗೇರಿ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.