ADVERTISEMENT

ಮಾಧ್ಯಮಗಳು ಜನಪರ ವರದಿ ಪ್ರಕಟಿಸಲಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2012, 8:15 IST
Last Updated 28 ಜುಲೈ 2012, 8:15 IST
ಮಾಧ್ಯಮಗಳು ಜನಪರ ವರದಿ ಪ್ರಕಟಿಸಲಿ
ಮಾಧ್ಯಮಗಳು ಜನಪರ ವರದಿ ಪ್ರಕಟಿಸಲಿ   

ಬಾಗಲಕೋಟೆ: ಸುದ್ದಿ ಮಾಧ್ಯಮಗಳಲ್ಲಿ ಜನ ಪರವಾದ ವರದಿಗಳು ಕಡಿಮೆಯಾಗುತ್ತಿವೆ. ಒಳ್ಳೆಯ ಬೆಳವಣಿಗೆಗಳಿಗಿಂತ ಕೆಟ್ಟ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ವಿಷಾದದ ಸಂಗತಿ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರ ಡಾ. ಪಾಂಡುರಂಗ ಪಾಟೀಲ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಬಿವಿವಿ ಸಂಘದ ಮಿನಿ ಸಭಾಂಗಣದಲ್ಲಿ ಶುಕ್ರ ವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಮಾಜಮುಖಿಯಲ್ಲದ ಸುದ್ದಿಯನ್ನು ಬರೆ ಯುವುದರಿಂದ ಮತ್ತು ಪ್ರಕಟಿ ಸುವುದರಿಂದ ಸುದ್ದಿ ಮಾಧ್ಯಮಗಳು ಅಸ್ಥಿತ್ವವನ್ನು ಕಳೆದುಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.ಕನ್ನಡ ಭಾಷೆಯಲ್ಲಿ ಇನ್ನೂ 10 ಪತ್ರಿಕೆಗಳು ಆರಂಭವಾದರೂ ಇತರೆ ಪತ್ರಿಕೆಗಳಿಗೆ ಯಾವುದೇ ಸಮಸ್ಯೆಯಿಲ್ಲ, ಅಷ್ಟೊಂದು ಓದುಗರು ರಾಜ್ಯದಲ್ಲಿ ಇದ್ದಾರೆ ಎಂದರು.

ಪ್ರಜಾಪ್ರಭುತ್ವ ಶಿಥಿಲವಾಗಲು ಜನತೆ, ಜನಪ್ರತಿನಿಧಿಗಳ ಜೊತೆಗೆ ಮಾಧ್ಯಮಗಳ ಪಾಲು ದೊಡ್ಡ ಪ್ರಮಾಣದಲ್ಲಿದೆ ಎಂದು ಹೇಳಿದರು.ಪಟ್ಟ ಕಟ್ಟುವ, ಪಟ್ಟದಿಂದ ಕೆಳಗಿಳಿಸುವ ಸಾಮಾರ್ಥ್ಯ ಹೊಂದಿರುವ ಪತ್ರಿಕೆಗಳು ಇತ್ತೀಚಿನ ದಿನಗಳಲ್ಲಿ ಸದೃಢತೆ ಕಳೆದುಕೊಳ್ಳುತ್ತಿವೆ ಎಂದರು.

ಪತ್ರಿಕೋದ್ಯಮ ಉಳಿದು- ಬೆಳೆಯ ಬೇಕಾದರೆ ಆರೋಗ್ಯಕರವಾದ ಮತ್ತು ಸದೃಢವಾದ, ವಸ್ತುನಿಷ್ಠ ವರದಿ ಅನಿ ವಾರ್ಯ ಎಂದು ಅಭಿಪ್ರಾಯಪಟ್ಟರು.ಪ್ರಸ್ತುತ ದೃಶ್ಯ ಮಾಧ್ಯಮಗಳ ಟಿಆರ್‌ಪಿ ಪೈಪೋಟಿ ಅಪಾಯಕಾರಿಯಾಗಿದೆ ಎಂದ ಅವರು, ಪತ್ರಕರ್ತರು ತಮ್ಮ ವೃತ್ತಿಯ ಬಗ್ಗೆ ಪರಾಪರ್ಶೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾಜದ ಸ್ನೇಹಿತ: ಪತ್ರಿಕೆಗಳು ಮತ್ತು ಪತ್ರಕರ್ತರು ಸಮಾಜದ ಸ್ನೇಹಿತನಾಗಬೇಕೇ ಹೊರತು, ಶತ್ರುವಾಗಬಾರದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಜಿ.ಪಾಟೀಲ ಹೇಳಿದರು.

ಸಮಾಜದ ಕನ್ನಡಿಯಾಗಿರುವ ಪತ್ರಕರ್ತರು ಜನತೆಯ ನಿಖರವಾದ ಅಭಿಪ್ರಾಯವನ್ನು ಒಗ್ಗೂಡಿಸಿ ನೀತಿ-ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಪತ್ರಕರ್ತ ನ್ಯಾಯಾಧೀಶನ ಪಾತ್ರ ವಹಿಸಬೇಕು. ಎಂದರು.
ಪತ್ರಿಕೆಗಳು ಸಕಾರಾತ್ಮಕ ವರದಿಗಳನ್ನು ಹೆಚ್ಚು ಪ್ರಕಟಿಸಬೇಕು, ಸಮಾಜವನ್ನು ದಾರಿ ತಪ್ಪಿಸುವ ಯೋಜಿತ ವರದಿಗಳನ್ನು ಮಾಡಬಾರದು ಎಂದು ತಿಳಿ ಹೇಳಿದರು.

ಸನ್ಮಾನ: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಈಶ್ವರ ಶೆಟ್ಟರ, ಎಸ್. ಕೆ. ಕೊನೆಸಾಗರ ಮತ್ತು ವಿಜಾಪುರಕ್ಕೆ ವರ್ಗಾವಣೆಯಾಗಿರುವ ಪತ್ರಕರ್ತ ಜಿ.ಎಸ್.ಕಮತರ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಕಾ.ನಿ.ಪ. ಪ್ರಧಾನ ಕಾರ್ಯದರ್ಶಿ ಸುಭಾಷ ಹೊದ್ಲೂರ, ಜಿಲ್ಲಾ ವಾರ್ತಾಧಿಕಾರಿ ಪಿ.ಎಸ್.ಹಿರೇಮಠ, ಅಶೋಕ ಕುಲಕರ್ಣಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.