ADVERTISEMENT

ಮಿಶ್ರ ಬೆಳೆ ಬೆಳೆಯಲು ಮುಂದಾಗಿ: ವೀಣಾ

ಜುಲೈನಲ್ಲಿ ಸಿರಿಧಾನ್ಯ ಮೇಳ ಆಯೋಜನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 11:50 IST
Last Updated 10 ಜೂನ್ 2018, 11:50 IST

ಬಾಗಲಕೋಟೆ: ‘ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಉತ್ತಮ ಮಳೆಯಾಗಿದ್ದು, ರೈತರು ಒಂದೇ ತರಹದ ಬೆಳೆ ಬೆಳೆಯದೇ ಮಿಶ್ರ ಬೆಳೆ ಬೆಳೆಯಲು ಮುಂದಾಗಬೇಕು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಸಲಹೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದೇ ತರಹದ ಬೆಳೆ ಬೆಳೆಯುವುದರಿಂದ ಮಾರುಕಟ್ಟೆಯಲ್ಲಿ ಅದರ ಬೆಲೆ ಕುಸಿಯುತ್ತದೆ. ಮಿಶ್ರ ಬೆಳೆ ಬೆಳೆಯುವುದರಿಂದ ಉತ್ತಮ ಬೆಲೆ ಸಿಗುತ್ತದೆ. ಇದರಿಂದ ಆರ್ಥಿಕವಾಗಿ ಸಬಲರಾಗಬಹುದಾಗಿದೆ. ಹೀಗಾಗಿ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಬೆಳೆಗಳ ಜೊತೆಗೆ ಲಾಭದಾಯಕ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು’ ಎಂದರು.

‘ಜಿಲ್ಲೆಯು ಸಿರಿಧಾನ್ಯಗಳ ತವರಾಗಿದ್ದು, ಈ ಭಾಗದಲ್ಲಿ ಸಿರಿಧಾನ್ಯಗಳಾದ ನವಣಿ, ಅಗಸಿ, ಕುಸಬಿ, ಮಡಕಿ, ಹುರುಳಿ, ಹೆಸರು, ಅಲಸಂದಿ, ಎಳ್ಳು, ಕಡಲೆ, ಗುರೆಳ್ಳು ಸೇರಿದಂತೆ ಇತರೆ ಬೆಳೆಗಳು ಪ್ರಸಿದ್ಧವಾಗಿವೆ. ಬಾದಾಮಿ, ಹುನಗುಂದ ಮತ್ತು ಬಾಗಲಕೋಟೆ ತಾಲ್ಲೂಕುಗಳಲ್ಲಿ ಖುಷ್ಕಿ ಭೂಮಿ ಅಧಿಕವಾಗಿದ್ದು, ಸಿರಿಧಾನ್ಯ ಬೆಳೆಗೆ ಉತ್ತಮವಾಗಿದೆ. ಆದ್ದರಿಂದ ಜುಲೈ ತಿಂಗಳಲ್ಲಿ ಬೃಹತ್ ಮಟ್ಟದ ಸಿರಿಧಾನ್ಯ ಮೇಳ ಹಮ್ಮಿಕೊಳ್ಳಲಾಗುವುದು’ ಎಂದರು.

ADVERTISEMENT

ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶಕುಮಾರ ಮಾತನಾಡಿ, ‘ಜಿಲ್ಲೆಯಲ್ಲಿ ವಾಡಿಕೆಯಂತೆ 122.6 ಮಿ.ಮೀ ಮಳೆಯಾಗಬೇಕಾಗಿತ್ತು. ಈಗ 134.4 ಮೀ.ಮೀ ಮಳೆಯಾಗಿದೆ. ಜನೇವರಿ ಯಿಂದ ಇಲ್ಲಿಯವರೆಗೆ ಬಾದಾಮಿಯಲ್ಲಿ 13 ಮಿ.ಮೀ, ಬಾಗಲಕೋಟೆ 23 ಮಿ.ಮೀ, ಬೀಳಗಿ 9 ಮಿ.ಮೀ, ಹುನಗುಂದ 17 ಮಿ.ಮೀ ಹಾಗೂ ಮುಧೋಳದಲ್ಲಿ 13 ಮಿ.ಮೀ ರಷ್ಟು ಮಳೆಯಾಗಿದೆ. ಈ ಬಾರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ರೋಹಿಣಿ ಮತ್ತು ಮೃಗಶಿರ ಮಳೆಗಳಿಂದ ಈ ಬಾರಿ ಅತೀ ಹೆಚ್ಚು ಮಳೆಯಾಗಿದೆ. ಬಾದಾಮಿಯಲ್ಲಿ ಶೇ 141.3 ಮಿ.ಮೀ, ಬಾಗಲಕೋಟೆ ಶೇ 113.3 ಮಿ.ಮೀ, ಬೀಳಗಿ ಶೇ 104.4 ಮಿಮೀ, ಹುನಗುಂದ ಶೇ 106.1 ಮಿ.ಮೀ, ಜಮಖಂಡಿ ಶೇ 125.3 ಮಿ.ಮೀ ಹಾಗೂ ಮುಧೋಳದಲ್ಲಿ ಶೇ 117.7 ಮಿ.ಮೀ ರಷ್ಟು ಮಳೆಯಾಗಿದೆ’ ಎಂದರು.

‘ಈ ವರ್ಷ ಮುಂಗಾರು ಹಂಗಾಮಿಗೆ 2.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ಶೇ 35 ರಷ್ಟು ಬಿತ್ತನೆಯಾಗಿದೆ. ರೋಹಿಣಿ ಮಳೆ ಉತ್ತಮವಾಗಿದ್ದು, ಹೆಚ್ಚಿನ ಬಿತ್ತನೆ ಪ್ರಮಾಣವನ್ನು ನಿರೀಕ್ಷಿಸಲಾಗಿದೆ. ಜೂನ್, ಜುಲೈ ಹಾಗೂ ಆಗಷ್ಟ್ ತಿಂಗಳಿಗನುಗುಣವಾಗಿ ಜಿಲ್ಲೆಗೆ 15,166 ಕ್ವಿಂಟಲ್ ಬಿತ್ತನೆ ಬೀಜ ಬೇಕಾಗಿದೆ. 11623 ಕ್ವಿಂಟಲ್ ಬೇಡಿಕೆ ಇದೆ. ಈಗಾಗಲೇ 4197 ಕ್ವಿಂಟಲ್ ಬಿತ್ತನೆ ಬೀಜವನ್ನು ಪೂರೈಕೆ ಮಾಡಲಾಗಿದ್ದು, ಅದರಲ್ಲಿ 1186 ಕ್ವಿಂಟಲ್ ಬೀಜ ವಿತರಿಸಲಾಗಿದೆ. ಜಿಲ್ಲೆಯ 18 ರೈತ ಸಂಪರ್ಕ ಕೆಂದ್ರಗಳ ಮೂಲಕ ವಿತರಿಸಲಾಗುತ್ತಿದ್ದು, 8 ಹೆಚ್ಚಿನ ಕೇಂದ್ರಗಳನ್ನು ತೆರೆಯಲಾಗಿದೆ. 119400 ಮೆ.ಟನ್ ರಸಗೊಬ್ಬರದ ಬೇಡಿಕೆ ಇದ್ದು, 66268 ಮೆ.ಟನ್ ಪೂರೈಕೆಯಾಗಿದೆ. ಈ ಪೈಕಿ 33318 ಮೆ.ಟನ್ ರಸಗೊಬ್ಬರ ವಿತರಿಸಲಾಗಿದೆ’ ಎಂದರು.ಜಿಲ್ಲೆಯಲ್ಲಿ 52874.61 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಅದರಲ್ಲಿ 8820.42 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣು, 38737.33 ಹೆಕ್ಟೇರ್‌ನಲ್ಲಿ ತರಕಾರಿ, 4002.76 ಹೆಕ್ಟೇರ್‌ನಲ್ಲಿ ಸಾಂಬಾರು ಬೆಳೆಗಳು, 1049.30 ಹೆಕ್ಟೇರ್‌ನಲ್ಲಿ ತೋಟದ ಬೆಳೆಗಳು ಹಾಗೂ 264.80 ಹೆಕ್ಟೇರ್ ಪ್ರದೇಶದಲ್ಲಿ ಹೂವಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಈರುಳ್ಳಿ 22,000 ಹೆಕ್ಟೇರ್, ಟೊಮ್ಯಾಟೋ 950 ಹೆಕ್ಟೇರ್ ಹಾಗೂ ಮೆಣಸಿನಕಾಯಿ 3200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈರುಳ್ಳಿ 330 ಕ್ವಿಂಟಲ್, ಟೊಮ್ಯಾಟೋ 0.25 ಕ್ವಿಂಟಲ್ ಹಾಗೂ ಮೆಣಸಿನಕಾಯಿ 1827 ಕ್ವಿಂಟಲ್ ಬೀಜಗಳ ಬೇಡಿಕೆ ಇದೆ ಎಂದು ತೋಟಗಾರಿಕೆ ಅಧಿಕಾರಿ ತಿಳಿಸಿದರು.

‘ಬೇಜವಾಬ್ದಾರಿ ತೋರಿದರೆ ಮಾನ್ಯತೆ ರದ್ದು’

ಅಪಘಾತದಲ್ಲಿ ಗಾಯಗೊಂಡು ಶುಕ್ರವಾರ ಸಾವನ್ನಪ್ಪಿದ ವಿದ್ಯಾಗಿರಿಯ ಲಯನ್ಸ್ ಇಂಗ್ಲಿಷ್‌ ಮಾಧ್ಯಮ ಶಾಲೆಯ ಇಬ್ಬರು ವಿದ್ಯಾರ್ಥಿಗಳ ಸಾವಿಗೆ ವಿಷಾಧ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ‘ಪಾಲಕರು ಮತ್ತು ಶಿಕ್ಷಣ ಸಂಸ್ಥೆಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಖಾಸಗಿ ಶಾಲೆಯವರು ಮಕ್ಕಳನ್ನು ಟಂಟಂಗಳಲ್ಲಿ ಶಾಲೆಗೆ ಬರದಂತೆ ನೋಡಿಕೊಂಡು ಅವರಿಗೆ ಶಾಲಾ ವಾಹನ ವ್ಯವಸ್ಥೆ ಮಾಡಬೇಕು. ಶಾಲಾ ವಾಹನದಲ್ಲಿ ಮಕ್ಕಳನ್ನು ಕರೆತರಲು ದರ ನಿಗದಿಪಡಿಸಿ ಶಾಲಾ ಆಡಳಿತ ಮಂಡಳಿಗಳಿಗೆ ಸೂಚಿಸಲಾಗುವುದು. ಮಕ್ಕಳ ಸುರಕ್ಷತೆಯಲ್ಲಿ ಬೇಜವಾಬ್ದಾರಿತನವನ್ನು ಅನುಸರಿಸಿದ ಶಾಲೆ ಮಾನ್ಯತೆ ರದ್ದುಪಡಿಸಲಾಗುವುದು’ ಎಂದು ಎಚ್ಚರಿಸಿದರು.

‘ಖಾಸಗಿ ಶಾಲೆಗಳ ಶಾಲಾ ಶುಲ್ಕ ಹಾಗೂ ಡೊನೇಷನ್ ಹಾವಳಿ ತಡೆಯಲು ಕ್ರಮಕೈಗೊಳ್ಳಲಾಗುವುದು. ಮೂಲ ಸೌಕರ್ಯ ವಂಚಿತ ಶಾಲೆ ಹಾಗೂ ಆಸ್ಪತ್ರೆಗಳಿಗೆ ಅನುಮತಿ ನೀಡಿಲ್ಲ. ವಸತಿ ಪ್ರದೇಶಗಳಲ್ಲಿ ತಲೆ ಎತ್ತಿರುವ ಶಾಲೆ ಹಾಗೂ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅವರ ಮಾನ್ಯತೆ ರದ್ದು ಪಡಿಸಲು ಕೂಡ ಮುಂದಾಗಬೇಕಾಗುತ್ತದೆ. ಈ ಬಗ್ಗೆ ಶೀಘ್ರ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಲಿ’ ಎಂದು ವೀಣಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.