ಮುದ್ದೇಬಿಹಾಳ: ತಾಲ್ಲೂಕಿನಾದ್ಯಂತ ಬುಧವಾರ ಸುರಿದ ಮಳೆಯಿಂದಾಗಿ ಹೊಲಗಳನ್ನು ಬಿತ್ತುವ ಚಿಂತೆಯಲ್ಲಿದ್ದ ರೈತರ ಮುಖದಲ್ಲಿ ನಗೆ ಅರಳುವಂತೆ ಮಾಡಿದೆ. `ರೋಹಿಣಿ ಬಂದರೆ ಓಣಿಯೆಲ್ಲ ಜೋಳ' ಎನ್ನುವಂತೆ ಮಳೆಯ ಜೋರು ರೈತರು ಬಿತ್ತನೆ ಚಟುವಟಿಕೆಗಳಲ್ಲಿ ನಿರತರಾಗುವಂತೆ ಮಾಡಿದೆ. ಪಟ್ಟಣದಲ್ಲಿ ಮಧ್ಯಾಹ್ನ ಸುರಿದ ಭಾರೀ ಮಳೆಯಿಂದಾಗಿ ಮಳೆಯ ನೀರು ರಸ್ತೆಯ ಮೇಲೆಯೇ ಹರಿದು ಒಂದು ಗಂಟೆಗಳ ಕಾಲ ಜನಜೀವನ ಅಸ್ತವ್ಯಸ್ತವಾಯಿತು.
ಚರಂಡಿ ಸಮಸ್ಯೆಯಿಂದಾಗಿ ಮಳೆಯ ನೀರು ಚರಂಡಿ ತುಂಬಿ ಹರಿದವು. ಹಳೆಯ ಸರ್ಕಾರಿ ದವಾಖಾನೆಯ ಸುತ್ತ ಮುತ್ತಲೂ ಚರಂಡಿಗಳು ಒಡೆದು ಹೋಗಿರುವದರಿಂದ ಹಾಗೂ ಕೆಲವೆಡೆ ಬಂದ್ ಆಗಿರುವುದರಿಂದ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಕೆಲವು ಕಡೆ ಬಡಾವಣೆಯ ನಿವಾಸಿಗಳೇ ಚರಂಡಿಯನ್ನು ಸ್ವಚ್ಛಗೊಳಿಸುವ ಮೂಲಕ ನೀರು ತಮ್ಮ ಮನೆಗೆ ನುಗ್ಗದಂತೆ ನೋಡಿಕೊಂಡರು.
ಮೀನುಗಾರಿಕೆ ಕಚೇರಿಯ ಹಿಂದೆ ನಿಂತಿರುವ ಕೊಳಚೆ ನೀರಿಗೆ ಮಳೆ ನೀರು ಸೇರಿಕೊಂಡು ಅದು ದೂರವಾಣಿ ವರ್ಗಾವಣೆ ಕಚೇರಿ ಹಿಂದೆ ನಿರ್ಮಿಸಿರುವ ಬಡಾವಣೆಗೆ ಹರಿದು ಜನತೆ ತೀವ್ರ ತೊಂದರೆಗೆ ಒಳಗಾಗುವಂತೆ ಮಾಡಿತು. ಇದೇ ಪ್ರದೇಶದಲ್ಲಿ ಇರುವ ಎಂ.ಜಿ.ಎಂ.ಕೆ. ಶಾಲೆ, ಶಾರದಾ ವಿದ್ಯಾಮಂದಿರ, ಪ್ರಾರ್ಥನಾ ವಿದ್ಯಾ ಮಂದಿರ, ಜವಾಹರಲಾಲ ನೆಹರೂ ಶಾಲೆಯ ನೂರಾರು ಮಕ್ಕಳು ಮಳೆಯ ನೀರಿನಿಂದಾಗಿ ತೊಂದರೆ ಅನುಭವಿಸಿದವು. ಪಾಲಕರು ಸ್ವತಃ ಶಾಲೆಗೆ ಬಂದು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ಯಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.