ADVERTISEMENT

ರಕ್ತದಾನಿಗಳು ಆಪದ್ಬಾಂಧವರು

ವಿಶ್ವ ರಕ್ತದಾನ ದಿನಾಚರಣೆ ಇಂದು

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 9:12 IST
Last Updated 14 ಜೂನ್ 2013, 9:12 IST

ಬಾಗಲಕೋಟೆ: ಅವಶ್ಯವಿದ್ದ ಸಂದರ್ಭದಲ್ಲಿ ರಕ್ತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಅದರಂತೆ ನಗರದ ಮಾಧವ ರಕ್ತದಾನ ಮಾಹಿತಿ ಕೇಂದ್ರ ಮತ್ತು ವಂದನಾ ಭಟ್ಟಡ ಮೆಮೋರಿಯಲ್ ರಕ್ತದಾನ ಕೇಂದ್ರ, ರೆಡ್‌ಕ್ರಾಸ್ ಸೇರಿದಂತೆ ಇನ್ನಿತರ ಸಂಘದ ಸದಸ್ಯರು ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಲು ಮುಂದೆ ಇರುತ್ತಾರೆ.

ಮಾಧವ ರಕ್ತದಾನ ಮಾಹಿತಿ ಕೇಂದ್ರದಲ್ಲಿ 400ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಯಾರಾದರೂ ಅಪಘಾತದಲ್ಲಿ ತೀವ್ರ ಗಾಯಗೊಂಡು ರಕ್ತ ಹೋದಾಗ ಮತ್ತು ಗರ್ಭೀಣಿಯರಿಗೆ ರಕ್ತಸ್ರಾವ ಆದ ಸಂದರ್ಭದಲ್ಲಿ ಮತ್ತಿತರ ಗಂಡಾಂತರಗಳು ಆದಾಗ ರಕ್ತ ಕಡಿಮೆಯಾದಾಗ ಇವರನ್ನು ಸಂಪರ್ಕಿಸಿದರೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಕೇಂದ್ರಕ್ಕೆ ತೆರಳಿ ತಮ್ಮ ರಕ್ತ ದಾನ ಮಾಡಿ ಬರುವುದು ಇದೆ.

ಕಷ್ಟಕಾಲಕ್ಕೆ ನೆರವಾಗುವ ರಕ್ತದಾನಿಗಳು: ಮಾಧವ ರಕ್ತದಾನ ಮಾಹಿತಿ ಕೇಂದ್ರದ ಸದಸ್ಯ ಅಶೋಕ ಶಿಕ್ಕೇರಿ (ಬಿ-ನೆಗಟಿವ್) 35ಕ್ಕೂ ಹೆಚ್ಚು ಬಾರಿ, ಶ್ರಿಕಾಂತ ವಡೆ ಮತ್ತು ಅಶೋಕ ವಡೆ (ಬಿ- ನೆಗೆಟಿವ್) ಇವರು ಕಷ್ಟ ಕಾಲದಲ್ಲಿ ರಕ್ತದಾನ ಮಾಡಿದ ದಾನಿಗಳು. ಸಂಗಮೇಶ ಪಟ್ಟಣಶೆಟ್ಟಿ (ಎಬಿ ನೆಗೆಟಿವ್) 32 ಬಾರಿ, ನಾಗರಾಜ ಹದ್ಲಿ, ರಾಘವೇಂದ್ರ ಗುಮಾಸ್ತೆ, ಗೋವಿಂದ ದೇಶಮಾನೆ, ಶಿವಾನಂದ ಮಲ್ಲಾಪುರ, ವಿಠ್ಠಲ ಸರೋದೆ, ರಾಜು ಕೆಂಗಾಪುರ, ಮಹೇಶ ಅಂಗಡಿ, ಈಶ್ವರ ಇಂಡಿ ಸೇರಿದಂತೆ ಇನ್ನೂ ಹಲವರು 20ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ.

ಇದಲ್ಲದೆ ಇನ್ನೂ ಹಲವಾರು ಸಂಘ ಸಂಸ್ಥೆಗಳ ಸದಸ್ಯರು ಹಾಗೂ ರಕ್ತದಾನ ಮಾಡುವ ಇಚ್ಛೆಯುಳ್ಳವರು ರಕ್ತದಾನ ಶೇಖರಣೆ ಸಂಗ್ರಹ ಕೇಂದ್ರಕ್ಕೆ ಬಂದು ಸ್ವಇಚ್ಛೆಯಿಂದ ರಕ್ತದಾನ ಮಾಡಿದ ಉದಾಹರಣೆಗಳಿವೆ. ವಂದನಾ ಭಟ್ಟಡ ಮೆಮೋರಿಯಲ್ ಸಂಸ್ಥೆಯ ಶ್ರಿನಿವಾಸ ಭಟ್ಟಡ 50ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ.

ಮಧ್ಯರಾತ್ರಿಯಲ್ಲಿಯೂ ರಕ್ತದಾನ: ನಮ್ಮನ್ನು ಸಂಪರ್ಕ ಮಾಡಿದರೆ ರಾತ್ರಿಯಾದರೂ ರಕ್ತದಾನ ಮಾಡುತ್ತೇವೆ ಎಂದು ಮಾಧವ ರಕ್ತದಾನ ಮಾಹಿತಿ ಕೇಂದ್ರದ ಸದಸ್ಯ ನಾಗರಾಜ ಹದ್ಲಿ ಹೇಳುತ್ತಾರೆ. `ಕುಮಾರೇಶ್ವರ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿರುವ ರಕ್ತದಾನ ಕೇಂದ್ರಕ್ಕೆ ನಮ್ಮ ಕೇಂದ್ರದ ಸದಸ್ಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುತ್ತಾರೆ. ಯಾರಾದರೂ ರೋಗಿಯ ಸಂಬಂಧಿಕರಿಗೆ ತುರ್ತಾಗಿ ರಕ್ತ ನೀಡುವಾಗ ಅವರಿಂದ ಯಾವುದೇ ಹಣವನ್ನು ಸಹ ಸ್ವೀಕರಿಸದೇ ಸ್ವಂತ ಖರ್ಚಿನಲ್ಲಿ ಹೋಗಿ ರಕ್ತದಾನ ಮಾಡುತ್ತೇವೆ' ಎಂದರು.

`ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರ ಪ್ರದೇಶದಲ್ಲಿಯೂ ರಕ್ತದಾನ ಕುರಿತು ಜಾಗೃತಿ ಮೂಡಬೇಕಿದೆ. ಕೆಲವರಲ್ಲಿ ಇರುವ ಮೂಢನಂಬಿಕೆ ಹೋಗಲಾಡಿಸಬೇಕಾಗಿದೆ. ರಕ್ತ ಕೊಟ್ಟರೆ ಅಶಕ್ತರಾಗುತ್ತಾರೆ ಎಂಬ ಸಂಶಯ ದೂರ ಮಾಡುವುದು ಅವಶ್ಯ' ಎಂದರು.

`ಆರೋಗ್ಯದಲ್ಲಿ ಏರುಪೇರಿಲ್ಲ':  18ರಿಂದ 45 ವಯಸ್ಸಿನವರೆಗೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಆರೋಗ್ಯದಲ್ಲಿ ಯಾವುದೇ ಏರುಪೇರಾಗುವುದಿಲ್ಲ ಎಂದು ನಗರದ ಧನುಷ್ ಆಸ್ಪತ್ರೆ ಚಿಕ್ಕಮಕ್ಕಳ ತಜ್ಞ ಡಾ. ದೇವರಾಜ್ ಪಾಟೀಲ  ತಿಳಿಸಿದರು.

ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಹಳೆಯ ರಕ್ತ ಹೋಗಿ ಹೊಸ ರಕ್ತ ಬರುವುದರಿಂದ ಚೈತನ್ಯ ಮೂಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.