ADVERTISEMENT

ರಜೆ ಘೋಷಣೆಗೆ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 8:25 IST
Last Updated 11 ಅಕ್ಟೋಬರ್ 2011, 8:25 IST

ಬಾಗಲಕೋಟೆ: ಪ್ರತಿ ವರ್ಷ ಅಕ್ಟೋಬರ್ 23ರಂದು ಆಚರಿಸಲಾಗುವ ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವದಂದು ಸರ್ಕಾರ ರಜೆ ನೀಡಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟೀಷರ ವಿರುದ್ಧ ಪ್ರಪ್ರ ಥಮವಾಗಿ ಹೋರಾಟ ನಡೆಸಿ ಜಯಿಸಿದ ವೀರ ರಾಣಿ ಚೆನ್ನಮ್ಮಳ ವಿಜಯೋತ್ಸವವನ್ನು ಸರ್ಕಾರ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಸರ್ಕಾರಿ ಕಾರ್ಯ ಕ್ರಮವಾಗಿ ಆಚರಿಸಬೇಕು ಎಂದು ಹೇಳಿದರು.

ಅಕ್ಟೋಬರ್ 23ರಂದು `ಮಹಿಳೆಯರ ಸ್ವಾಭಿಮಾನದ ದಿನ~ ಎಂದು ಘೋಷಣೆ ಮಾಡ ಬೇಕು, ಸರ್ಕಾರ ಈ ಬೇಡಿಕೆಯನ್ನು ವರ್ಷದೊಳಗೆ ಈಡೇರಿಸದಿದ್ದರೆ ಕೂಡಲಸಂಗಮದಲ್ಲಿ ಉಪವಾಸ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಇಂಗ್ಲೆಂಡ್‌ನಲ್ಲಿರುವ ರಾಣಿ ಚೆನ್ನಮ್ಮಳ ಖಡ್ಗ ಮತ್ತು ದಾಖಲೆ ಪತ್ರಗಳನ್ನು ಸರ್ಕಾರ ಮರಳಿ ತರಲು ಮುಂದಾಗಬೇಕು ಎಂದು ಆಗ್ರಹಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕಾರಜೋಳ ಈ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಬೆಳಗಾವಿ ವಿಶ್ವವಿದ್ಯಾಲಯಕ್ಕೆ ರಾಣಿ ಚೆನ್ನಮ್ಮಳ ನಾಮಕರಣ ಮಾಡಿರುವುದನ್ನು ಮತ್ತು ಸಂಸತನ್‌ಲ್ಲಿ ಚೆನ್ನಮ್ಮಳ ಪ್ರತಿಮೆಯನ್ನು ಪ್ರತಿಷ್ಠಾಪಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿದರು.

ನವೆಂಬರ್ 11ರಂದು ವಿಜಯೋತ್ಸವ: ನವೆಂಬರ್ 11ರಂದು ಹುನಗುಂದದ ಬಸವ ಮಂಟಪದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ 188ನೇ ವಿಜಯೋತ್ಸವ ಮತ್ತು ಪಂಚಮಸಾಲಿ ಸಮಾಜದ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಂಡಿ ರುವುದಾಗಿ ಅವರು ತಿಳಿಸಿದರು.

ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಸಿ.ಸಿ.ಪಾಟೀಲ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮತ್ತಿತರರು ಆಗಮಿಸಲಿದ್ದಾರೆ ಎಂದ ಅವರು, ಕಾರ್ಯ ಕ್ರಮದಲ್ಲಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ವಂಶಸ್ಥರನ್ನು ಸನ್ಮಾನಿಸಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಕಾರ್ಯಕ್ರಮಕ್ಕೂ ಮುನ್ನ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಹುನಗುಂದ ನಗರದಲ್ಲಿ ನಡೆಯಲಿದೆ ಎಂದು ಹೇಳಿದರು.

ಪದಾಧಿಕಾರಿಗಳ ಆಯ್ಕೆ: ವೀರ ರಾಣಿ ಚೆನ್ನಮ್ಮ  ವಿಜಯೋತ್ಸವ ಮತ್ತು ಪಂಚಮಸಾಲಿ ಸಮಾಜದ ಜಿಲ್ಲಾ ಸಮಾವೇಶವ ಯಶಸ್ವಿಯಾಗಿ ಪದಾಧಿ ಕಾರಿಗಳನ್ನು ನೇಮಕ ಮಾಡಲಾಗಿದ್ದು, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರನ್ನು ಮಹಾ ಪೋಷಕರನ್ನಾಗಿ ಮತ್ತು ಶಾಸಕ ಸಿದ್ದು ಸವದಿ ಅವರನ್ನು ಪೋಷಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಗೌರವ ಅಧ್ಯಕ್ಷರಾಗಿ ರಾಜಶೇಖರ ಕಂಠಿ, ಅಧ್ಯಕ್ಷರಾಗಿ ಡಾ. ವಿಜಯಾನಂದ ಕಾಶಪ್ಪನವರ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕು ಅಧ್ಯಕ್ಷರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಡಾ. ವಿಜಯಾನಂದ ಕಾಶಪ್ಪನವರ, ಟಿ.ಎಂ.ಭಗವತಿ, ವಿರೂಪಾಕ್ಷಪ್ಪ ಬೆಟಗೇರಿ, ಸಿದ್ದನಗೌಡ ಹಂಪನ ಗೌಡರ, ದಾನಪ್ಪಗೋಳ, ಪಿ.ಜಿ. ಉಡುಬಿನ್ನವರ, ಡಾ. ರಾಜಶೇಖರ ಕಂಠಿ, ಶೇಖರಪ್ಪ ಬಾದವಾಡಗಿ, ಅಮರೇಶ ನಾಗೂರು, ಶಿವು ಗದ್ದಿ, ಮುತ್ತಣ್ಣ ಕಲ್ಲಗುಡಿ, ಮಹಾಂತೇಶ ಹಳ್ಳೂರ, ರಾಜಶೇಖರ ಬಾದವಾಡಗಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.