ADVERTISEMENT

ರಾಜ್ಯದಲ್ಲಿ 1.75 ಕೋಟಿ ಜನ ಕುಡುಕರು

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 6:25 IST
Last Updated 2 ಜುಲೈ 2012, 6:25 IST

ಬಾಗಲಕೋಟೆ: `ರಾಜ್ಯದಲ್ಲಿ 1.75 ಕೋಟಿ ಜನರು ಕುಡಿತದ ಚಟಕ್ಕೆ ಒಳಗಾಗಿದ್ದಾರೆ. ಪ್ರತಿ ವರ್ಷ 25 ಲಕ್ಷ ಜನರು ಈ ಹವ್ಯಾಸಕ್ಕೆ ಸೇರ್ಪಡೆಯಾಗುತ್ತಿದ್ದಾರೆ~ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ  ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಮದ್ಯಪಾನ ಹಾಗೂ ಮಾದಕ ವಸ್ತುಗಳ ಸೇವನೆಯಲ್ಲಿ ಪ್ರತಿವರ್ಷ ಶೇ. 25ರಷ್ಟು ಹೆಚ್ಚಾಗುತ್ತಿರುವುದಾಗಿ ಹೇಳಿದರು.

16 ರಿಂದ 30 ವರ್ಷದೊಳಗಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೇ ಈ ಮಾಯಜಾಲಕ್ಕೆ ಬೀಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜಧಾನಿ ಬೆಂಗಳೂರು ಒಂದರಲ್ಲಿಯೇ ಶೇ 30 ರಷ್ಟು ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯ ದಾಸರಾಗಿದ್ದಾರೆ ಎಂಬುದು  ಲೈನ್ಸ್ ಸಂಸ್ಥೆ ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದರು. ಮಾದಕ ವಸ್ತು ಸೇವನೆ ತಡೆಯಲು ಮಂಡಳಿ ವಿವಿಧ ಸರ್ಕಾರಿ ಇಲಾಖೆಗಳು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಅರಿವಿನ ಆಂದೋಲನ ಕಾರ್ಯಕ್ರಮ ಏರ್ಪಡಿಸುತ್ತಿದೆ ಎಂದು ಹೇಳಿದರು.

ಬೆಂಗಳೂರಿನ ಗಾಂಧಿಭವನದಲ್ಲಿ ಎಲ್ಲ ಸಂಘಟನೆ ಸೇರಿಕೊಂಡು ಮದ್ಯಪಾನದ ವಿರುದ್ದ ದೊಡ್ಡ ಆಂದೋಲನ ಪ್ರಾರಂಭಿಸಿದೆ. ಇದಕ್ಕೆ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಕಾರ ನೀಡುತ್ತಿವೆ ಎಂದರು.

ಮದ್ಯಪಾನ ಸಂಯಮ ಮಂಡಳಿ ಕುಡಿತದಿಂದಾಗುವ ಅನಾಹುತದ ಬಗ್ಗೆ, ದಾಂಪತ್ಯ ವಿರಸ ಹಾಗೂ ಕುಟುಂಬಗಳ ವಿಘಟನೆ ಕುರಿತಂತೆ ನಿಖರವಾದ ಅಧ್ಯಯನ ಮಾಡುವ ಉದ್ದೇಶ ಹೊಂದಿದೆ. ಅಲ್ಲದೇ ಸಾಮಾಜಿಕ ಅನಾಹುತಗಳ ಬಗ್ಗೆ, ಮಾದಕ ವಸ್ತುಗಳಿಂದ ಸಮಾಜದ ಮೇಲೆ ಆಗುವ ಹಾನಿ ಬಗ್ಗೆಯೂ ಸಹ ಅಧ್ಯಯನ ನಡೆಸಲಿದೆ ಎಂದರು.

ಪ್ರಶಸ್ತಿ ಪ್ರದಾನ ಇಂದು
 ಈ ವರ್ಷದ ಸಂಯಮ ಪ್ರಶಸ್ತಿ ಗೌರವ ಸ್ವೀಕರಿಸುತ್ತಿರುವ ಮಹಾಂತ ಜೋಳಿಗೆಯ ಹರಿಕಾರ ಇಳಕಲ್‌ನ ಡಾ.ಮಹಾಂತಶ್ರಿ  ಕಳೆದ 4 ದಶಕಗಳಿಂದ ತಮ್ಮ ಮಹಾಂತ ಜೋಳಿಗೆಯ ಮೂಲಕ ಲಕ್ಷಾಂತರ ಜನರ ವ್ಯಸನಗಳನ್ನು ದಾನಪಡೆದವರು.

ಸಹಸ್ರಾರು ಗ್ರಾಮಗಳಿಗೆ ಭೇಟಿ ನೀಡಿ ವ್ಯಸನಮುಕ್ತ ಸಮಾಜ ನಿರ್ಮಿಸಲು ನಿರಂತರ ಶ್ರಮಿಸುತ್ತಿರುವ ಮಹಾಂತ ಶಿವಯೋಗಿಗಳಿಗೆ ನಾಳೆ ಬಾಗಲಕೋಟೆಯಲ್ಲಿ ನಡೆಯುವ ಸಮಾರಂಭದಲ್ಲಿ `ಸಂಯಮ ಪ್ರಶಸ್ತಿ~ ನೀಡಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.

ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಅಧ್ಯಕ್ಷತೆ ವಹಿಸುವರು.

ಸಚಿವ ಮುರಗೇಶ ನಿರಾಣಿ ಅವರು  `ಮಹಾಂತ ಜೋಳಿಗೆ~ ಸಾಕ್ಷ್ಯ  ಚಿತ್ರ ಬಿಡುಗಡೆ ಮಾಡುವರು. ಶಾಸಕ ವೀರಣ್ಣ ಚರಂತಿಮಠ  ಅಭಿನಂದನಾ ಭಾಷಣ ಮಾಡಲಿದ್ದಾರೆ.

ಚರಂತಿಮಠದ ಜಗದ್ಗುರು ಪ್ರಭು ಸ್ವಾಮೀಜಿ ಸಾನ್ನಿದ್ಯ ವಹಿಸುವರು. ಇಲಕಲ್-ಸವದಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಉಪಸ್ಥಿತರಿರುವರು. ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಸರ್ಕಾರ ಕಾರ್ಯದರ್ಶಿ ಬಸವರಾಜು, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಎಸ್‌ಪಿ ಈಶ್ವರ ಚಂದ್ರ ವಿದ್ಯಾಸಾಗರ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ.ಪಾಟೀಲ, ವಾರ್ತಾ ಇಲಾಖೆಯ ನಿರ್ದೇಶಕರ ಎನ್.ಆರ್. ವಿಶುಕುಮಾರ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಬೆಂಗಳೂರಿನ ಗಾಂಧಿಸ್ಮಾರಕ ನಿಧಿ ಅಧ್ಯಕ್ಷ ಡಾ.ಹೊ. ಶ್ರಿನಿವಾಸಯ್ಯ, ಮಂಡಳಿಯ ಕಾರ್ಯದರ್ಶಿ ಎಚ್.ಬಿ.ದಿನೇಶ, ವಾರ್ತಾ ಇಲಾಖೆ ಬೆಳಗಾವಿ ವಿಭಾಗದ ಉಪನಿರ್ದೇಶಕ ಬಸವರಾಜ ಕಂಬಿ  ಪ್ರತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.