ADVERTISEMENT

ರೈಲು ಮಾರ್ಗ ಸಂಚಾರಕ್ಕೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 15 ಜೂನ್ 2017, 9:09 IST
Last Updated 15 ಜೂನ್ 2017, 9:09 IST
ರೈಲು ಮಾರ್ಗ ಸಂಚಾರಕ್ಕೆ ಸಿದ್ಧ
ರೈಲು ಮಾರ್ಗ ಸಂಚಾರಕ್ಕೆ ಸಿದ್ಧ   

ಬಾಗಲಕೋಟೆ: ಬಾಗಲಕೋಟೆಯಿಂದ ಮುಧೋಳ ತಾಲ್ಲೂಕು ಖಜ್ಜಿಡೋಣಿ ನಡುವೆ ಸಿದ್ಧಗೊಂಡಿರುವ 33 ಕಿ.ಮೀ ದೂರದ ನೂತನ ರೈಲು ಮಾರ್ಗವನ್ನು ನೈರುತ್ಯ ರೈಲ್ವೆ ಸುರಕ್ಷತಾ ಆಯುಕ್ತ ಕೆ.ಎ.ಮನೋಹರನ್‌ ನೇತೃತ್ವದಲ್ಲಿ ಬುಧವಾರ ಪರೀಕ್ಷೆಗೆ ಒಳಪಡಿಸಲಾಯಿತು.

ಇದರಿಂದ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಔದ್ಯೋಗಿಕ ಸಂಪರ್ಕದ ಕೊಂಡಿ ಎಂದು ಪರಿಗಣಿಸಲಾದ ಬಾಗಲಕೋಟೆ–ಕುಡಚಿ ನಡುವಿನ ರೈಲ್ವೆ ಯೋಜನೆಯ ಭಾಗಶ: ಕಾಮಗಾರಿ  ಪೂರ್ಣಗೊಂಡಂತಾಗಿದೆ.

ಮುಂಜಾನೆ ಎಂಟು ಸ್ವಯಂಚಾಲಿತ ಟ್ರಾಲಿಗಳಲ್ಲಿ ತಂತ್ರಜ್ಞರು, ಎಂಜಿನಿಯರ್‌ಗಳೊಂದಿಗೆ ಹೊಸ ಮಾರ್ಗದಲ್ಲಿ ಮನೋಹರನ್ ಸಂಚರಿಸಿದರು. ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಎ.ಕೆ.ಜೈನ್ ಇದ್ದರು.

ಸುರಕ್ಷತೆ ಪರಿಶೀಲನೆ ನಂತರ ಸಂಜೆ ಖಜ್ಜಿಡೋಣಿಯಿಂದ ಬಾಗಲಕೋಟೆವರೆಗೆ 11 ಬೋಗಿಗಳನ್ನು ಒಳಗೊಂಡ ಪ್ಯಾಸೆಂಜರ್‌ ರೈಲನ್ನು ಪ್ರತಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಓಡಿಸಿ ಮಾರ್ಗದ ತಾಳಿಕೆ ಪರೀಕ್ಷೆ ನಡೆಸಲಾಯಿತು. ಪರಿಶೀಲನಾ ವರದಿಯನ್ನು ಸುರಕ್ಷತಾ ಆಯುಕ್ತರು ವಾರದೊಳಗೆ ನೀಡಲಿದ್ದಾರೆ. ನಂತರ ಈ ಮಾರ್ಗ ರೈಲು ಸಂಚಾರಕ್ಕೆ ತೆರೆದುಕೊಳ್ಳಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಭೂಸ್ವಾಧೀನ ಪ್ರಕ್ರಿಯೆ ವಿಳಂಬ: ‘ಯೋಜನೆಗಾಗಿ ಜಮಖಂಡಿ ಉಪವಿಭಾಗದಲ್ಲಿ 1,200 ಎಕರೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ 400 ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ. 2009ರಲ್ಲಿ ಮಮತಾ ಬ್ಯಾನರ್ಜಿ ರೈಲ್ವೆ ಸಚಿವರಾಗಿದ್ದಾಗ ಈ ಯೋಜನೆಗೆ ಒಟ್ಟು ₹ 816 ಕೋಟಿ ತೆಗೆದಿಟ್ಟಿದ್ದರು. ಅದರಂತೆ ಮರುವರ್ಷವೇ ಕಾಮಗಾರಿ ಆರಂಭವಾಯಿತು.

ಯೋಜನೆ ಪೂರ್ಣಗೊಳಿಸಲು ಐದು ವರ್ಷಗಳ ಕಾಲಮಿತಿ ನಿಗದಿಪಡಿಸಲಾಗಿತ್ತು. ನಿಗದಿತ ಅವಧಿಯಲ್ಲಿ ಭೂಸ್ವಾಧೀನ ಪೂರ್ಣಗೊಂಡು ಕಾಮಗಾರಿ ಮುಗಿದಿದ್ದರೆ  ಎರಡು ವರ್ಷಗಳ ಹಿಂದೆಯೇ ಬಾಗಲಕೋಟೆ–ಕುಡಚಿ ನಡುವೆ ರೈಲು ಓಡಾಟ ಆರಂಭವಾಗಬೇಕಿತ್ತು’ ಎಂದು ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಹೇಳುತ್ತಾರೆ.

‘ಜಮಖಂಡಿ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಭೂಸ್ವಾಧೀನಕ್ಕೆ ಆಗುತ್ತಿರುವ ವಿಳಂಬ ಹಾಗೂ ಲೋಕಾ ಪುರ–ಮುಧೋಳ ನಡುವೆ ರೈಲ್ವೆ ಮಾರ್ಗದ ನೀಲನಕ್ಷೆ ಬದಲಾದ ಪರಿ ಣಾಮ ಶೇ 25ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ಈಗ ನಿರ್ಮಾಣ ವೆಚ್ಚವೂ ಹೆಚ್ಚಳವಾಗಿದೆ. ಇದೀಗ 2013ರ ಹೊಸ ಭೂಸ್ವಾಧೀನ ಕಾಯ್ದೆ ಯಡಿ ರಾಜ್ಯ ಸರ್ಕಾರ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದೆ. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ವೇಗ ಪಡೆಯು ತ್ತಿಲ್ಲ’ ಎಂಬುದು ಅವರ ಆರೋಪ.

ಕಲಾದಗಿ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ಮನವಿ
ಕಲಾದಗಿ:
ಪ್ರಾಯೋಗಿಕ ರೈಲು ಸಂಚಾರ ಪ್ರಾರಂಭಿಸಲು ಕಾಮಗಾರಿ ಗುಣ ಮಟ್ಟವನ್ನು ವೀಕ್ಷಿಸುತ್ತಾ ಖಜ್ಜಿಡೋಣಿ ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿದ್ದ ಅಧಿಕಾರಿ ಗಳನ್ನು ತಡೆದು ಮನವಿ ಸಲ್ಲಿಸಿದರು.

ಗ್ರಾಮ 22 ಸಾವಿರ ಜನಸಂಖ್ಯೆ ಹೊಂದಿದ್ದು, ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ತನ್ನದೆಯಾದ ಹೆಸರು ಪಡೆದಿದೆ, ಬ್ರಿಟಿಷರ ಆಳ್ವಿಕೆಯ ಮುನ್ನ 1864 ರಿಂದ 1884ರವರೆಗೆ 20 ವರ್ಷಗಳ ಕಾಲ ಜಿಲ್ಲೆಯಾಗಿದ್ದ ಈ ಊರು ತೋಟಗಾರಿಕೆ ಬೆಳೆಗೆ ಪ್ರಸಿದ್ಧಿ ಪಡೆದಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಮುಳುಗಡೆಯಾಗಿದ್ದು, ಈಗ ನಿಲ್ದಾಣಕ್ಕೆ 2 ಕಿ.ಮೀ. ದೂರದಲ್ಲಿದ್ದು, ಈ ಗ್ರಾಮದ ಪುನರ್ವಸತಿ ಜಾಗವನ್ನು ಸರ್ಕಾರ ನೀಡಿದೆ. ಆದ್ದರಿಂದ   ಇಲ್ಲಿಯೇ ನಿಲ್ದಾಣ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಜೆ.ಡಿ.ಚೌಧರಿ, ಡಿ.ಡಿ.ದುರ್ವೆ, ಕ್ಷಷ್ಟಪ್ಪ ಶಿಲ್ಪಿ, ಮಲಕಾಜಪ್ಪ ಮಂಟೂರ, ಅಬ್ದುಲ್‌ ಖಾನ ಪಠಾಣ, ಹಸನ್ಮದ್ ರೋಣ, ರಫೀಕ್ ಬೇಪಾರಿ, ಶಬ್ಬೀರ್ ಮನಿಯಾರ, ಮಲ್ಲಪ್ಪ ಜಮಖಂಡಿ, ಯಲ್ಲಪ್ಪ ಹೊಸಕೋಟಿ, ಸದು ಜಾಡರ, ಬದ್ರು ಶಿಲ್ಪಿ, ರಜಾಕಸಾಬ್ ಇದ್ದರು.

ಐದು ರೈಲು ನಿಲ್ದಾಣಗಳು ಸಿದ್ಧ
ಬಾಗಲಕೋಟೆ–ಕುಡಚಿ ನಡುವೆ 143 ಕಿ.ಮೀ ರೈಲು ಮಾರ್ಗ ನಿರ್ಮಾಣಕ್ಕೆ 2010ರಲ್ಲಿ ಚಾಲನೆ ನೀಡಲಾಗಿದೆ. ಏಳು ವರ್ಷಗಳಲ್ಲಿ ಖಜ್ಜಿಡೋಣಿವರೆಗೆ ಮಾತ್ರ ಮಾರ್ಗ ಪೂರ್ಣಗೊಂಡಿದೆ. ನವನಗರ, ಬಾದಾಮಿ ತಾಲ್ಲೂಕಿನ ಸೂಳಿಕೇರಿ, ಕೆರಕಲಮಟ್ಟಿ, ಹಿರೇಶೆಲ್ಲಿಕೇರಿ ಹಾಗೂ ಖಜ್ಜಿಡೋಣಿ ಹೊಸ ರೈಲು ನಿಲ್ದಾಣಗಳನ್ನು ನಿರ್ಮಿಸಲಾಗಿದೆ.

ADVERTISEMENT

ನವನಗರ ರೈಲು ನಿಲ್ದಾಣ: ಯೋಜನೆಯಡಿ ಹೊಸದಾಗಿ ಬಾಗಲಕೋಟೆ ನಗರದ ವ್ಯಾಪ್ತಿಯಲ್ಲಿ ನವನಗರ ರೈಲು ನಿಲ್ದಾಣವನ್ನು ಸಿದ್ಧಗೊಳಿಸಲಾಗಿದೆ. ಗದಗ–ಹುಟಗಿ ಜೋಡಿ ಮಾರ್ಗ ಕೂಡ ಇದೇ ನಿಲ್ದಾಣದ ಮೂಲಕ ಹಾದು ಹೋಗಿದೆ. ಇದರಿಂದ ಮಂದಿನ ದಿನಗಳಲ್ಲಿ ನವನಗರ ನಿಲ್ದಾಣ ಹೆಚ್ಚು ಜನದಟ್ಟಣೆಯಿಂದ ಕೂಡಲಿದೆ. ನವನಗರ ನಿಲ್ದಾಣದಲ್ಲಿ ಪ್ರಯಾಣಿಕರ ವಿಶ್ರಾಂತಿ ಗೃಹ, ಸ್ಟೇಶನ್‌ ಮಾಸ್ಟರ್ ಕೊಠಡಿ, ಟಿಕೆಟ್ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.