ADVERTISEMENT

ಶೀಘ್ರ, ಗುಣಮಟ್ಟದ ತೀರ್ಪು ಅಗತ್ಯ: ನ್ಯಾ.ಹಿಂಚಿಗೇರಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 8:10 IST
Last Updated 20 ಫೆಬ್ರುವರಿ 2012, 8:10 IST

ಬಾಗಲಕೋಟೆ: ಶೀಘ್ರ  ಹಾಗೂ ಗುಣಮಟ್ಟದ ತೀರ್ಪುಗಳು ನ್ಯಾಯಾಲಯದಿಂದ ಬರಬೇಕಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಬಾಗಲಕೋಟೆ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಹೇಳಿದರು.

ನವನಗರದ ಸೆಕ್ಟರ್ 24ರಲ್ಲಿ ರೂ.6.6ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೋರ್ಟ್, ಆಸ್ಪತ್ರೆ ಮತ್ತು ಪೊಲೀಸ್ ಠಾಣೆಗೆ ಯಾರೊಬ್ಬರೂ ಸ್ವ ಇಚ್ಛೆಯಿಂದ ಬರುವುದಿಲ್ಲ, ನೊಂದಾಗ, ಅನ್ಯಾಯಕ್ಕೆ ಒಳಗಾದಾಗ ಮಾತ್ರ ಬರುತ್ತಾರೆ. ಇಂತಹ ನೊಂದವರ ಕಣ್ಣೀರು ಒರೆಸುವ ಕಾರ್ಯ ಕೋರ್ಟ್‌ನಿಂದಾಗಬೇಕು ಎಂದರು.

ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿ ಸಮರ್ಪಣಾ ಭಾವದಿಂದ ದೂರುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ ಕಡಿಮೆ ಖರ್ಚಿನಲ್ಲಿ  ನ್ಯಾಯ ಒದಗಿಸಬೇಕು ಎಂದು ಹೇಳಿದರು.

ನೂತನ ನ್ಯಾಯಾಲಯ ಉದ್ಘಾಟನೆಯಿಂದ ಬಾಗಲಕೋಟೆ ಜಿಲ್ಲೆಯ ಜನತೆಯ ಬಹುದಿನದ ಕನಸು ನನಸಾಗಿದೆ ಎಂದ ಅವರು, ನ್ಯಾಯಾಲಯವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಷ್ಟು ಖರ್ಚು ಮಾಡಿ  ಕಟ್ಟಡ ನಿರ್ಮಿಸಿದ್ದಾರೆ ಎನ್ನುವುದಕ್ಕಿಂತ ಯಾರ ಹಣದಲ್ಲಿ ಕಟ್ಟಿಸಲಾಗಿದೆ ಎಂಬುದು ಮುಖ್ಯ ಎಂದರು. ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಮಾತನಾಡಿ, ನ್ಯಾಯಾಲಯದ ದುರುಪಯೋಗವಾಗದಂತೆ ಹೊಸ ಕಾನೂನು ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕೋರ್ಟ್ ನೀಡುವ ತೀರ್ಪಿನಿಂದ ಜನರು ಹೆಚ್ಚು-ಹೆಚ್ಚು ನ್ಯಾಯಾಲಯಕ್ಕೆ ಬರುವಂತಾಗಬೇಕು ಎಂದ ಅವರು, ಲೋಕಪಾಲ್ ಮಸೂದೆ ಜಾರಿ ಬಳಿಕ ನ್ಯಾಯಿಕ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ನಿರೀಕ್ಷಿಸಬಹುದಾಗಿದೆ ಎಂದರು.

 ಹೈಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯದ ವಿವಿಧ ನ್ಯಾಯಾಲಯಗಳಿಗೆ ಮತ್ತು ನ್ಯಾಯಾಧೀಶರಿಗೆ ಸರ್ಕಾರ ಉತ್ತಮ ಸೌಲಭ್ಯ ಒದಗಿಸಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸಾಕ್ಷಿದಾರ ಇಲ್ಲದೇ ದೂರುಗಳಿಗೆ ನ್ಯಾಯ ಒದಗಿಸಲು ಅಸಾಧ್ಯ,  ಕೋರ್ಟ್‌ಗಳು ಗುಣಮಟ್ಟದ ಮತ್ತು ಶೀಘ್ರ ತೀರ್ಪು ನೀಡಬೇಕಾದರೆ ಸಾಕ್ಷಿದಾರರು ಕೋರ್ಟ್‌ಗೆ ಹಾಜರಾಗಬೇಕು, ಆದರೆ ಸಾಕ್ಷಿದಾರರು ನ್ಯಾಯಾಲಯದ ಮೆಟ್ಟಿಲೇರಲು ಹಿಂಜರಿಯುತ್ತಿದ್ದಾರೆ ಎಂದು ಹೇಳಿದರು.

ಅಂತರರಾಜ್ಯ ನೀರು ಹಂಚಿಕೆ ಕುರಿತ ತೀರ್ಪುಗಳನ್ನು ಅದರಲ್ಲೂ ವಿಶೇಷವಾಗಿ ರಾಜ್ಯಕ್ಕೆ ಸಂಬಂಧಪಟ್ಟ ಕಾವೇರಿ ಮತ್ತು ಕೃಷ್ಣಾ ಕೊಳ್ಳದ ನೀರು ಹಂಚಿಕೆ ತೀರ್ಪುಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಮಾತನಾಡಿ, ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಿಸಿದಂತೆ, ಆದ ಕಾರಣ ಶೀಘ್ರ ನ್ಯಾಯದಾನ ಮುಖ್ಯ ಎಂದರು.

ಪ್ರಜಾಪ್ರಭುತ್ವದ ಮೌಲ್ಯ ಉಳಿಯಬೇಕಾದರೆ ನ್ಯಾಯಾಲಯಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ, ಕಾರ್ಯಾಂಗ ಮತ್ತು ಶಾಸಕಾಂಗ ತಪ್ಪು ಮಾಡಿದಾಗ ಹದ್ದುಬಸ್ತಿನಲ್ಲಿಡುವ ಕಾರ್ಯವನ್ನು ನ್ಯಾಯಾಲಯ ಮಾಡಬೇಕಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ನೂತನ ನ್ಯಾಯಾಲಯಕ್ಕೆ ಅಗತ್ಯವಿರುವ ಹೊಸ ಪೀಠೋಪಕರಣವನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆರಂಭದಿಂದಾಗಿ ನವನಗರದ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವಕೀಲ ಜಿ.ಜಿ.ಪಾಟೀಲ ವಿರಚಿತ ನ್ಯಾಯದೇವತೆಯ ಚಿತ್ರವನ್ನು ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಅನಾವರಣಗೊಳಿಸಿದರು.

ಸಚಿವ ಎಸ್. ಸುರೇಶಕುಮಾರ್, ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶಿವಶಂಕರ ಅಮರಣ್ಣವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಜಿ.ರೊಡ್ಡಣ್ಣವರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.