ADVERTISEMENT

ಶ್ರೀರಾಮುಲು ಭರಪೂರ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 6:10 IST
Last Updated 3 ಅಕ್ಟೋಬರ್ 2012, 6:10 IST

ಬಾಗಲಕೋಟೆ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಜನತೆ ಅಧಿಕಾರಕ್ಕೆ ತಂದರೇ, ನಿರುದ್ಯೋಗಿ ಯುವಕರಿಗೆ ಮಾಸಿಕ ರೂ.5 ಸಾವಿರ ನಿರುದ್ಯೋಗ ಭತ್ಯೆ, ರೈತರು ಬೆಳೆದ ಪ್ರತಿ ಟನ್ ಕಬ್ಬಿಗೆ ರೂ. 5 ಸಾವಿರ ಬೆಂಬಲ ಬೆಲೆ, ಬಡವರಿಗೆ ಮತ್ತು ನಿರಾಶ್ರಿತರಿಗೆ ವಸತಿ ಮತ್ತು ಸರ್ಕಾರದಿಂದಲೇ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಪಕ್ಷದ ಅಧ್ಯಕ್ಷ ಶ್ರೀರಾಮುಲು ಭರವಸೆ ನೀಡಿದರು.

ನಗರದ ಸಕ್ರಿ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಬಿಎಸ್‌ಆರ್ ಕಾಂಗ್ರೆಸ್‌ನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ, ಭಾಗ್ಯಲಕ್ಷ್ಮಿ ಬಾಂಡ್ ವಿತರಣೆಯಾಗಿಲ್ಲ, ಅಂಗವಿಕಲರು, ವಿಧವೆಯರು ಮತ್ತು ವೃದ್ಧರಿಗೆ ಸಾಮಾಜಿಕ ಭದ್ರತಾ ವೇತನ ನೀಡದೇ ನಿರ್ಲಕ್ಷ್ಯಿಸಲಾಗಿದೆ, ಪಡಿತರ ಚೀಟಿ ವಿತರಣೆ ಸಮರ್ಪಕವಾಗಿ ಆಗದಿರುವುದರಿಂದ ಬಡವರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದರು.

ಪಕ್ಷದ ಮುಖಂಡರಾದ ರಾಜು ಹಂಗರಗಿ, ವೀರಣ್ಣ ಹಳೇಗೌಡರ, ವೈ.ಎನ್.ಗೌಡರ, ರಾಜು ತಾಳಿಕೋಟೆ, ಜಯಶ್ರೀ ಸಾಲಿಮಠ, ಶ್ರೀನಿವಾಸ ಬೆಟಗೇರಿ, ಮಲ್ಲಿಕಾರ್ಜುನ ಸುರಪುರ, ಎಂ.ಎಸ್. ಪಾಟೀಲ, ಡಾ. ಮಾಣಿ ಪಾಟೀಲ, ಪ್ರಕಾಶ ನಾಯ್ಕರ್, ಪಿ.ರಾಜು, ಸಂಜಯ ಬೆಟಗೇರಿ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಸಮಾವೇಶಕ್ಕೂ ಮುನ್ನ ನಗರದ ಪ್ರಮುಖ ಮಾರ್ಗಗಳಲ್ಲಿ ಶ್ರೀರಾಮುಲು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ನಗರದ ಸಾಬಣ್ಣ ಗಲ್ಲಿಯಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಗಮನ ಸೆಳೆದರು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ದುಗ್ಗಾವರದಿಂದ ಆಗಮಿಸಿದ್ದ ಮಂಜುನಾಥ ಮತ್ತು ವೀಣಾ ದಂಪತಿಯ ಪುತ್ರಿ, ಅನಾರೋಗ್ಯದಿಂದ ಬಳಲುತ್ತಿರುವ ಐಶ್ವರ್ಯಳ (11) ಚಿಕಿತ್ಸೆಗೆ ಶ್ರೀರಾಮುಲು ಧನಸಹಾಯ ಮಾಡಿದರು.

ಸಂಚಲನ: ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಸಂಕಲ್ಪ ಯಾತ್ರೆಯ ಮೂಲಕ ರಾಜ್ಯದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಲಾಗಿದೆ. ಪ್ರತಿಪಕ್ಷಗಳಲ್ಲಿ ನಡುಕ ಹುಟ್ಟಿಸಿದೆ. ಮುಂದಿನ ಚುನಾವಣೆಯಲ್ಲಿ ಎಲ್ಲ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತತ್ವ ಸಿದ್ಧಾಂತ ಏನೆಂಬುದೇ ಅರ್ಥವಾಗುತ್ತಿಲ್ಲ, ಅಂತಹ ದೊಡ್ಡವರನ್ನು ನಮ್ಮ ಪಕ್ಷಕ್ಕೆ ಆಹ್ವಾನಿಸುವುದಿಲ್ಲ ಎಂದು ಹೇಳಿದರು.

ಜನತೆಯ ಋಣ ತೀರಿಸುವೆ
ಜಮಖಂಡಿ:
ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲ ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ, ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜಾರಿಗೊಳಿಸುವ ಮೂಲಕ ರಾಜ್ಯದ ಜನತೆಯ ಋಣ ತೀರಿಸಲಾಗುವುದು ಎಂದು ಬಿಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ, ಶಾಸಕ ಶ್ರೀರಾಮುಲು ಘೋಷಿಸಿದರು.

ಬಿಎಸ್‌ಆರ್ ಪಕ್ಷ ಕೈಕೊಂಡಿರುವ ಸ್ವಾಭಿಮಾನಿ ಸಂಕಲ್ಪಯಾತ್ರೆ ಅಂಗವಾಗಿ ಅವರು ಸೋಮವಾರ ಜಮಖಂಡಿಗೆ ಆಗಮಿಸಿದ್ದ ಪ್ರಯುಕ್ತ ಇಲ್ಲಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಈ ದೇಶದಲ್ಲಿ ಹಗರಣಗಳ ಸರಮಾಲೆ ಹೊತ್ತಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಹಣ ಮಾಡುವ ದಾಹ ಇನ್ನೂ ತೀರಿಲ್ಲ. ಹಾಗಾಗಿ ಬಡವರ ಮೇಲೆ ಹೊರೆ ಹೇರುತ್ತಿದೆ ಎಂದು ಟೀಕಿಸಿದರು. ಸೋನಿಯಾ ಗಾಂಧಿ ಅವರ ರಿಮೋಟ್ ಕಂಟ್ರೋಲ್‌ನಲ್ಲಿರುವ ಪ್ರಧಾನಿ ಮನಮೋಹನ ಸಿಂಗ್ ಅವರಂತಹ ಪ್ರಧಾನಿ ನಮ್ಮ ದೇಶಕ್ಕೆ ಬೇಕೇ? ಎಂದು ಖಾರವಾಗಿ ಪ್ರಶ್ನಿಸಿದರು.

ನಮ್ಮ ಜಮೀನು, ವಿದ್ಯುತ್ ಕೊಟ್ಟು ನಮ್ಮ ಬ್ಯಾಂಕುಗಳ ಮೂಲಕ ಸಾಲ ನೀಡಿ ನಮ್ಮ ಜನರೇ ಗುಲಾಮರಾಗಿ ಕೆಲಸ ಮಾಡಬೇಕಾದಂತಹ ಕೇಂದ್ರ ಸರ್ಕಾರದ ಎಫ್‌ಡಿಐ ನೀತಿಯನ್ನು ಖಂಡಿಸಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರನ್ನು ಭಾರತದಿಂದ ಓಡಿಸಿದ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕಿತ್ತೆಸೆಯಬೇಕಾಗಿದೆ ಎಂದು ಗುಡುಗಿದರು.

ಬಿಎಸ್‌ಆರ್ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪಂಚ ನದಿಗಳಿಂದ ಕೂಡಿರುವ ಅಖಂಡ ವಿಜಾಪುರ ಜಿಲ್ಲೆಯ ಜಮೀನುಗಳಿಗೆ ನೀರು ಕೊಟ್ಟು ಹಾಗೂ ಕೆರೆ ತುಂಬಿಸುವ ಯೋಜನೆ ಜಾರಿಗೊಳಿಸಿ, ಎಲ್ಲರ ಸಂಕಷ್ಟ ನಿವಾರಿಸುವುದಾಗಿ ಭರವಸೆ ನೀಡಿದರು.

ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಫ್ ಅಹಮ್ಮದ್, ಪ್ರಧಾನ ಕಾರ್ಯದರ್ಶಿ ಆಯೂಬ್ ಪಾರ್ಥನಳ್ಳಿ, ಡಾ.ಮಣಿಪಾಲ, ಜಿಲ್ಲಾ ಸಂಚಾಲಕ ಜಿ.ಎಂ. ಸಿಂಧೂರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.