ADVERTISEMENT

ಸತ್ಯದ ಮಧ್ಯವರ್ತಿಗಳಾಗಿ: ಪಾತ್ರೋಟ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 5:35 IST
Last Updated 14 ಅಕ್ಟೋಬರ್ 2011, 5:35 IST

ಬಾಗಲಕೋಟೆ: ಸಾಹಿತಿ, ಕಲಾವಿದ, ರಾಜಕಾರಣಿಗಳು, ಮಠಾಧಿಪತಿಗಳು ಮತ್ತು ಪತ್ರಕರ್ತರು ಸತ್ಯದ ಮಧ್ಯವರ್ತಿಗಳಾಗಬೇಕೇ ವಿನಃ ಜಾತಿಯ ಮಧ್ಯವರ್ತಿಗಳಾಗಬಾರದು ಎಂದು ಕವಿ ಡಾ. ಸತ್ಯಾನಂದ ಪಾತ್ರೋಟ ಸಲಹೆ ಮಾಡಿದರು.

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಮತ್ತು ಪಾಲಕರ ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮಹರ್ಷಿ ವಾಲ್ಮೀಕಿ, ಆದಿಕವಿ ಪಂಪ, ಕಿತ್ತೂರು ರಾಣಿ ಚೆನ್ನಮ್ಮ, ಬಸವಣ್ಣನ್ನು ಜಾತಿಗೆ ಸೀಮಿತಗೊಳಿಸುವ ಹುನ್ನಾರ ನಡೆಯುತ್ತಿದೆ. ಆದರೆ ಗಾಂಧೀಜಿಯೊಬ್ಬ ಇದುವರೆಗೂ ಯಾವುದೇ ಜಾತಿಯ ತೆಕ್ಕೆಗೆ ಸಿಲುಕದಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಕಾವ್ಯ ಎಂದರೆ ಮನುಷ್ಯತ್ವದ ಹುಡುಕಾಟವಾಗಿದೆ. ಜಾತಿ-ಮತ ಮೀರಿ ಕಾವ್ಯ ಬೆಳೆಯಬೇಕು, ಪರಿಸರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮತ್ತು ಜಾತಿ, ಅಂತಸ್ತು ಮೀರಿ ಬೆಳೆದಾಗ ನಿಜವಾದ ಕಾವ್ಯ ಹುಟ್ಟುತ್ತದೆ ಎಂದರು.
ಪದವಿ, ಪ್ರಶಸ್ತಿಗಾಗಿ ಸಾಹಿತಿಗಳ ನಡುವೆ ಗುಂಪುಗಾರಿಕೆ, ಒಳಒಪ್ಪಂದ, ಹೊರ ಒಪ್ಪಂದಗಳು, ಜಾತಿ ಒಪ್ಪಂದಗಳು ನಡೆಯುತ್ತಿವೆ, ಅದರಲ್ಲೂ ಬೆಂಗಳೂರಿನ ಸಾಹಿತಿಗಳು ಪ್ರಶಸ್ತಿ ಮತ್ತು ಸರ್ಕಾರದ ಸೌಲಭ್ಯ ಪಡೆಯುವ ಕಾಯಂ ಫಲಾನುಭವಿಗಳಾಗಿದ್ದಾರೆ ಎಂದು ದೂರಿದರು.

ಪ್ರಸ್ತುತ ದಿನಗಳಲ್ಲಿ ಪ್ರಶಸ್ತಿಗಳು ಗುಣಮಟ್ಟ ಕಳೆದುಕೊಂಡಿವೆ, ಅರ್ಜಿ ಹಾಕಿ, ಶಿಫಾರಸು ಮಾಡಿ ಪ್ರಶಸ್ತಿ ಪಡೆದುಕೊಳ್ಳುವ ಕಾಲ ಇದಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಇಂದು ನಿಜವಾದ ಮನುಷ್ಯತ್ವ ಮರೆಯಾಗಿದೆ. ಮನುಷತ್ವದ ಮುಖವಾಡಗಳಿವೆ, ಈ ಮುಖವಾಡದ ಹಿಂದೆ ನಾಯಿ, ನರಿ, ಹೆಗ್ಗಣದ ವ್ಯಕ್ತಿತ್ವ ಅಡಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಥೆಗಾರ ಅಬ್ಬಾಸ್ ಮೇಲಿನಮನಿ, ಇಂದು ಸಮಾಜಕ್ಕೆ ಪದವೀಧರರು ಮುಖ್ಯವಲ್ಲ ಮನುಷ್ಯರು ಮುಖ್ಯವಾಗಿದ್ದಾರೆ, ಅಂತಹ ಮನುಷ್ಯರನ್ನು ಬಸವೇಶ್ವರ ಕಲಾ ಮಹಾವಿದ್ಯಾಲಯ ಸೃಷ್ಟಿಸುತ್ತಿದೆ ಎಂದರು.

ಒಬ್ಬ ಬರಹಗಾರ ಇನ್ನೊಬ್ಬ ಬರಹಗಾರನನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು, ಯುವ ಜನರು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ ಸಜ್ಜನ, ಹಳೆಯ ವಿದ್ಯಾರ್ಥಿ ಮತ್ತು ಪಾಲಕರ ಸಂಘದ ಕಾರ್ಯಾಧ್ಯಕ್ಷ ಎಸ್.ಕೆ. ಯಡಹಳ್ಳಿ, ಸಂಘಟನಾ ಕಾರ್ಯದರ್ಶಿ ಪ್ರೊ. ಎಸ್.ಎಸ್. ಕಿಣಗಿ, ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ವಿ.ಕೆ. ಮೊರಬದ, ಉಪನ್ಯಾಸಕ ಸಿದ್ದರಾಮ ಮಠಪತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿದ್ದರಾಮ ಮನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.