ADVERTISEMENT

‘ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕರಿಸಿ’

ಪ್ರಭಾತನಗರ ಬಡಾವಣೆ: ಸಿ.ಸಿ.ಟಿವಿ ಕ್ಯಾಮೆರಾ, ಮಾನಿಟರ್‌ ವ್ಯವಸ್ಥೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:10 IST
Last Updated 2 ಫೆಬ್ರುವರಿ 2017, 6:10 IST
‘ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕರಿಸಿ’
‘ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕರಿಸಿ’   

ಜಮಖಂಡಿ: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ನಾಗರಿಕರ ಪಾತ್ರವೂ ಪ್ರಮುಖವಾಗಿದೆ. ಪೊಲೀಸ್‌ ಇಲಾಖೆ ಸವಾಲುಗಳನ್ನು ಸ್ವೀಕರಿಸಲು ಸದಾ ಸಿದ್ಧವಿರುತ್ತದೆ. ಇಲಾಖೆಯ ಜೊತೆಗೆ ನಾಗರಿಕರು ಕೈಜೋಡಿಸಿದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷಾಂತ ಹೇಳಿದರು.

ಇಲ್ಲಿನ ಪ್ರಭಾತನಗರ ನಾಗರಿಕರ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ಇಡೀ ಬಡಾವಣೆಯಲ್ಲಿ ಅಳವಡಿಸಲಾಗಿರುವ ಸಿ.ಸಿ.ಟಿವಿ ಕ್ಯಾಮೆರಾ ಹಾಗೂ ಮಾನಿಟರ್‌ ವ್ಯವಸ್ಥೆಗೆ ಭಾನುವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.

ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಕೆ ಯಿಂದ ಕಳ್ಳತನ, ಸರಗಳ್ಳತನ ಸೇರಿದಂತೆ ಅಪರಾಧಗಳನ್ನು ಗುರುತಿಸಲು, ತಡೆಗಟ್ಟಲು, ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಪ್ರಭಾತನಗರ ನಾಗರಿಕರು ಮಾಡಿದ ಕಾರ್ಯ ಇತರ ಬಡಾವಣೆಗಳಿಗೆ ಹಾಗೂ ಇತರ ನಗರ, ಪಟ್ಟಣಗಳಿಗೆ ಮಾದರಿಯಾಗಬೇಕು ಎಂದರು.

ಶಾಸಕ ಸಿದ್ದು ನ್ಯಾಮಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಂದು ಕೆಲಸವನ್ನು ಸರ್ಕಾರವೇ ಮಾಡಬೇಕು ಎಂಬ ಮನೋಭಾವ ಸರಿಯಲ್ಲ. ಸಂಘಟನೆಯ ಮೂಲಕ ಏನೆಲ್ಲ ಸಾಧಿಸಬಹುದು. ಸಂಘಟನೆಯಲ್ಲಿ ಬಲವಿದೆ ಎಂಬುದಕ್ಕೆ ಪ್ರಭಾತನಗರ ನಾಗರಿಕರು ಮಾದರಿಯಾಗಿದ್ದಾರೆ ಎಂದರು.

ಎಸಿ ರವೀಂದ್ರ ಕರಲಿಂಗಣ್ಣವರ, ನಿವೃತ್ತ ಡಿವೈಎಸ್ಪಿ ಪಿ.ಎನ್‌. ಪಾಟೀಲ ಮಾತನಾಡಿದರು. ನಗರಸಭೆ ಅಧ್ಯಕ್ಷ ರಾಜು ಪಿಸಾಳ, ನಿರಾಣಿ ಉದ್ಯಮ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ, ತಹಶೀಲ್ದಾರ್‌ ಪಿ.ಎಸ್‌. ಚನಗೊಂಡ, ಹೆಸ್ಕಾಂ ಎಇಇ ಸಂಜಯ ಆಲಬಾಳ, ನಗರಸಭೆ ಸದಸ್ಯ ವಿಜಯಕುಮಾರ ಕಡಕೋಳ ಇದ್ದರು.
ಪ್ರಭಾತನಗರ ನಿವಾಸಿ ರಶ್ಮಿ ದೇಸಾಯಿ ಬಡಾವಣೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಸಿದರು. ಚಂದ್ರಗುಪ್ತ ಬೆಳಗಲಿ ಸ್ವಾಗತಿಸಿದರು. ನಿವೃತ್ತ ಬ್ಯಾಂಕ್‌ ಅಧಿಕಾರಿ ಕೃಷ್ಣ ಕಾವಿ ಅತಿಥಿಗಳನ್ನು ಪರಿಚಯಿಸಿದರು. ಬಿ.ಪಿ.ಪುರೋಹಿತ ನಿರೂಪಿಸಿದರು. ರವಿ ತೇಲಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.