ADVERTISEMENT

ಸರಕು ಸಾಗಣೆ: ತೆರಿಗೆ ತಪ್ಪಿಸೀರಿ ಜೋಕೆ!

ಬೆಳಗಾವಿ ವಿಭಾಗ: ಜಿಎಸ್‌ಟಿ ಜಾರಿಗೊಂಡ ನಂತರ ಮೊದಲ ಬಾರಿಗೆ ಭಾರಿ ದಂಡ ವಸೂಲಿ

ವೆಂಕಟೇಶ್ ಜಿ.ಎಚ್
Published 12 ಅಕ್ಟೋಬರ್ 2018, 19:45 IST
Last Updated 12 ಅಕ್ಟೋಬರ್ 2018, 19:45 IST
ವಿಜಯಪುರದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ದಂಡ ಹಾಕಿದ ಸರಕು ಸಾಗಣೆ ವಾಹನ
ವಿಜಯಪುರದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ದಂಡ ಹಾಕಿದ ಸರಕು ಸಾಗಣೆ ವಾಹನ   

ಬಾಗಲಕೋಟೆ: ಕ್ರಮ ಬದ್ಧವಾದ ದಾಖಲೆಗಳಿಲ್ಲದೇ ಬೆಂಗಳೂರಿನಿಂದ–ದೆಹಲಿಗೆ ಪಾನ್‌ ಮಸಾಲಾ ಹಾಗೂ ಇ–ತ್ಯಾಜ್ಯ ಸಾಗಣೆ ಮಾಡುತ್ತಿದ್ದ ಟ್ರಕ್ ವಶಕ್ಕೆ ಪಡೆದವಿಜಯಪುರ ವಾಣಿಜ್ಯ ತೆರಿಗೆ ಇಲಾಖೆಜಾರಿ ವಿಭಾಗದ (Enforcement cell) ಅಧಿಕಾರಿಗಳು ಬರೋಬ್ಬರಿ ₹46 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ನಂತರ ಬೆಳಗಾವಿ ವಿಭಾಗದ ವಾಣಿಜ್ಯ ತೆರಿಗೆ ಇಲಾಖೆ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತದ ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಜಾರಿ ವಿಭಾಗದ ಅಧಿಕಾರಿಗಳಾದ ಕೆ.ರಮೇಶ್, ಟಿ.ರಾಮಚಂದ್ರ ಹಾಗೂ ಬಸವಣ್ಣ ನೇತೃತ್ವದ ತಂಡ ಸೆಪ್ಟೆಂಬರ್ 25ರಂದು ವಿಜಯಪುರ ಬಳಿ ಸೊಲ್ಲಾಪುರ–ಚಿತ್ರದುರ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಟ್ರಕ್ ವಶಕ್ಕೆ ಪಡೆದಿತ್ತು. ತಪಾಸಣೆ ನಡೆಸಿದಾಗ ಅದರಲ್ಲಿ 3.5 ಟನ್ ಪಾನ್‌ ಮಸಾಲಾ ಹಾಗೂ 2.4 ಟನ್ ಇ–ತ್ಯಾಜ್ಯ ಸಾಗಣೆ ಮಾಡುತ್ತಿರುವುದು ಗೊತ್ತಾಗಿತ್ತು.

ADVERTISEMENT

’ಬೆಂಗಳೂರು ಮೂಲದ ಕರ್ನಾಟಕ ರಾಜಧಾನಿ ಕ್ಯಾರಿಯರ್ ಸಂಸ್ಥೆಯ ಟ್ರಕ್‌ನಲ್ಲಿ ಸರಕು ಸಾಗಣೆಗೆ ಸಂಬಂಧಿಸಿದಂತೆ ಇದ್ದ ದಾಖಲೆಗಳು ನಕಲಿ ಎಂಬುದು ಗೊತ್ತಾಯಿತು. ಹಾಗಾಗಿ ಅಲ್ಲಿನ ಜಾರಿ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ತನಿಖೆಗೆ ಮುಂದಾದೆವು’ ಎಂದುವಿಜಯಪುರದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಕೆ.ರಮೇಶ್ ಹೇಳುತ್ತಾರೆ.

‘ಆಗ ಖರೀದಿದಾರರು ಹಾಗೂ ಮಾರಾಟಗಾರರು ಇಬ್ಬರೂ ನಕಲಿ ಹೆಸರು ಹಾಗೂ ವಿಳಾಸ ಹೊಂದಿದ್ದಾರೆ ಎಂಬುದು ಬಯಲಾಗಿದೆ. ಅಕ್ರಮ ಬಯಲಾಗುತ್ತಿದ್ದಂತೆಯೇ ಜಿಎಸ್‌ಟಿ ಕಾಯ್ದೆ–2017ರ ಅನ್ವಯ ಸರಕಿನ ಸಮೇತ ಲಾರಿಯ ಮಾಲೀಕರಿಗೆ ನೊಟೀಸ್ ಜಾರಿ ಮಾಡಿ ಅಧಿಕಾರಿಗಳು ತೆರಿಗೆ, ಸೆಸ್, ದಂಡ ವಸೂಲಿ ಮಾಡಲಾಗಿದೆ. ಈ ಹಿಂದೆ ಬೇರೆ ಬೇರೆ ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಿದ್ದೆವು. ಅದೆಲ್ಲಾ ಸಾವಿರದ ಲೆಕ್ಕದಲ್ಲಿ ಇರುತ್ತಿತ್ತು. ಇದೇ ಮೊದಲ ಬಾರಿಗೆ ಒಂದೇ ಟ್ರಕ್‌ಗೆ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಿದ್ದೇವೆ’ ಎಂದು ತಿಳಿಸಿದರು.

ದಾಖಲೆಯ ಕ್ರಮ:

’ಜಿಎಸ್‌ಟಿ ಜಾರಿಯಾದ ನಂತರ ಟ್ರಾನ್ಸ್‌ಪೋರ್ಟ್‌ ಸಂಸ್ಥೆಯವರು ಹೀಗೆ ನಕಲಿ ಬಿಲ್‌ ತೋರಿಸಿ ಸರಕು ಸಾಗಣೆ ಮಾಡುತ್ತಾರೆ ಎಂಬ ದೂರುಗಳು ಇದ್ದವು. ಅದನ್ನು ಆಧರಿಸಿ ವಿಜಯಪುರದ ಅಧಿಕಾರಿಗಳು ತನಿಖೆ ನಡೆಸಿದಾಗ ಟ್ರಕ್ ಪತ್ತೆಯಾಗಿದೆ. ಇದೊಂದು ದಾಖಲೆಯ ಕ್ರಮ’ ಎಂದು ವಾಣಿಜ್ಯ ತೆರಿಗೆ ಬೆಳಗಾವಿ ವಲಯದ ಜಂಟಿ ಆಯುಕ್ತ ಕೆ.ರಾಮನ್ ಹೇಳುತ್ತಾರೆ.

ಬಂಧನಕ್ಕೆ ಅವಕಾಶವಿದೆ:

’ತೆರಿಗೆ ತಪ್ಪಿಸಿ ಈ ರೀತಿ ಅಕ್ರಮವಾಗಿ ಸಾಗಣೆ ಮಾಡಿ ಸಿಕ್ಕಿಬಿದ್ದರೆ ಹೀಗೆ ಭಾರಿ ಪ್ರಮಾಣದ ದಂಡ ಬೀಳಲಿದೆ. ವರ್ಷವಿಡೀ ದುಡಿದಿದ್ದನ್ನು ದಂಡ ಪಾವತಿಸಲು ಬಳಸಬೇಕಾಗುತ್ತದೆ. ಹಾಗಾಗಿ ಬೇರೆಯವರಿಗೂ ಎಚ್ಚರಿಕೆಯ ಗಂಟೆ. ₹2 ಕೋಟಿಗಿಂತ ಹೆಚ್ಚು ಮೌಲ್ಯದ ಸರಕು ಸಿಕ್ಕಿಬಿದ್ದರೆ ಸಂಬಂಧಿಸಿದವರನ್ನು ಬಂಧಿಸಲು ಅವಕಾಶವಿದೆ’ ಎಂದು ರಾಮನ್ ಮಾಹಿತಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.