ADVERTISEMENT

`ಸೂಳೇಭಾವಿಯಲ್ಲಿ ರೇಷ್ಮೆ ಸೀರೆ ಉತ್ಪಾದನೆ ಆರಂಭ'

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 7:03 IST
Last Updated 18 ಜುಲೈ 2013, 7:03 IST

ಅಮೀನಗಡ: `ಇಳಕಲ್ ಸೀರೆ ಉತ್ಪಾದನೆ ಹಾಗೂ ಉತ್ತಮ ನೇಕಾರ ಸಹಕಾರಿ ಮನೋಭಾವನೆಗೆ ರಾಜ್ಯಕ್ಕೆ ಮಾದರಿಯಾಗಿರುವ ಶಾಕಾಂಬರಿ ನೇಕಾರ ಸಹಕಾರಿ ಸಂಘದಲ್ಲೀಗ ಪೂರ್ಣ ಪ್ರಮಾಣದ ರೇಷ್ಮೆ ಸೀರೆ ಉತ್ಪಾದನೆಯು ಆರಂಭಗೊಂಡಿರುವುದು ಪಾರಂಪರಿಕ ನೇಕಾರರಿಗೆ ಹೊಸ ಆಶಯ ಮೂಡಿಸಿದೆ' ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ವಾಸುದೇವ ದೊಡಮನಿ ತಿಳಿಸಿದರು.

ಸೂಳೇಭಾವಿಯ ಶಾಕಾಂಬರಿ ನೇಕಾರ ಸಹಕಾರಿ ಸಂಘಕ್ಕೆ ಭೇಟಿ ನೀಡಿ ನೂತನವಾಗಿ ಆರಂಭಗೊಂಡಿರುವ 18 ಹೊಸ ವಿನ್ಯಾಸದ ಪೂರ್ಣ ಪ್ರಮಾಣದ ರೇಷ್ಮೆ ಸೀರೆ ಉತ್ಪಾದಿಸುವ ಕೈಮಗ್ಗಗಳ ಘಟಕಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ಈ ಭಾಗದಲ್ಲಿ ಒಕ್ಕಲುತನದ ನಂತರ ಎರಡನೇ ದೊಡ್ಡ ಉದ್ಯೋಗವಾಗಿರುವ ನೇಕಾರಿಕೆಯಲ್ಲೀಗ ನೂತನ ತಂತ್ರಜ್ಞಾನ ಹಾಗೂ ವಿನ್ಯಾಸಗಳನ್ನು ಬಳಸಿ ಪಾರಂಪರಿಕ ನೇಕಾರಿಕೆಗೆ ಹೊಸ ಅವಕಾಶ ನೀಡುವ ದೃಷ್ಟಿಯಿಂದ ಹೊಸ ವಿನ್ಯಾಸದ ಪೂರ್ಣ ಪ್ರಮಾಣದ ರೇಷ್ಮೆ ಸೀರೆ ಉತ್ಪಾದನೆಯನ್ನು ಸೂಳೇಭಾವಿಯ ಸಂಘದಲ್ಲಿ ಕೈಗೊಳ್ಳಲಾಗಿದೆ. ಇದರಿಂದಾಗಿ ಬನಾರಸ್, ಕಾಂಜೀವರಂ, ಧರ್ಮಾವರಂ, ಗದ್ವಾಲ್ ಗುಣಮಟ್ಟದ ರೇಷ್ಮೆ ಸೀರೆಗಳನ್ನು ಈಗ ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದೆ ಎಂದು ದೊಡಮನಿ ಹೇಳಿದರು.

ನಾಲ್ಕು ತಿಂಗಳ ಹಿಂದೆ ನೇಕಾರರ ಸಾಂದ್ರತೆ ಹೆಚ್ಚಿರುವ ಹಾಗೂ ಉತ್ತಮ ಸಹಕಾರಿ ಸಂಘಕ್ಕೆ ಈ ಯೋಜನೆಯ ಅವಕಾಶ ದೊರಕಿದ್ದು, 3 ತಿಂಗಳಿಂದ ಸ್ಥಳೀಯ 20 ಜನ ನೇಕಾರರಿಗೆ ತರಬೇತಿ ನೀಡಲಾಗಿದೆ. 18 ಹೊಸ ವಿನ್ಯಾಸದ ಮಗ್ಗ, ಸಲಕರಣೆ, ವಿನ್ಯಾಸ ಜಕಾರ್ಡ್‌ಗಳನ್ನು ಶಾಕಾಂಬರಿ ಸಂಘಕ್ಕೆ ನೀಡಿದ್ದು, ಪರಿಣಿತ ನೇಕಾರ ಶ್ರೀನಿವಾಸ ಪಲ್ಲಾ ಮಾರ್ಗದರ್ಶನದಲ್ಲಿ ಈಗಾಗಲೇ ಸೀರೆ ಉತ್ಪಾದನೆ ಆರಂಭಗೊಂಡಿದೆ ಎಂದರು.

ಶಾಕಾಂಬರಿ ನೇಕಾರ ಸಹಕಾರಿ ಸಂಘದ ಮೇಲ್ವಿಚಾರಕರಾಗಿರುವ ಆರ್. ಟಿ. ಹಣಗಿ, 68 ವರ್ಷಗಳಿಂದ ಸಂಘವು ಪ್ರಾಮಾಣಿಕವಾಗಿ ವ್ಯವಹಾರ ನಡೆಸುತ್ತಿದ್ದು, ಪ್ರತಿ ವರ್ಷ ಸುಮಾರು 40 ಸಾವಿರ ಸೀರೆ ಉತ್ಪಾದಿಸುತ್ತಿದೆ. ಅತ್ಯುತ್ತಮ ಸೀರೆ ಉತ್ಪಾದಿಸುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹಾಗೂ ಸುತ್ತಲಿನ ವ್ಯಾಪಾರಸ್ಥರು ನೇರವಾಗಿ ಸೀರೆ ಖರೀದಿಸುತ್ತಿದ್ದು, ಸರ್ಕಾರಿ ಯೋಜನೆಗಳ ಲಾಭ ಪಡೆದು ಸಂಘವು ಮುಂದುವರಿದಿದೆಯೆಂದರು.

ಜಿಲ್ಲೆಯಲ್ಲಿ 14 ಸಾವಿರ ವಿದ್ಯುತ್ ಕೈಮಗ್ಗಗಳಿದ್ದರೂ ಪಾರಂಪರಿಕ ಕೈಮಗ್ಗದ ಇಳಕಲ್ ಸೀರೆಗೆ ಬೇಡಿಕೆ ತೀವ್ರವಾಗಿ ಕಡಿಮೆಯಾಗಿಲ್ಲ. ಎಲ್ಲ ಬಗೆಯ ಸೀರೆಗಳನ್ನು ಸಹ ವಿದ್ಯುತ್ ಮಗ್ಗಗಳಿಂದ ತಯಾರಿಸಲಾಗುತ್ತಿದೆಯಾದರೂ, ಕೈಮಗ್ಗದ ಇಳಕಲ್ ಸೀರೆಯನ್ನು  ಅನೇಕರು ಖರೀದಿಸುತ್ತಾರೆ. ಪಾರಂಪರಿಕವಾಗಿ ಶತಮಾನಗಳಿಂದ ಬಳಕೆಯಲ್ಲಿರುವ ಇಳಕಲ್ ಸೀರೆಗೆ 2010 ರಲ್ಲಿ ಭೌಗೋಳಿಕ ಗುರುತಿನ ಮಹತ್ವ ದೊರೆತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಒದಗಿ ಬಂದಿದೆ. ಕೈಮಗ್ಗದಲ್ಲೂ ವಿಶೇಷ ತಂತ್ರಜ್ಞಾನ ಹಾಗೂ ವಿನ್ಯಾಸಗಳನ್ನು ಅಳವಡಿಸಬಹುದಾಗಿದೆ ಎಂದು ದೊಡ್ಡಮನಿ ಹೇಳಿದರು.

ಸಂಘದ ಅಧ್ಯಕ್ಷರಾದ ಪಿ.ಸಿ. ಜನಿವಾರದ, ನಿರ್ದೇಶಕ ಎಸ್.ಜಿ. ನೆಮದಿ, ಎಚ್.ಎಸ್. ರಾಮದುರ್ಗ, ಜೆ.ಡಿ. ಗಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.