ADVERTISEMENT

ಸೌಲಭ್ಯಕ್ಕೆ ಆಧಾರ್ ಪೂರಕ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2011, 7:20 IST
Last Updated 1 ಆಗಸ್ಟ್ 2011, 7:20 IST
ಸೌಲಭ್ಯಕ್ಕೆ ಆಧಾರ್ ಪೂರಕ
ಸೌಲಭ್ಯಕ್ಕೆ ಆಧಾರ್ ಪೂರಕ   

ಬಾಗಲಕೋಟೆ: ಆಧಾರ್ ವಿಶಿಷ್ಟ ಗುರುತಿನ ಕಾರ್ಡ್ ಬಹಳ ಉಪಯೋಗಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕವಿತಾ ಪಿ. ದಡ್ಡೇನವರ ಹೇಳಿದರು.ನಗರದ ಹಳೆ ನಗರಸಭೆ ಕಚೇರಿ ಆವರಣದಲ್ಲಿ ಭಾನುವಾರ ಆಧಾರ್ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಧಾರ್ ಗುರುತಿನ ಚೀಟಿ ದುರುಪಯೋಗಕ್ಕೆ ಅವಕಾಶವಿಲ್ಲ, ಬ್ಯಾಂಕ್ ಖಾತೆ ತೆರೆಯಲು, ಮಕ್ಕಳನ್ನುಶಾಲೆಗೆ ದಾಖಲಿಸಲು, ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದು ಕೊಳ್ಳಲು ಆಧಾರ್ ಚೀಟಿಯನ್ನು ಬಳಕೆ ಮಾಡಿಕೊಳ್ಳಬಹುದು ಎಂದರು.

ಆಧಾರ್ ನೋಂದಣಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ತಾಂತ್ರಿಕ ತೊಂದರೆಯಿಂದಾಗಿ ನೋಂದಣಿ ಕಾರ್ಯ ವಿಳಂಬವಾಯಿತು. ಇಂದಿನಿಂದ ಜಿಲ್ಲೆಯಲ್ಲಿ ಆಧಾರ್ ನೋಂದಣಿ ಪ್ರಾರಂಭ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲರೂ ಉಚಿತವಾಗಿ ಆಧಾರ್ ಗುರುತಿನ ಕಾರ್ಡ್ ಪಡೆಯಬಹುದು, ಇದಕ್ಕಾಗಿ ಯಾರೂ ಅವಸರ ಪಡುವ ಅಗತ್ಯವಿಲ್ಲ. 20 ಯಂತ್ರಗಳ ಮೂಲಕ 6 ಕೇಂದ್ರಗಳಲ್ಲಿ ನೋಂದಣಿ ಮಾಡಲಾಗುತ್ತಿದೆ. ಪ್ರತಿ ಯಂತ್ರಕ್ಕೆ ಸದ್ಯ 25 ಜನರ ನೋಂದಣಿ ಮಾಡಲಾಗುತ್ತಿದೆ ಎಂದು ಹೇಳಿದರು.

ಆಗಸ್ಟ್ 1 ರ ನಂತರ 200 ಜನರ ನೋಂದಣಿ ಮಾಡಲಾಗುತ್ತದೆ. ಅಕ್ಷಿಪಟಲ ಮತ್ತು ಕೈ ಬೆರಳಿನ ಗುರುತನ್ನು ಪಡೆಯಲಾಗುತ್ತಿದ್ದು, ಯಾವುದೇ ರೀತಿಯ ನಕಲು ಮಾಡಲು ಸಾಧ್ಯವಿಲ್ಲದ ಈ ಆಧಾರ್ ಕಾರ್ಡ್ ಸರ್ಕಾರದ ವಿವಿಧ ಯೋಜನೆಗಳನ್ನು ಪಡೆಯಲು ಸಹಕಾರಿಯಾಗುತ್ತಿದೆ ಎಂದು  ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ  ಜ್ಯೋತಿ ಭಜಂತ್ರಿ ಅವರು, ಆಧಾರ್ ಯೋಜನೆಯಡಿ ಜಿಲ್ಲೆಯ ಪ್ರತಿಯೊಬ್ಬರು ವಿಶಿಷ್ಟ ಗುರುತಿನ ಚೀಟಿ ಪಡೆದುಕೊಳ್ಳಬೇಕು ಎಂದು  ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜೆ.ಸಿ. ಪ್ರಕಾಶ, ಜಿ.ಪಂ. ಉಪಾಧ್ಯಕ್ಷ ಹೂವಪ್ಪ ರಾಠೋಡ, ನಗರಸಭೆ ಉಪಾಧ್ಯಕ್ಷ ಶರಣಪ್ಪ ಗುಳೇದ, ಸಹಾಯಕ ಆಯುಕ್ತ ಗೋವಿಂದ ರೆಡ್ಡಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ. ಕಮತರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.