ADVERTISEMENT

ಸೌಲಭ್ಯದ ಕೊರತೆ: ಆಸರೆ ಹಸ್ತಾಂತರ ಇಂದು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2011, 5:30 IST
Last Updated 5 ಆಗಸ್ಟ್ 2011, 5:30 IST
ಸೌಲಭ್ಯದ ಕೊರತೆ: ಆಸರೆ ಹಸ್ತಾಂತರ ಇಂದು
ಸೌಲಭ್ಯದ ಕೊರತೆ: ಆಸರೆ ಹಸ್ತಾಂತರ ಇಂದು   

ಕೂಡಲಸಂಗಮ: ಹುನಗುಂದ ತಾಲ್ಲೂಕಿನ ಕೈರವಾಡಗಿ ಗ್ರಾಮದ ಆಸರೆ ಮನೆಗಳ ಹಸ್ತಾಂತರ ಕಾರ್ಯಕ್ರಮ ಆಗಸ್ಟ್ 5ರಂದು ನಡೆಯಲಿದೆ.  ರಸ್ತೆ ಹಾಗೂ ಗಟಾರ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿರುವುದು ಗ್ರಾಮಸ್ಥರಲ್ಲಿ ಅಸಮಾಧಾನ ಉಂಟು ಮಾಡಿದೆ.

ಕೈರವಾಡಗಿಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ತಲಾ 1.7 ಲಕ್ಷ ವೆಚ್ಚದಲ್ಲಿ 147 ಮನೆಗಳ ನಿರ್ಮಾಣ ಮಾಡಿದೆ.  ಸರಕಾರ  ರೂ. 12.83 ಲಕ್ಷ ವೆಚ್ಚದಲ್ಲಿ ಸಿ.ಡಿ., ರೂ. 3.75 ಲಕ್ಷ  ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿದೆ. ಅಷ್ಟು ಬಿಟ್ಟರೆ ಅಗತ್ಯ ಮೂಲಸೌಕರ್ಯದ ವ್ಯವಸ್ಥೆಯಾಗಿಲ್ಲ.

ರೂ.  9 ಲಕ್ಷ  ವೆಚ್ಚದಲ್ಲಿ ನೀರಿನ ಟ್ಯಾಂಕ್, ರೂ. 4.60 ಲಕ್ಷ  ವೆಚ್ಚದಲ್ಲಿ ಪೈಪ್‌ಲೈನ್, ರೂ 14 ಲಕ್ಷ  ವೆಚ್ಚದಲ್ಲಿ ನೀರು ವಿತರಣಾ ಜಾಲ, ರೂ. 17 ಲಕ್ಷ  ವೆಚ್ಚದಲ್ಲಿ ಗ್ರಾಮ ರಸ್ತೆ ನಿರ್ಮಾಣ,  ರೂ. 33.50 ಲಕ್ಷ ವೆಚ್ಚದಲ್ಲಿ  ಚರಂಡಿ ನಿರ್ಮಾಣ ಮಾಡಲು ಅನುದಾನ ಒದಗಿಸಲಾಗಿದೆ. ಕಾಮಗಾರಿ ಪೂರ್ಣಗೊಂಡಿಲ್ಲ.

ಆದರೂ ಮನೆಗಳ ಹಸ್ತಾಂತರಕ್ಕೆ ಸಿದ್ಧತೆ ನಡೆಸಿರುವುದು  ಗ್ರಾಮಸ್ಥರಲ್ಲಿ ಅಸಮಾಧಾನ ಉಂಟು ಮಾಡಿದೆ.
ಕೆೃರವಾಡಗಿಯಲ್ಲಿ ಮಕ್ಕಳು ಹಾಗೂ ವೃದ್ಧರೇ ಕೆಲಸ ಮಾಡಿದ್ದಾರೆ. ಕಾಮಗಾರಿಯ ಗುಣಮಟ್ಟವೂ ಸರಿಯಾಗಿಲ್ಲ. ಮನೆಗಳ ಗೋಡೆಗಳಿಗೆ ಬಿರುಕು ಬಿಟ್ಟಿದೆ ಎಂದು ಗ್ರಾಮದ ಶಿವನಪ್ಪ ಚಿತ್ತವಾಡಗಿ ದೂರುತ್ತಾರೆ.

ಮನೆಯಲ್ಲಿ ನಾವು ಹೋಗುವುದಿಲ್ಲ. ಅಧಿಕಾರಿಗಳು ಅಲ್ಲಿ ಬಂದು ವಾಸಮಾಡಲಿ. ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿ ವಾಸ ಮಾಡುವುದಕ್ಕಿಂತ ತಗಡಿನ ಶೆಡ್‌ಗಳಲ್ಲಿ ವಾಸ ಮಾಡುವುದು ಒಳ್ಳೆಯದು ಎನ್ನುತ್ತಾರೆ ಅವರು.

ಗ್ರಾಮದಲ್ಲಿ ಸಂತ್ರಸ್ತರಿಗಾಗಿ ನಿರ್ಮಾಣ ಮಾಡಲಾಗಿರುವ ಮನೆಗಳ ಕಳಪೆ ಗುಣಮಟ್ಟದ್ದಾಗಿದೆ. ಅಲ್ಲದೆ ಅಲ್ಲಿ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆ ಮಾಡಿಲ್ಲ. ಕಾಮಗಾರಿಗಳು ಅಪೂರ್ಣವಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಗ್ರಾಮ ಪಂಚಾಯಿತ ಸದಸ್ಯ ಅಶೋಕ ಚಲವಾದಿ ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.