ADVERTISEMENT

ಹನಿ ನೀರಾವರಿ ಕಾಮಗಾರಿ ಕುಂಟಿಯಾ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 9:32 IST
Last Updated 26 ನವೆಂಬರ್ 2017, 9:32 IST

ಹುನಗುಂದ (ಇಳಕಲ್‌) : ಮರೋಳ ಏತ ನೀರಾವರಿ ಎರಡನೇ ಹಂತದ ಯೋಜನೆಯ ಹನಿ ನೀರಾವರಿ ಕಾಮಗಾರಿಯನ್ನು ಈಚೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಕುಂಟಿಯಾ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಆಲಮಟ್ಟಿಯಿಂದ ಕೂಡಲಸಂಗಮಕ್ಕೆ ಆಗಮಿಸಿ ಸಂಗಮನಾಥನ ದರ್ಶನ ಪಡೆದ ನಂತರ ಹುನಗುಂದ ಸಮೀಪ ಮರೋಳ ಏತ ನೀರಾವರಿ ಯೋಜನೆಯ 2ನೇ ಹಂತದ ಹನಿ ನೀರಾವರಿ ಯೋಜನೆ ಪಂಪಹೌಸ್‌ಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಹನಿ ನೀರಾವರಿ ಯೋಜನೆ ಕಾಮಗಾರಿಯ ನಿರ್ಮಾಣ ಹಾಗೂ ನಿರ್ವಹಣೆಯ ಗುತ್ತಿಗೆ ಪಡೆದಿರುವ ಜೈನ್ ಮತ್ತು ನೆಟಾಪೇಮ್ ಸಂಸ್ಥೆಗಳ ಅಧಿಕಾರಿಗಳು ಯೋಜನೆಯ ಸಂಪೂರ್ಣ ಮಾಹಿತಿ ನೀಡಿದರು.

ADVERTISEMENT

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ‘65 ಸಾವಿರ ಎಕರೆಗೆ ಹನಿ ನೀರಾವರಿ ಒದಗಿಸುವ ಯೋಜನೆ ಪೂರ್ಣಗೊಂಡಿದೆ. ಕಾಮಗಾರಿಯ ನಿರ್ವಹಣೆ ತೃಪ್ತಿ ತಂದಿದೆ. ಯೋಜನೆ ಕಾಮಗಾರಿಗಾಗಿ ಭೂಮಿ ಕಳೆದುಕೊಂಡ ಅನೇಕ ರೈತರಿಗೆ ಪರಿಹಾರ ಸಿಕ್ಕಿಲ್ಲ. ಕೆಬಿಜೆಎನ್‌ಎಲ್‌ ಕಚೇರಿಗೆ ರೈತರು ಅಲೆಯುತ್ತಿದ್ದಾರೆ’ ಎಂದು ಸುದ್ದಿಗಾರರ ಗಮನ ಸೆಳೆದಾಗ ‘ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ತ್ವರಿತವಾಗಿ ಪರಿಹಾರ ಹಣ ನೀಡಲು ಕ್ರಮ ಜರುಗಿಸುತ್ತೇನೆ’ ಎಂದು ಭರವಸೆ ನೀಡಿದರು.

ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ತಹಶೀಲ್ದಾರ್ ಸುಭಾಷ ಸಂಪಗಾವಿ, ಕೃಷ್ಣಾ ಜಲಭಾಗ್ಯ ನಿಗಮದ ಮುಖ್ಯ ಅಭಿಯಂತರ ಎಸ್.ಎಚ್. ಮಂಜಪ್ಪ, ಕಾರ್ಯನಿರ್ವಾಹಕ ಇಂಜನೀಯರ್‌ ಎಂ.ಎಸ್. ಕೆರೂರ, ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್‌ ವಸಂತ ಉಳ್ಳಿ ಹಾಗೂ ವೈಜನಾಥ ಪಾಟೀಲ ಮತ್ತೀತರು ಇದ್ದರು.

* * 

ಏಷ್ಯಾದಲ್ಲಿಯೇ ಬೃಹತ್‌ ಆಗಿರುವ ಮರೋಳ ಏತ ನೀರಾವರಿ ಯೋಜನೆಯ ಹನಿ ನೀರಾವರಿ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಿದ್ದು, ಮುಂದಿನ  ವರ್ಷ ರೈತರ ಜಮೀನುಗಳಿಗೆ ನೀರು ಹನಿಸಲಾಗುವುದು’.
ಸುಭಾಷ ಕುಂಟಿಯಾ,
ಸರ್ಕಾರದ ಮುಖ್ಯ ಕಾರ್ಯದರ್ಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.