ADVERTISEMENT

ಹಾಕಿ: ಬೆಳಗಾವಿ, ಗುಲ್ಬರ್ಗ ಜಿಲ್ಲಾ ತಂಡಗಳಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 9:45 IST
Last Updated 11 ಅಕ್ಟೋಬರ್ 2012, 9:45 IST

ಬಾಗಲಕೋಟೆ: ಬೆಂಗಳೂರಿನ ಸೇಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ತಂಡ ಹಾಗೂ ಮೈಸೂರು ಜಿಲ್ಲಾ ತಂಡ ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶಾಲಾ ಮಟ್ಟದ ರಾಜ್ಯ ಹಾಕಿ ಟೂರ್ನಿಯಲ್ಲಿ ಕ್ರಮವಾಗಿ ಪ್ರೌಢಶಾಲಾ ಬಾಲಕ-ಬಾಲಕಿಯರ ವಿಭಾಗದ ಪ್ರಶಸ್ತಿಯನ್ನು ಮಡಿಲಿಗೆ ಹಾಕಿಕೊಂಡವು.

ಟೂರ್ನಿಯ 14 ವರ್ಷದೊಳಗಿನ ಬಾಲಕರ ವಿಭಾಗದ ಪ್ರಶಸ್ತಿ ಗುಲ್ಬರ್ಗ ಜಿಲ್ಲಾ ತಂಡದ ಪಾಲಾದರೆ  ಬಾಲಕಿಯರ ವಿಭಾಗದ ಪ್ರಶಸ್ತಿಯನ್ನು  ಬೆಳಗಾವಿ ಜಿಲ್ಲಾ ತಂಡ ಬಗಲಿಗೆ ಹಾಕಿಕೊಂಡಿತು.

ರೌಂಡ್ ರಾಬಿನ್ ಲೀಗ್ ವಿಧಾನದಲ್ಲಿ ನಡೆದ ಟೂರ್ನಿಯಲ್ಲಿ ಸೇಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ತಂಡ  ಆಡಿದ ಒಟ್ಟು ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು 12 ಪಾಯಿಂಟ್‌ಗಳನ್ನು ಬಗಲಿಗೆ ಹಾಕಿಕೊಂಡಿತು. 11 ಪಾಯಿಂಟ್ ಕಲೆ ಹಾಕಿದ ಮೈಸೂರು ತಂಡ ರನ್ನರ್ ಅಪ್ ಆಯಿತು. ಬಾಲಕಿಯರ ವಿಭಾಗದಲ್ಲಿ ಅಜೇಯವಾಗಿ ಉಳಿದ ಮೈಸೂರು ತಂಡ 12 ಪಾಯಿಂಟ್ ಗಳಿಸಿ ಚಾಂಪಿಯನ್ ಆಯಿತು. ಎಸ್. ಎಚ್. ಕೂಡಿಗಿ ತಂಡ ನಾಲ್ಕರಲ್ಲಿ ಮೂರು ಪಂದ್ಯಗಳನ್ನು ಗೆದ್ದು 9 ಪಾಯಿಂಟ್‌ಗಳೊಂದಿಗೆ ರನ್ನರ್ ಅಪ್ ಆಯಿತು.

14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಗುಲ್ಬರ್ಗ ತಂಡ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ 9 ಪಾಯಿಂಟ್ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದ ಮೈಸೂರು ತಂಡ ರನ್ನರ್ ಅಪ್ ಆಯಿತು.

ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ತಂಡ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದುಕೊಂಡಿತು. ಒಂದು ಪಂದ್ಯ ಡ್ರಾ ಆಗಿತ್ತು. ಹೀಗಾಗಿ  7 ಪಾಯಿಂಟ್‌ಗಳು ತಂಡದ ಪಾಲಾಗಿದ್ದವು. ಬೆಂಗಳೂರು ತಂಡಕ್ಕೂ ಇಷ್ಟೇ ಪಾಯಿಂಟ್‌ಗಳು ದಕ್ಕಿದ್ದವು. ಗೋಲು ಗಳಿಕೆಯಲ್ಲಿ ಮುಂದಿದ್ದ ಬೆಳಗಾವಿ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.