ADVERTISEMENT

ಹಾಲಿನ ವ್ಯಾನ್ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ; ದರೋಡೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 10:10 IST
Last Updated 11 ಅಕ್ಟೋಬರ್ 2012, 10:10 IST

ಕೆರೂರ: ಇಲ್ಲಿಗೆ ಸಮೀಪದ ಯಂಕಂಚಿ ಗ್ರಾಮದ ಬಳಿಯ ಹಳ್ಳದ ಸೇತುವೆ ಮೇಲೆ ಮಂಗಳವಾರ ನಸುಕಿನ ಜಾವ ಬಾದಾಮಿ ಕಡೆಯಿಂದ ಹಾಲು ಸಾಗಿಸುತ್ತಿದ್ದ ಮಿನಿ ವ್ಯಾನ್ ಅಡ್ಡಗಟ್ಟಿದ ದುಷ್ಕರ್ಮಿಗಳು, ಚಾಲಕ ಹಾಗೂ ಕ್ಯಾಶಿಯರ್‌ಗೆ ಚಾಕು ತೋರಿಸಿ ಹಲ್ಲೆ ಮಾಡಿ ಸುಮಾರು 51 ಸಾವಿರ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.

ಹಾಲಿನ ವ್ಯಾನ್ ಕ್ಯಾಶಿಯರ್ ಗದ್ದನಕೇರಿಯ ಮಹಾಂತೇಶ ಕಂಬಳಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಂದಾಜು ಬೆಳಗಿನ ಜಾವ 3.40ರ ಸುಮಾರಿಗೆ ನಮ್ಮ ವಾಹನ ಹಳ್ಳದ ಸೇತುವೆ ಹತ್ತಿರ ಬರುತ್ತಿದ್ದಂತೆ ಪಕ್ಕದ ಮುಳ್ಳಿನ ಕಂಟಿಗಳಲ್ಲಿ ಅವಿತುಕೊಂಡಿದ್ದ ಸುಮಾರು 25-30 ವಯಸ್ಸಿನ ದರೋಡೆಕೋರರು ಒಮ್ಮೆಲೇ  ವಾಹನದ ಮೇಲೆ ದಾಳಿ ಮಾಡಿ, ನನಗೆ ಹಾಗೂ ಚಾಲಕ ಮಂಜುನಾಥ ಜೋಶಿ ಕುತ್ತಿಗೆಗೆ ಚಾಕು ತೋರಿಸಿ ನಮ್ಮ ಬಳಿ ಇದ್ದ ಹಣ, ಮೊಬೈಲ್ ದೋಚಿ ಪರಾರಿಯಾದರು.

ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿದ್ದು ಅವರೆಲ್ಲಾ ಕನ್ನಡ ಮಾತನಾಡುತ್ತಿದ್ದರು. ಘಟನಾ ಸ್ಥಳದ ರಸ್ತೆಯ ಎಡ ಭಾಗದಲ್ಲಿರುವ ಇನಾಂ ಹುಲ್ಲಿಕೇರಿ ರಸ್ತೆಯ ಕ್ರಾಸ್ ಬಳಿ ನಿಲ್ಲಿಸಿ, ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ, ಡಿ.ವೈ.ಎಸ್.ಪಿ ಎಸ್.ಐ. ವೀರನಗೌಡರ್, ಸಿ.ಪಿ.ಐ ಅಡಿವೇಶ ಬೂದಿಗೊಪ್ಪ, ಎ.ಎಸ್.ಐ ಡಿ.ಆರ್. ಬಿರಾದಾರ ಭೇಟಿ ನೀಡಿ ಪರಿಶೀಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.