ಇಳಕಲ್: ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಇಳಕಲ್‌ದಲ್ಲಿ ಇತ್ತೀಚೆಗೆ ಪರಿಹಾರ ವೇದಿಕೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 84 ರ ವಯೋವೃದ್ಧ ಹಿರಿಯ ರಂಗ ಕಲಾವಿದೆ ರಂಗಮ್ಮ ಗುರ್ಲ ಅವರನ್ನು ಸನ್ಮಾನಿಸಲಾಯಿತು.ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವಿ.ಕೆ. ವಂಶಾಕೃತಮಠ ಮಾತನಾಡಿ, ರಂಗಮ್ಮ ಗುರ್ಲ ಅವರು 1960 ಹಾಗೂ 70ರ ದಶಕದಲ್ಲಿ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ನಾಯಕಿಯಾಗಿ ಅಭಿನಯಿಸಿ, ಭೇಷ್ ಅನಿಸಿಕೊಂಡಿದ್ದ, ನಟಿ ಈಗ ಜೀವನ ನಿರ್ವಹಣೆಗೆ ಕಷ್ಟ ಪಡಬೇಕಾಗಿದೆ ಎಂದು ವಿಷಾದಿಸಿದರು.
ಈ ಬಾರಿಯ ನಾಟಕ ಆಕಾಡೆಮಿ ಪ್ರಶಸ್ತಿಗಳಿಂದ, ರಂಗ ಸೀನರಿ ಕಂಪನಿಗಳಿಗಾಗಿ ನೀಡುವ ಅನುದಾನದಿಂದ ಕನ್ನಡ ಮತ್ತು ಸಂಸ್ಕೃತಿ ಸಚಿವರ ಜಿಲ್ಲೆಯೇ ವಂಚಿತವಾಗಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.ಜಿಲ್ಲೆಯ ಆರು ತಾಲ್ಲೂಕುಗಳು ಸಾಂಸ್ಕೃತಿಕವಾಗಿ ಶ್ರೀಮಂತವಾಗಿವೆ. ಆದರೆ ಸರಕಾರದ ಸಾಂಸ್ಕೃತಿಕ ಯೋಜನೆಗಳೆಲ್ಲವೂ ಉಸ್ತುವಾರಿ ಸಚಿವರು ಪ್ರತಿನಿಧಿಸುವ ಕ್ಷೇತ್ರಕ್ಕೆ ಸೀಮಿತವಾಗಿವೆ. ಇತರ ಐದು ತಾಲ್ಲೂಕುಗಳನ್ನು ಮರೆತಿರುವ ಹಾಗಿದೆ ಎಂದು ಆರೋಪಿಸಿದರು.
ಪ್ರಭಾವ ಇಲ್ಲದ ರಂಗಮ್ಮ ನಂತಹ ಹಿರಿಯ ಅಭಿನೇತ್ರಿಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ತಡವಾದರೂ ಗುರುತಿಸಿ, ಗೌರವಿಸ ಬೇಕೆಂದು ಕಲಾವಿದರು ಒತ್ತಾಯಿಸಿದರು.
ರಂಗಕರ್ಮಿ ಮಹಾಂತೇಶ ಗಜೇಂದ್ರಗಡ, ರಂಗಮ್ಮ ಗುರ್ಲ ಅವರಿಗೆ ರಂಗಾಸಕ್ತರ ಪರವಾಗಿ ಕಾಣಿಕೆಯಾಗಿ ಮೊಬೈಲ್ ಅರ್ಪಿಸಿದರು.
ಪರಿಹಾರ ವೇದಿಕೆಯ ಅಧ್ಯಕ್ಷ ಪಂಪಣ್ಣ ಕಾಳಗಿ ಹಾಗೂ ರಂಗಭೂಮಿಯ ಹಿರಿಯ ಕಲಾವಿದೆ ಶಾಂತಮ್ಮ ಪತ್ತಾರ ಅವರು ರಂಗಮ್ಮ ಅವರನ್ನು ಸತ್ಕರಿಸಿ, ಗೌರವಿಸಿದರು.
ಬಸವರಾಜ ಮಠದ, ಮಲ್ಲಣ್ಣ ಇಂದರಗಿ, ರಮೇಶ ಚಿತ್ರಗಾರ, ಬಸವರಾಜ ಕೋಟಿ, ಸುನಂದಾ ಕಂದಗಲ್ಲ ಉಪಸ್ಥಿತರಿದ್ದರು. ಮಹಾದೇವ ಕಂಬಾಗಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಢಗಳಚಂದ್ರ ಪವಾರ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.