ADVERTISEMENT

ಹುಚ್ಚು ನಾಯಿ ದಾಳಿ: 10 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 7:10 IST
Last Updated 10 ಆಗಸ್ಟ್ 2012, 7:10 IST

ಆಲಮಟ್ಟಿ: ಹುಚ್ಚು ನಾಯಿಗಳೆರಡು ದಾಳಿ ಮಾಡಿದ ಪರಿಣಾಮ 10ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಆಲಮಟ್ಟಿ ಆರ್.ಎಸ್. ಪುನರ್ವಸತಿ ಕೇಂದ್ರದಲ್ಲಿ ಗುರುವಾರ ನಡೆದಿದೆ.

ಸಂಜೆ 5 ಗಂಟೆ ಸುಮಾರು ಏಕಾಏಕಿ ದಾಳಿ ನಡೆಸಿದೆ. ಎರಡು ಹುಚ್ಚು ನಾಯಿಗಳು ಪ್ರತ್ಯೇಕವಾಗಿ ಈ ದಾಳಿ ನಡೆಸಿದ್ದು, ಆಲಮಟ್ಟಿಯ ವೆಂಕಟೇಶ್ವರ ಕಾಲೊನಿಯ ನಿವಾಸಿಗರ ಮೇಲೆ ನುಗ್ಗಿ ದಾಳಿ ನಡೆಸಿದೆ. ದಾಳಿಗೆ ಒಳಗಾದವರು ಹೆಚ್ಚಾಗಿ ಮಹಿಳೆಯರು ಮತ್ತು ಬಾಲಕರಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಕೂಡಲೇ 108 ಅಂಬುಲೆನ್ಸ್ ಮೂಲಕ ನಿಡಗುಂದಿಯ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ತೀವ್ರವಾಗಿ ಗಾಯ ಗೊಂಡವರನ್ನು ಸುನಿತಾ ಶಿಂಗೆ, ಮಂಜುಳಾ ಚವ್ಹಾಣ, ರಾಮು ರಾಠೋಡ ಎಂದು ಗುರುತಿಸಲಾಗಿದೆ.

ಸುನಿತಾ ಶಿಂಗೆ ಅವರ ಮನೆಯೊಳಗೆ ಹೊಕ್ಕ ನಾಯಿ ಅವರನ್ನು ಸಾಕಷ್ಟು ಬಾರಿ ಕಚ್ಚುತ್ತಿದ್ದಾಗ ಬಿಡಿಸಲು ಬಂದ ಅನೇಕ ಜನರಿಗೂ ನಾಯಿ ಕಚ್ಚಿ ಗಾಯಗೊಳಿಸಿದೆ. ನಂತರ ಹೆಚ್ಚಿನ ಜನರು ಸೇರಿದಾಗ ನಾಯಿ ಬೇರೆಡೆಗೆ ಹೋಗಿ ಅಲ್ಲಿಯೂ ಕೆಲವರಿಗೆ ಕಚ್ಚಿದೆ. ಕೆಲವರಿಗೆ ತನ್ನ ಹಲ್ಲಿನಿಂದ ಕಡಿದಿದ್ದರೆ, ಕೆಲವೊಬ್ಬರಿಗೆ ಉಗುರುಗಳಿಂದ ಪರಿಚಿದೆ.

ತೀವ್ರವಾಗಿ ಗಾಯಗೊಂಡವರನ್ನು ನೋಡಿದಾಗ ಅದರ ದಾಳಿಯ ಕ್ರೂರತೆ ಅರಿವಾಗುತ್ತಿತ್ತು. ತಲೆ ಕೈ ಕಾಲುಗಳಿಗೆ ತೀವ್ರವಾಗಿ ಗಾಯಗೊಳಿಸಿದೆ.

ಕೊನೆಗೆ ನಾಯಿಯ ದಾಳಿ ಮುಂದುವರಿದಾಗ ಯುವಕರು, ಸಾರ್ವಜನಿಕರು ಸೇರಿ ಕಲ್ಲು ಹೊಡೆದಾಗ ಎರಡು ನಾಯಿ ಸಾವನ್ನಪ್ಪಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.