ADVERTISEMENT

‘ಎಚ್ಐವಿ ಪೀಡಿತರ ಬಗ್ಗೆ ಕೀಳರಿಮೆ ಬೇಡ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 10:01 IST
Last Updated 3 ಡಿಸೆಂಬರ್ 2013, 10:01 IST

ಬಾಗಲಕೋಟೆ: ಎಚ್ಐವಿ ಪೀಡಿತರನ್ನು ಹಾಗೂ ಅನಾಥರಾದ ಮಕ್ಕಳನ್ನು ಮನೆಯಿಂದ ಹೊರ ಹಾಕದೇ ಅವರಿಗೆ ಉತ್ತಮ ವಾತಾವರಣವನ್ನು ಸಮಾಜ­ದಲ್ಲಿ ಕಲ್ಪಿಸಿಕೊಡಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಿ.ಡಿ. ಕಿತ್ತೂರ ಹೇಳಿದರು.

ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಸೋಮವಾರ ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯ ಮತ್ತು ರಾಷ್ಟ್ರದಲ್ಲಿ ಬಾಗಲಕೋಟೆ ಜಿಲ್ಲೆ ಏಡ್ಸ್ ರೋಗದಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಹತ್ತು ವರ್ಷಗಳಿಂದ ಈ ರೋಗವನ್ನು ನಿಯಂತ್ರಣಕ್ಕೆ ತರಲು ಹಲವಾರು ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಏಡ್ಸ್‌ನ ಅಂಕಿ ಅಂಶಗಳಿಂದಾಗಿ ಜಿಲ್ಲೆಗೆ ಅಂಟಿರುವ ಕಳಂಕವನ್ನು ತೊರೆದು ಹಾಕಲು ಇಲಾಖೆಯೊಂದಿಗೆ ಸಂಘ ಸಂಸ್ಥೆಗಳು ಹಾಗೂ ಸಮುದಾಯ ಕೈ ಜೋಡಿಸಬೇಕಾಗಿದೆ’ ಎಂದು ಹೇಳಿದರು.

ಬೇರೆ ರೋಗದ ಬಗ್ಗೆ ಬಹಿರಂಗವಾಗಿ ಮಾತನಾಡುವ ನಾವು ಏಡ್ಸ್ ರೋಗದ ಬಗ್ಗೆ ಮುಚ್ಚುಮರೆ­ಯಿಲ್ಲದೇ  ತಿಳಿಸಬೇಕು. ಎಚ್ಐವಿ ಪೀಡಿತರನ್ನು ಕೀಳರಿಮೆ­ಯಿಂದ ಕಾಣದೇ ಮುಖ್ಯವಾಹಿನಿಗೆ ತರಲು ಮುಂದಾಗಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಏಡ್ಸ್ ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ.ಎಸ್.ಎಸ್.ಅರಹುಣಸಿ, ಏಡ್ಸ್ ಈಗ ಭಯಾನಕ ರೋಗವಾಗಿಲ್ಲ. ಈ ರೋಗವನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಚಿಕಿತ್ಸೆ ಫಲಕಾರಿಯಾಗಲಿದೆ ಎಂದರು.

ಡಾ.ಎ.ಎನ್.ದೇಸಾಯಿ, ಡಾ. ಎಚ್. ಆರ್‌. ತೋಸನಿವಾಲ, ಡಾ.ಬಿ. ಎನ್.ನಾಯಕ, ಡಾ.ಶಕುಂತಲಾ, ಟಿ.ಆರ್.ಬದ್ನೂರ, ಎಚ್.ಆರ್. ಮರ್ದಿ, ಡಾ.ಎ.ಕೆ.ರಡ್ಡಿ, ಎಂ.ಎಚ್. ಸುಬೇದಾರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಾಗೃತಿ ಜಾಥಾ: ವಿಶ್ವ ಏಡ್ಸ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕದ ಆಶ್ರಯ­ದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಮನೋಜ್‌ ಜೈನ್ ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ­ನಿರ್ವಾಹಕ ಅಧಿಕಾರಿ ಎಸ್.ಜಿ. ಪಾಟೀಲ ಚಾಲನೆ ನೀಡಿದರು.

ನಗರದ 50 ಹಾಸಿಗೆಯ ಸರ್ಕಾರಿ ಆಸ್ಪತ್ರೆಯ ಆವರಣದಿಂದ ಆರಂಭಗೊಂಡ ಜನಜಾಗೃತಿ ಜಾಥಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿ­ಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.