ADVERTISEMENT

‘ಕೃಷ್ಣಪ್ರಭಾ’ ತೀರದಲ್ಲಿ ‘ನಮೋ’ ಸುನಾಮಿ

ಬಸವರಾಜ ಸಂಪಳ್ಳಿ
Published 17 ಮೇ 2014, 11:16 IST
Last Updated 17 ಮೇ 2014, 11:16 IST
ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ ಬಿಜೆಪಿ ಪಿ.ಸಿ.ಗದ್ದಿಗೌಡರ ಅವರನ್ನು ಪಕ್ಷದ ಕಾರ್ಯಕರ್ತರು ಹೆಗಲಮೇಲೆ ಎತ್ತಿಕೊಂಡು ಸಂಭ್ರಮಿಸಿದರು.
ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ ಬಿಜೆಪಿ ಪಿ.ಸಿ.ಗದ್ದಿಗೌಡರ ಅವರನ್ನು ಪಕ್ಷದ ಕಾರ್ಯಕರ್ತರು ಹೆಗಲಮೇಲೆ ಎತ್ತಿಕೊಂಡು ಸಂಭ್ರಮಿಸಿದರು.   

ಬಾಗಲಕೋಟೆ: ‘ನಮೋ ಸುನಾಮಿ’ಯಿಂದಾಗಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಿರೀಕ್ಷೆ ಮೀರಿದ ಗೆಲುವು ದಾಖಲಿಸಿದೆ. ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದ ಬಾಗಲಕೋಟೆ ಕ್ಷೇತ್ರದಲ್ಲಿ ಯಾರೇ ಜಯಗಳಿಸಿದರೂ ಅಂತರ ಕಡಿಮೆಯಾಗಲಿದೆ ಎಂಬ ಲೆಕ್ಕಾಚಾರ ನಡೆದಿತ್ತು. ಆದರೆ, 1,16,560 ಮತಗಳ ಭಾರಿ ಅಂತರದಿಂದ ಪಕ್ಷ ಗೆಲುವು ಸಾಧಿಸಿರುವುದು ಸ್ವತಃ ಬಿಜೆಪಿ ಪಾಳೆಯದಲ್ಲೇ ಆಚ್ಚರಿಗೆ ಕಾರಣವಾಗಿದೆ.

ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಪಕ್ಷದ ಅಥವಾ ಅಭ್ಯರ್ಥಿಯ ಗೆಲುವಲ್ಲ ‘ಮೋದಿ ಗೆಲುವು’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕ್ಷೇತ್ರದಲ್ಲಿ ಪ್ರಬಲವಾಗಿರುವ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಕಳೆದ ಒಂದು ವರ್ಷದಿಂದ ಜಿಲ್ಲೆಯ ಜನಸಾಮಾನ್ಯರ ಬಳಿಗೆ ತೆರಳಿ ಮೋದಿ ಪರ ಒಲವು ಮೂಡಿಸಿದ್ದರು.

ಅಲ್ಲದೇ, ಕೇಂದ್ರ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಹಗರಣ, ಭ್ರಷ್ಟಾಚಾರ, ಬೆಲೆ ಏರಿಕೆಯ ಬಗ್ಗೆ ಮನದಟ್ಟು ಮಾಡಿದ್ದರ ಪರಿಣಾಮ ಬಿಜೆಪಿ ಗೆಲುವು ಸಾಧಿಸಲು ಅನುಕೂಲ ವಾತಾವರಣ ನಿರ್ಮಾಣವಾಗಿತ್ತು.
ಬಿಜೆಪಿ ಪರ ಹದಗೊಂಡಿದ್ದ ಬಾಗಲಕೋಟೆ ಕ್ಷೇತ್ರಕ್ಕೆ ಚುನಾವಣೆ ಸಂದರ್ಭದಲ್ಲಿ ಆಗಮಿಸಿದ್ದ ಮೋದಿ, ಅಬ್ಬರದ ಪ್ರಚಾರ ನಡೆಸುವ ಮೂಲಕ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾ­ಗಿದ್ದರ ಪರಿಣಾಮ ಗೆಲುವು ಲಭಿಸಿದೆ.

ಸಚಿವರಾದ ಎಸ್‌.ಆರ್‌. ಪಾಟೀಲ ಮತ್ತು ಉಮಾಶ್ರೀ ಸೇರಿದಂತೆ ಕ್ಷೇತ್ರದಲ್ಲಿ ಏಳು ಜನ ಶಾಸಕರಿದ್ದರೂ ಸಹ ಆಡಳಿತಾರೂಢ ಕಾಂಗ್ರೆಸ್‌ನ ಪ್ರಾಬಲ್ಯವನ್ನು ಮೋದಿ ಅಲೆ ಹೊಸಕಿ ಹಾಕಿದೆ.

ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಬೀಳಗಿ (287 ಮತ) ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿ­ರುವುದು ವಿಶೇಷವಾಗಿದೆ. ತೇರದಾಳ ಕ್ಷೇತ್ರದಲ್ಲಿ ಬಿಜೆಪಿ 34,859 ಮತಗಳ ದಾಖಲೆಯ ಮುನ್ನಡೆ ಸಾಧಿಸಿರುವುದು ಸಚಿವೆ ಉಮಾಶ್ರೀಗೆ ಮುಖಭಂಗ ಉಂಟುಮಾಡಿದೆ.

ಜಾತಿ ಪ್ರೇಮದಿಂದ (ಗಾಣಿಗ) ‘ಮೋದಿ ನಮ್ಮವ’ ಎಂದಿದ್ದ ಜಮಖಂಡಿಯ ಕಾಂಗ್ರೆಸ್‌ ಶಾಸಕರ ಹೇಳಿಕೆಯ ಪರಿಣಾಮ ಆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿಗೆ ಹೆಚ್ಚಿನ (25,779) ಮತ ಗಳಿಕೆಗೆ ಅನುಕೂಲವಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮುದಾಯಕ್ಕೆ ಸೇರಿದ ಇಬ್ಬರು ಶಾಸಕರು ಇರುವ ಬಾಗಲಕೋಟೆ (1085) ಮತ್ತು ಬಾದಾಮಿ (18,867) ಕ್ಷೇತ್ರದಲ್ಲೂ ಕಾಂಗ್ರೆಸ್‌ಗಿಂತ ಬಿಜೆಪಿಗೆ ಹೆಚ್ಚಿನ ಮತಗಳು ಚಲಾವಣೆಯಾಗಿದೆ.

ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಮತ್ತು ಮುಖಂಡರು ಒಗ್ಗಟ್ಟಿನಿಂದ ಚುನಾವಣೆ ಎದುರಿ­ಸಿಲ್ಲದಿರುವುದೂ ಬಿಜೆಪಿಗೆ ವರವಾ­ಯಿತು. ಕೇವಲ ಒಂದೇ ವರ್ಷದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಜಿಲ್ಲೆಯ ಜನಸಾಮಾನ್ಯರ ವಿಶ್ವಾಸ ಕಳೆದುಕೊಂಡಿರುವುದು ಇದರಿಂದ ಸಾಬೀತಾಗಿದೆ.

ಅತಿಯಾದ ಆತ್ಮ ವಿಶ್ವಾಸದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ‘ಸರ್ವಜನಶಕ್ತಿ’ ಪಕ್ಷದ ಅಧ್ಯಕ್ಷ ಶಂಕರ ಬಿದರಿ ನಿರೀಕ್ಷಿತ ಮತ ಗಳಿಸುವಲ್ಲಿ ವಿಫಲರಾದರು. ಕಣದಲ್ಲಿದ್ದ ಒಟ್ಟು 13 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ ಹೊರತುಪಡಿಸಿ ಉಳಿದೆಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು. ಕ್ಷೇತ್ರದ ಇನ್ನೊಂದು ವಿಶೇಷವೆಂದರೆ 10,764 ಮತದಾರರು ‘ನೋಟಾ’ ಬಟನ್ ಒತ್ತುವ ಮೂಲಕ ನಾಲ್ಕನೇ ಸ್ಥಾನ ನೀಡಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.