ಮಹಾಲಿಂಗಪುರ: ಕಲುಷಿತ ವಾತಾವರಣ, ಬಾಯಿ ಚಪಲಕ್ಕಾಗಿ ಅನಾರೋಗ್ಯಕರ ಆಹಾರ ಸೇವನೆ ಹಾಗೂ ರೋಗಗಳ ಕುರಿತ ಜ್ಞಾನದ ಕೊರತೆಯಿಂದಾಗಿ ಮಹಿಳೆಯರಲ್ಲಿ ಸಾಮಾನ್ಯವಾಗಿ 35ನೇ ವಯೋಮಾನದ ನಂತರ ಹಲವು ರೋಗಗಳು ಕಂಡುಬರುತ್ತವೆ, ರೋಗದ ಲಕ್ಷಣಗಳು ಕಂಡ ಕೂಡಲೇ ಹಲವು ಆರೋಗ್ಯದ ನಿಯಮಗಳನ್ನು ಪಾಲಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು, ಉತ್ತಮ ಆರೋಗ್ಯಕ್ಕಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಕ್ಯಾನ್ಸರ್‌ನಂತಹ ರೋಗಗಳನ್ನೂ ದೂರವಿಡಬಹುದು ಎಂದು ಕೆಎಲ್‌ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ. ಕುಂದಗೋಳ ಹೇಳಿದರು.
ಸ್ಥಳೀಯ ಸ್ಫೂರ್ತಿ ಮಹಿಳಾ ಕ್ಲಬ್ ಹಾಗೂ ಕೆಎಲ್‌ಇ ಪಾಲಿಟೆಕ್ನಿಕ್ ಇವುಗಳ ಆಶ್ರಯದಲ್ಲಿ ನಡೆದ ಕ್ಯಾನ್ಸರ್ ಕುರಿತ ವಿಶೇಷ ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಉಪನ್ಯಾಸಕಿಯಾಗಿ ಪಾಲ್ಗೊಂಡಿದ್ದ ಸ್ಥಳೀಯ ಸ್ತ್ರೀರೋಗ ತಜ್ಞೆ ಡಾ.ಉಷಾ ಬೆಳಗಲಿ, ಕ್ಯಾನ್ಸರ್ ಬರಲು ನಿರ್ದಿಷ್ಟ ಕಾರಣಗಳಿಲ್ಲ. ಅದರೆ ಅರವತ್ತು ಬಗೆಯ ವಿವಿಧ ವೈರಸ್‌ಗಳು ಕ್ಯಾನ್ಸರ್‌ಗೆ ಕಾರಣವಾಗಿವೆ. ಕ್ಯಾನ್ಸರ್ ಬರದಂತೆ ತಡೆಯಲು ಮುನ್ನೆಚ್ಚರಿಕೆಯ ಕ್ರಮವಾಗಿ ತೆಗೆದುಕೊಳ್ಳಲು ಈಗ ಅನೇಕ ಲಸಿಕೆಗಳು ಲಭ್ಯವಿದ್ದು 20ರಿಂದ 26 ವಯಸ್ಸಿನ ಮಹಿಳೆಯರು ಈ ಲಸಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟರು.
ಕ್ಯಾನ್ಸರ್ ಕುರಿತು ಪಾಲಿಟೆಕ್ನಿಕ್ ವಿದ್ಯಾರ್ಥಿನಿಯರಿಗೆ ವಿಶೇಷ ಉಪನ್ಯಾಸ ನೀಡಿದ ಸ್ತ್ರೀರೋಗ ತಜ್ಞೆ ಡಾ.ಉಮಾ ಅರಿಷಿಣಗೋಡಿ ಮಾತನಾಡಿ ಕ್ಯಾನ್ಸರ್‌ನ ಗುಣ ಲಕ್ಷಣಗಳು, ಅದು ಹರಡುವ ವಿಧಾನ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ಮಾಹಿತಿ ನೀಡಿದರು. ಮಹಿಳೆ 35ನೇ ವಯಸ್ಸಿನ ನಂತರ ಯಾವ ಪರೀಕ್ಷೆಗಳನ್ನು ಮಾಡಿಸಬೇಕು ಎಂಬ ವಿಸ್ತಾರದ ಮಾಹಿತಿ ನೀಡಿದರು. ಸ್ಫೂರ್ತಿ ಮಹಿಳಾ ಸಂಘದ ಅಧ್ಯಕ್ಷೆ ದೀಪ್ತಿ ಪಾಶ್ಚಾಪೂರ, ಗುಂಡಾ ಹಾಗೂ ಕಾನಿಪ ಅಧ್ಯಕ್ಷ ಮಹೇಶ ಆರಿ ವೇದಿಕೆಯಲ್ಲಿದ್ದರು.
ರೋಟರಿ ಹಿಂದಿನ ಅಧ್ಯಕ್ಷ ಈರಣ್ಣ ಹಲಗತ್ತಿ, ಜಯರಾಮ ಶೆಟ್ಟಿ, ಶಿವಲಿಂಗ ಸಿದ್ನಾಳ, ಮಹಿಳಾ ಕ್ಲಬ್ ಸದಸ್ಯರಾದ ಪಲ್ಲವಿ ಬರಗಿ, ಛಾಯಾ ವಜ್ಜರಮಟ್ಟಿ, ಶೈಲಾ ಅವಟಿ, ಶಾಂತಾ ನಿಂಗಸಾನಿ, ಶೈಲಾ ಶೆಟ್ಟರ, ವೇದಾ ಅಂಬಿ, ಸುಮಾ ರಂಜಣಗಿ, ಮಂಗಲಾ ತಾಳೀಕೋಟಿ, ಲೀಲಾ ಹಿಪ್ಪರಗಿ, ಹಾಗೂ ಪಾಲಿಟೆಕ್ನಿಕ್ ಸಿಬ್ಬಂದಿ ಮಂಗಳಾ ರಾವಳ, ವಂದನಾ ಪಸಾರ, ಸುಪ್ರಿಯಾ ಹಾಲಭಾವಿ, ಅಮೃತಾ ಬೆಳ್ಳಿಕೊಪ್ಪಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.