ಕೆರೂರ: ಇಂದಿನ ಬದಲಾದ ಕೃಷಿ ನೀತಿಯಲ್ಲಿ ರೈತರು ಅರ್ಥಿಕ ಸಂಕಷ್ಟದ ಬದುಕಿನಿಂದ ಪ್ರಗತಿಯತ್ತ ಸಾಗಲು ರೈತಕೂಟಗಳನ್ನು ರಚಿಸಿಕೊಂಡು ಅವುಗಳ ಸಕ್ರಿಯ ಕಾರ್ಯ ನಿರ್ವಹಣೆಯ ಜೊತೆಗೆ ಮಾರುಕಟ್ಟೆ ಆಧಾರಿತ ನೂತನ ಕೃಷಿ ವಿಧಾನ ಅಳವಡಿಸಿಕೊಂಡು ಅಧಿಕ ಲಾಭ ಗಳಿಸಲು ಮುಂದಾಗಲು ಔಟ್‌ರೀಚ್ ಸಂಸ್ಥೆ ಯೋಜನಾ ಸಂಯೋಜಕ ಬಿ. ಗೋವಿಂದಯ್ಯ ಸಲಹೆ ನೀಡಿದರು.
ಇಲ್ಲಿಗೆ ಸಮೀಪದ ಅಗಸನಕೊಪ್ಪ ಗ್ರಾಮದ ಪಾಂಡುರಂಗ-–ರುಕ್ಮಿಣಿ ದೇವಸ್ಥಾನದಲ್ಲಿ ಬಾಗಲಕೋಟೆಯ ನಬಾರ್ಡ್ ಹಾಗೂ ಔಟ್‌ರೀಚ್ ಸಂಸ್ಥೆಯ ಸಹಯೋಗದಲ್ಲಿ ಹೊಸದಾಗಿ ರಚನೆಗೊಂಡ ಐದು ರೈತಕೂಟಗಳ ಉದ್ಘಾಟನೆ ಮತ್ತು ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅನ್ನದಾತ ಪ್ರಮುಖ ಬೆಳೆಗಳ ಉತ್ಪಾದಕರ ಸಂಘದ ಅಧ್ಯಕ್ಷ ಅಶೋಕ ನಾಯಕ, ರೈತರು ಕೃಷಿ ಉತ್ಪನ್ನಗಳನ್ನು ಉತ್ಪಾದಕರ ಸಂಘದ ಮೂಲಕ ನೇರವಾಗಿ ಮಾರಾಟ ಮಾಡಿದರೆ ಕೃಷಿಯಲ್ಲಿ ಅಧಿಕ ಲಾಭ ಪಡೆಯಲು ಸಾಧ್ಯ ಎಂಬುದನ್ನು ಬಾದಾಮಿ ಭಾಗದ ರೈತರು ಸಾಬೀತುಪಡಿಸಿದ್ದಾರೆ ಎಂದರು.
ನಬಾರ್ಡ್ ನೆರವಿನಿಂದ ಫಕೀರಬೂದಿಹಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರಮುಖ ಬೆಳೆಗಳ ಉತ್ಪಾದನೆ ಹೆಚ್ಚಿಸುವ ಪ್ರಯೋಜನಕಾರಿ ಕಾರ್ಯಕ್ರಮದಿಂದ ಆಗುವ ಸದುಪಯೋಗಗಳ ಕುರಿತು ಅವರು ವಿವರಿಸಿದರು.
ಕ್ಷೇತ್ರಾಧಿಕಾರಿ ಸತೀಶ ರಕರಡ್ಡಿ ಪ್ರಾಸ್ತಾವಿಕವಾಗಿ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಆರ್.ಕೆ. ದುದಿಹಳ್ಳಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹನಮಂತಗೌಡ್ರ ಪಾಟೀಲ, ಅಗಸನಕೊಪ್ಪದ ಕೈಗಾರಿಕೆ ಉದ್ಯಮಿ ಎಸ್. ಎಸ್. ಸರಗಣಾಚಾರಿ ಮಾತನಾಡಿದರು.
ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಬಿ.ಎಚ್. ನರಹಟ್ಟಿ, ಕೃಷಿಯಲ್ಲಿನ ತಾಂತ್ರಿಕತೆ ಮತ್ತು ಅದನ್ನು ಅಳವಡಿಸವ ಸುಲಭದ ಮಾರ್ಗಗಳ ಬಗೆಗೆ ಹಾಗೂ ಕೃಷಿ ಇಲಾಖೆಯ ರೈತ ಉಪಯೋಗಿ ಕಾರ್ಯಕ್ರಮಗಳ ಬಗ್ಗೆ ರೈತರಿಗೆ ತಿಳಿಸಿದರು.
ನಬಾರ್ಡ್ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು, ಬಾದಾಮಿ ತಾಲ್ಲೂಕು ಕೆರೂರ ಹೋಬಳಿಯ ಅಗಸನಕೊಪ್ಪ, ಕಲಬಂದಕೇರಿ, ಮಾಲಗಿ, ಮೋಹನಪುರ, ಬಂದಕೇರಿ ಗ್ರಾಮದ ರೈತಕೂಟಗಳ ರೈತರು ಹಾಗೂ ಔಟ್‌ರೀಚ್ ಸ್ವಯಂ ಸೇವಾಸಂಸ್ಥೆ ಪ್ರತಿನಿಧಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಜನರು ತರಬೇತಿಯಲ್ಲಿ ಭಾಗವಹಿಸಿದ್ದರು.
ಅಗಸನಕೊಪ್ಪದ ಎಚ್‌ಪಿಎಸ್ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಔಟರೀಚ್‌ನ ಕ್ಷೇತ್ರಾಧಿಕಾರಿ ಬಸವ ರಾಜ ಕಮತರ ನಿರೂಪಿಸಿದರು. ಸತೀಶ ರಕರಡ್ಡಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.