ಬಾಗಲಕೋಟೆ: ಜಿಲ್ಲೆಯಲ್ಲಿ ಅಂದಾಜು ₨1382 ಕೋಟಿ ಮೊತ್ತದಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಸಂಜೆ ಚಾಲನೆ ನೀಡಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನವನಗರ ಯೂನಿಟ್- 2ರಲ್ಲಿ ಕೈಗೊಳ್ಳಲಾಗುತ್ತಿರುವ ಮೂಲ ಸೌಕರ್ಯಗಳಾದ ರಸ್ತೆ, ನೀರು ಸರಬರಾಜು, ಒಳಚರಂಡಿ, ವಿದ್ಯುತ್ತೀಕರಣ ಹಾಗೂ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಗಳ ಅಂದಾಜು ಮೊತ್ತ ₨ 622 ಕೋಟಿ ವೆಚ್ಚದ ಕಾಮಗಾರಿ, ಜಲಸಂಪನ್ಮೂಲ ಇಲಾಖೆಯಿಂದ ಅಂದಾಜು ₨ 485 ಕೋಟಿ ವೆಚ್ಚದ ಹುನಗುಂದ ತಾಲ್ಲೂಕಿನ ನಿಂಬಲಗುಂದಿ ಹತ್ತಿರ ಮಲಪ್ರಭಾ ನದಿಗೆ ಅಡ್ಡಲಾಗಿ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣ, ಅಂದಾಜು ₨ 70 ಕೋಟಿ ವೆಚ್ಚದ ಶಿರೂರ ಹತ್ತಿರ ಹಳ್ಳಕ್ಕೆ ಬ್ಯಾರೇಜ್ ನಿರ್ಮಾಣ ಹಾಗೂ ₨ 175 ಕೋಟಿ ವೆಚ್ಚದ ಮುಚಖಂಡಿ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ನಗರಸಭೆಯಿಂದ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ದಿ ಯೋಜನೆ ಹಾಗೂ ನಗರೋತ್ಥಾನ ಹಂತ- 2ರಡಿಯಲ್ಲಿ ಮಂಜೂರಾದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಕಟ್ಟಡಗಳ ಉದ್ಘಾಟಿಸಿರು. ಅಲ್ಪಸಂಖ್ಯಾತರ ಭವನ ಮತ್ತು ಬೀಳಗಿ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಕಾಮಗಾರಿಗೆ ಸಿ.ಎಂ. ಶಿಲಾನ್ಯಾಸ ನೆರವೇರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಆರ್. ಪಾಟೀಲ, ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಶಾಸಕರಾದ ಎಚ್.ವೈ. ಮೇಟಿ, ಜೆ.ಟಿ. ಪಾಟೀಲ, ಸಿದ್ದುನ್ಯಾಮಗೌಡ, ವಿಜಯಾನಂದ ಕಾಶಪ್ಪನವರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಡಾ.ದೇವರಾಜ ಪಾಟೀಲ, ಪ್ರಕಾಶ ತಪಶೆಟ್ಟಿ, ಜಿ.ಪಂ ಅಧ್ಯಕ್ಷೆ ಶಾಂತವ್ವ ಭೂಷಣ್ಣವರ, ಉಪಾಧ್ಯಕ್ಷ ಕೃಷ್ಣ ಓಗೆಣ್ಣವರ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಆರ್. ಎಂ. ಕಲೂತಿ, ಪಿ.ಎಚ್. ಪೂಜಾರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಸೌದಾಗರ, ನಗರಸಭೆ ಸದಸ್ಯ ಹನುಮಂತ ರಾಕುಂಪಿ, ಜಿಲ್ಲಾಧಿಕಾರಿ ಮನೋಜ್ ಜೈನ್, ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಆಯುಕ್ತ ಶಿವಯೋಗಿ ಕಳಸದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಎಸ್.ಜಿ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.