ADVERTISEMENT

ಅಮೀನಗಡ: 111 ಅಡಿ ಉದ್ದದ ಮಲ್ಲಯ್ಯ ಧ್ವಜ ಅನಾವರಣ

ಯುವ ಉದ್ಯಮಿ ಮಂಜುನಾಥ ಬಂಡಿ, ಬೆಂಗಳೂರಿನ ‘ಟೀಮ್‌ ಮಲ್ಲಯ್ಯ’ ತಂಡದಿಂದ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 8:15 IST
Last Updated 25 ಮಾರ್ಚ್ 2024, 8:15 IST
ಅಮೀನಗಡದಲ್ಲಿ ಶ್ರೀಶೈಲ ಪಾದಯಾತ್ರೆಯಲ್ಲಿ ಗಮನ ಸೆಳೆಯುವ 111 ಅಡಿ ಉದ್ದದ ಮಲ್ಲಯ್ಯ ಧ್ವಜ ಸಿದ್ಧತೆ ಕಾರ್ಯದಲ್ಲಿ ನಿರತರಾಗಿರುವ ಕಲಾವಿದ ಅಸ್ಲಾಂ ಕಲಾದಗಿ
ಅಮೀನಗಡದಲ್ಲಿ ಶ್ರೀಶೈಲ ಪಾದಯಾತ್ರೆಯಲ್ಲಿ ಗಮನ ಸೆಳೆಯುವ 111 ಅಡಿ ಉದ್ದದ ಮಲ್ಲಯ್ಯ ಧ್ವಜ ಸಿದ್ಧತೆ ಕಾರ್ಯದಲ್ಲಿ ನಿರತರಾಗಿರುವ ಕಲಾವಿದ ಅಸ್ಲಾಂ ಕಲಾದಗಿ   

ಅಮೀನಗಡ: ಪ್ರತಿವರ್ಷದಂತೆ ಶ್ರೀಶೈಲ ಮಲ್ಲಯ್ಯನ ಪಾದಯಾತ್ರೆಗೆ ಭಕ್ತರು ತಯಾರಾಗಿದ್ದು ಪಟ್ಟಣದಿಂದ ಮಾರ್ಚ್‌ 26 ರಂದು ತೆರಳಲಿದ್ದಾರೆ.

ಬೆಂಗಳೂರಿನಲ್ಲಿ ವಾಸವಾಗಿರುವ ಯುವ ಉದ್ಯಮಿ ಮಂಜುನಾಥ ಬಂಡಿ ಹಾಗೂ ಬೆಂಗಳೂರಿನ ‘ಟೀಮ್ ಮಲ್ಲಯ್ಯ’ ತಂಡ ಕಳೆದ 9 ವರ್ಷಗಳಿಂದ ಅಮೀನಗಡದಿಂದ ಯುಗಾದಿ ಅಂಗವಾಗಿ ಶ್ರೀಶೈಲಕ್ಕೆ ಪಾದಯಾತ್ರೆ ಬೆಳೆಸುತ್ತಾರೆ. ಪಾದಯಾತ್ರೆ ಆಧ್ಯಾತ್ಮಿಕತೆ, ಶ್ರದ್ದಾ–ಭಕ್ತಿಯ ಜೊತೆಗೆ ಸಾಮಾಜಿಕ ಕಳಕಳಿಯ ಸಂದೇಶ ಸಾರುವ ಕಾರ್ಯ ಮಾಡುವ ತಂಡ,  ಈ ಬಾರಿ 111 ಅಡಿ ಉದ್ದದ ಮಲ್ಲಯ್ಯನ  ಚಿತ್ರವಿರುವ ಕೇಸರಿ ಧ್ವಜ ಹಾಗೂ 8 ಅಡಿ ಎತ್ತರದ ಮಾದರಿ ಮತಪತ್ರದ ಮೂಲಕ  ಲೋಕಸಭೆ ಚುನಾವಣೆಗೆ ಜಾಗೃತಿ ಮೂಡಿಸಲು ಸಜ್ಜಾಗಿದೆ.

2021ರಲ್ಲಿ 108 ಅಡಿ ಉದ್ದದ ಮಲ್ಲಯ್ಯನ ಧ್ವಜದ ಜೊತೆಗೆ ಅತಿ ದೊಡ್ಡ ಮಾಸ್ಕ್ ಅನಾವರಣಗೊಳಿಸುವ ಮೂಲಕ ಸಾಮಾಜಿಕ ಮತ್ತು ಆಧ್ಯಾತ್ಮಿಕ ಜಾಗೃತಿ ಮೂಡಿಸಿ ಗಮನಸೆಳೆದಿತ್ತು.

ADVERTISEMENT

10ನೇ ಬಾರಿಯ ಪಾದಯಾತ್ರೆ ಕೈಗೊಳ್ಳುತ್ತಿರುವ ಈ ತಂಡ ಮಾರ್ಚ್ 26 ರಂದು ಅಮೀನಗಡದ ಬೃಹತ್ ಪ್ರಮಾಣದಲ್ಲಿ ಬೆಂಗಳೂರಿನ ‘ಅಮ್ಮ ಫೌಂಡೇಷನ್-ಹೆಲ್ಪ್ ಆಂಡ್ ಗ್ರೋ’ನ ರೋಹಿತ್ ಕೆಂಪೇಗೌಡ ನೇತೃತ್ವದಲ್ಲಿ ಪಟ್ಟಣದ ಮಲ್ಯಯ್ಯ ಸೇವಾ ಭಕ್ತ ಬಳಗದಿಂದ  111 ಅಡಿ ಉದ್ದದ ಮಲ್ಲಯ್ಯನ ಧ್ವಜದ ಮೂಲಕ ಆಧ್ಯಾತ್ಮಿಕ ಜಾಗೃತಿ ಹಾಗೂ ‘ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ’ ಎನ್ನುವ ಸಾಮಾಜಿಕ ಸಂದೇಶ ಮೂಡಿಸಲಿದ್ದಾರೆ.

ಅಮೀನಗಡದ ಕಲಾವಿದ ರವಿ ಬಂಡಿ ಹಾಗೂ ಬಾಗಲಕೋಟೆಯ ಕಲಾವಿದ ಅಸ್ಲಾಂ ಕಲಾದಗಿ ಅವರು  ಮಲ್ಲಯ್ಯನ ಚಿತ್ರ ಬಿಡಿಸುವಲ್ಲಿ ನಿರತರಾಗಿದ್ದಾರೆ.

ಮಾರ್ಚ್ 26 ರಂದು ಅಮೀನಗಡದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನದ ಮೂಲಕ ಜನರಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಜಾಗೃತಿ ಮೂಡಿಸಲಿವೆ ಎಂದು ಸಂಘಟಕ ಮಂಜುನಾಥ ಬಂಡಿ ತಿಳಿಸಿದ್ದಾರೆ.

ಟಗರು ಚಿತ್ರದ ಸಚ್ಚಿದಾನಂದ(ಡಾಲಿ ಧನಂಜಯ ಗುರು ಪಾತ್ರ), ಬಿಗ್‌ಬಾಸ್ ಖ್ಯಾತಿಯ ಲೋಕೇಶ, ಅಂತರರಾಷ್ಟ್ರೀಯ ನೃತ್ಯಪಟು ರೂಪಾ ರವೀಂದ್ರನ್ ಅವರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರಿನ ಸ್ನೇಹಿತರು ಸಂಘ ಸಂಸ್ಥೆಗಳಿಂದ ಆಧ್ಯಾತ್ಮಿಕ ಭಕ್ತಿಯ ಜೊತೆಗೆ ಸಾಮಾಜಿಕ ಕಳಕಳಿಯ ಜಾಗೃತಿಯ ಸಂದೇಶ ನೀಡುವ ಉದ್ದೇಶದಿಂದ ವಿಭಿನ್ನ ಆಲೋಚನೆಗಳಿಂದ ಪಾದಯಾತ್ರೆ ಕೈಗೊಳ್ಳುತ್ತಿದ್ದೇವೆ
ಮಂಜುನಾಥ ಬಂಡಿ ಸಂಸ್ಥಾಪಕ ಚಿನ್ಮಯ್-ಚಿನ್ನಾದ್ ಫೌಂಡೇಷನ್ ಅಮೀನಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.