ADVERTISEMENT

ಸಂಕಷ್ಟದಲ್ಲಿ 14 ಸಾವಿರ ಕೆವಿಜಿ ಗ್ರಾಹಕರು

ಗ್ರಾಹಕರ ಖಾತೆಯ ₹1.5 ಕೋಟಿಗೂ ಹೆಚ್ಚು ಹಣದ ದುರುಪಯೋಗ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 13:15 IST
Last Updated 8 ಫೆಬ್ರುವರಿ 2024, 13:15 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕುಳಗೇರಿ ಕ್ರಾಸ್: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿ) ನೀಲಗುಂದ ಶಾಖೆ ವ್ಯವಸ್ಥಾಪಕ ಕಿರಣಕುಮಾರ,₹1.5 ಕೋಟಿಗೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಂಡು ಪರಾರಿಯಾಗಿದ್ದು, ಶಾಖೆಯ 14 ಸಾವಿರದಷ್ಟು ಗ್ರಾಹಕರು ಸಂಕಷ್ಟದಲ್ಲಿರುವಂತಾಗಿದೆ.

ಪ್ರಕರಣದಲ್ಲಿ ಶಾಖೆಯ ಬಹಳಷ್ಟು ಗ್ರಾಹಕರ ಉಳಿತಾಯ ಖಾತೆ ಹಾಗೂ ಠೇವಣಿ ಖಾತೆ, ರೈತರ ಕೆಸಿಸಿ ಖಾತೆಯಲ್ಲಿನ ದೊಡ್ಡ ಮೊತ್ತದ ಹಣವನ್ನು ಬೇರೆಯವರ ಖಾತೆಗೆ ವರ್ಗಾವಣೆ ಮಾಡುವ ಜೊತೆಗೆ ಸುಮಾರು 10 ರಿಂದ 14 ಸಾವಿರ ಖಾತೆಗಳ ರೈತರ ಮೇಲೆ ಸಾಲವನ್ನು ಹೇರಲಾಗಿದೆ.

ADVERTISEMENT

9 ವರ್ಷದ ಹಿಂದೆ ಮೃತರಾದವರ ಹೆಸರಿನಲ್ಲಿಯೂ ವ್ಯವಸ್ಥಾಪಕ ಕಿರಣಕುಮಾರ ಸಾಲವನ್ನು ತೆಗೆದು ಶಾಖೆಗೆ ವಂಚಿಸಲಾದ ಜೊತೆಗೆ ಹಲವಾರು ಗ್ರಾಹಕರ ಠೇವಣಿ ಹಣವನ್ನು ಮರುಪಾವತಿ ಮಾಡುವ ರೈತರ ಖಾತೆಗೆ ಜಮೆ ಮಾಡಿ, ಠೇವಣಿ ಇಟ್ಟಿರುವ ಖಾತೆದಾರರರ ಹೆಸರಿನಲ್ಲಿ  ₹1 ಇಲ್ಲದಂತೆ ಮಾಡಿರುವ ವ್ಯವಸ್ಥಾಪಕರ ವಿರುದ್ದ ಸೋಮವಾರ ಬ್ಯಾಂಕ್‌ನಲ್ಲಿ ಸಿಬ್ಬಂದಿಯನ್ನು ಒಳಗಡೆ ಹಾಕಿ ಬೀಗ ಜಡಿಯುವ ಮೂಲಕ ಗ್ರಾಹಕರು ಪ್ರತಿಭಟನೆ ಕೈಗೊಂಡು ಆಕ್ರೋಶ ಹೊರ ಹಾಕಿದರು.

ಗ್ರಾಹಕರಿಗೆ ವಂಚಿಸಿದ ವ್ಯವಸ್ಥಾಪಕರ ವಿರುದ್ಧ ಬಾಗಲಕೋಟೆ ವಲಯ ವ್ಯವಸ್ಥಾಪಕ ಎನ್.ಶ್ರೀಧರ ಕ್ರಮ ಕೈಗೊಳ್ಳದೆ ಇರುವುದಕ್ಕೆ ಅಧಿಕಾರಿಗಳೂ ಈ ವಂಚನೆ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ನೀಲಗುಂದ ಗ್ರಾಮದ ಗ್ರಾಹಕರಾದ ರಮೇಶಗೌಡ ಪಾಟೀಲ, ಈರಣ್ಣ ಉಳ್ಳಾಗಡ್ಡಿ ಹಾಗೂ ಶಿವುಕುಮಾರ ಓಜುಗ ಆರೋಪಿಸಿದ್ದಾರೆ.

ಗ್ರಾಹಕರ ಸಮಸ್ಯೆಯನ್ನು ಪರಿಹರಿಸಿ ಹಣ ಮರಳುವಂತೆ ಮಾಡಬೇಕೆಂದು ಗ್ರಾಹಕರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಹಕರಾದ ಮಹಾದೇವಪ್ಪ ಕುಮ್ಮಿ, ಚಂದ್ರಪ್ಪ ಹಟ್ಟಿ, ಈರಪ್ಪ ಉಳ್ಳಾಗಡ್ಡಿ, ಶಿವಾನಂದ ಉಳ್ಳಾಗಡ್ಡಿ, ಗೋಪಾಲ, ಕುಮ್ಮಿ, ಶಿವಯ್ಯ ಹಿರೇಮಠ, ಆನಂದ ಪಾಟೀಲ, ಗುರಪ್ಪ ಮೆಳ್ಳಿಗೇರಿ, ರಾಮನಗೌಡ ಪಾಟೀಲ, ರಂಗಪ್ಪ ಚಂದಪ್ಪನವರ, ರಾಯಪ್ಪ ಉಳ್ಳಾಗಡ್ಡಿ, ಲಕ್ಷ್ಮೀ ಹಿರೇಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.