ADVERTISEMENT

ಪಡಿತರ ವಂಚಿತ ಬಿಪಿಎಲ್‌ ಕಾರ್ಡ್‌ದಾರರು: 3.47 ಲಕ್ಷ ಫಲಾನುಭವಿಗಳಿಗೆ ಸಿಗದ ಸೌಲಭ್ಯ

ಬೆಳಗಾವಿ ಪ್ರಥಮ, ಉಡುಪಿ ಜಿಲ್ಲೆಗೆ ಕೊನೆ ಸ್ಥಾನ

ಬಸವರಾಜ ಹವಾಲ್ದಾರ
Published 15 ಅಕ್ಟೋಬರ್ 2023, 3:51 IST
Last Updated 15 ಅಕ್ಟೋಬರ್ 2023, 3:51 IST
   

ಬಾಗಲಕೋಟೆ: ಅಂತ್ಯೋದಯ, ಬಿಪಿಎಲ್‌ ಪಡಿತರ ಕಾರ್ಡ್ ಪಡೆದು, ಆಹಾರಧಾನ್ಯಕ್ಕಾಗ ಫಲಾನುಭವಿಗಳು ಅಲೆದಾಡುತ್ತಾರೆ. ಆದರೆ, ರಾಜ್ಯದಲ್ಲಿ 3.47 ಲಕ್ಷ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ವುಳ್ಳವರಿಗೆ 6 ತಿಂಗಳಿನಿಂದ ನ್ಯಾಯಬೆಲೆ ಅಂಗಡಿಗಳಿಂದ ಆಹಾರಧಾನ್ಯವೇ ಸಿಕ್ಕಿಲ್ಲ.

ಅಂತ್ಯೋದಯ ಕಾರ್ಡ್‌ವುಳ್ಳವರಿಗೆ ಪ್ರತಿ ತಿಂಗಳಿಗೆ 35 ಕೆ.ಜಿ ಅಕ್ಕಿ ನೀಡಲಾಗುತ್ತದೆ. ಬಿ‍ಪಿಎಲ್‌ ಕಾರ್ಡ್‌ವುಳ್ಳವರಿಗೆ ತಲಾ 10 ಕೆ.ಜಿಯಂತೆ ಅಕ್ಕಿ ಘೋಷಿಸಲಾಗಿದೆ. ಈ ಪೈಕಿ 5 ಕೆ.ಜಿ ಅಕ್ಕಿ ವಿತರಿಸಿ ಹಾಗೂ ಇನ್ನುಳಿದ 5 ಕೆ.ಜಿ ಅಕ್ಕಿಯ ಮೊತ್ತ ಕೊಡಲಾಗುತ್ತದೆ.

ರಾಜ್ಯದಲ್ಲಿ 10.88 ಲಕ್ಷ ಅಂತ್ಯೋದಯ ಮತ್ತು 1.16 ಕೋಟಿ ಬಿಪಿಎಲ್‌ ಕಾರ್ಡ್‌ದಾರರು ಇದ್ದಾರೆ. ಆ ಪೈಕಿ 14,826 ಅಂತ್ಯೋದಯ ಹಾಗೂ 3.32 ಲಕ್ಷ ಬಿಪಿಎಲ್‌ ಕಾರ್ಡ್ ಹೊಂದಿದವರು ಆಹಾರ ಧಾನ್ಯ ಪಡೆದಿಲ್ಲ.

ADVERTISEMENT

ಪಡಿತರ ಪಡೆಯದಿರುವವರಲ್ಲಿ 37,880 ಕಾರ್ಡ್‌ದಾರರು ಹೊಂದಿರುವ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದರೆ, 40,681 ಕಾರ್ಡ್‌ದಾರರನ್ನು ಹೊಂದಿರುವ ಉಡುಪಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಆಹಾರ ಧಾನ್ಯ ಒಯ್ಯಲು ಬಯೊಮೆಟ್ರಿಕ್‌ ಕಡ್ಡಾಯ ಮಾಡುವ ಮುನ್ನ ಶೇ 99ರಷ್ಟು ಅಕ್ಕಿ ವಿತರಣೆ ಆಗುತ್ತಿತ್ತು. ಬಯೊಮೆಟ್ರಿಕ್‌ ಮಾಡಿದ ಬಳಿಕ ಶೇ 85 ರಿಂದ 90ರಷ್ಟು ಮಾತ್ರ ಅಕ್ಕಿ ವಿತರಣೆಯಾಗುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳ ಸೌಲಭ್ಯ ಪಡೆಯಲು ಕೆಲವರು ಬಿಪಿಎಲ್‌ ಕಾರ್ಡ್‌ ಮಾಡಿಸಿಕೊಂಡಿದ್ದಾರೆ. ಅವರಿಗೆ ಪಡಿತರ ಪಡೆಯಲು ಅವಕಾಶವಿಲ್ಲ. ಹಿಂದೆ ಇದ್ದ ಭಾಗ್ಯಲಕ್ಷ್ಮಿ ಬಾಂಡ್‌ ಪಡೆಯಲು, ಪಿಂಚಣಿ ಪಡೆಯಲು ಕೆಲವರು ಪಡಿತರ ಚೀಟಿ ಹೊಂದಿದ್ದಾರೆ. 

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಸಹಾಯಧನ ಪಡೆಯಲು ಹೊಲಗಳನ್ನು ಮಕ್ಕಳ ಹೆಸರಿಗೆ ಮಾಡಿ, ಪ್ರತ್ಯೇಕ ಕುಟುಂಬ ಮಾಡಿದವರೂ ಕಾರ್ಡ್ ಪಡೆದಿದ್ದಾರೆ. ಅವರೆಲ್ಲರೂ ಪಡಿತರ ಪಡೆಯಲು ಬರುತ್ತಿಲ್ಲ.

ಬಾಗಲಕೋಟೆ, ವಿಜಯಪುರ, ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಗುಳೆ ಹೋಗುವುದು ಜಾಸ್ತಿ. ಆ ಜಿಲ್ಲೆಗಳಲ್ಲಿ ಪಡಿತರ ಪಡೆಯದಿರುವವರ ಸಂಖ್ಯೆ ಹೆಚ್ಚಿದೆ. ‘ಗುಳೆ ಹೋದವರು ಬಯೊಮೆಟ್ರಿಕ್‌ ಕೊಡಲಾಗದ ಕಾರಣಕ್ಕೆ ಅಕ್ಕಿ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

‘ಬಯೊಮೆಟ್ರಿಕ್‌ಗೂ ಮುನ್ನ ಬಹುತೇಕ ಫಲಾನುಭವಿಗಳು ಪಡಿತರ ಪಡೆದಿದ್ದಾರೆ ಎಂದು ನ್ಯಾಯಬೆಲೆ ಅಂಗಡಿಯವರು ತೋರಿಸುತ್ತಿದ್ದರು. ಬಯೊಮೆಟ್ರಿಕ್ ಬಳಿಕ ಬೇರೆಯವರು ಪಡಿತರ ಪಡೆಯಲಾಗುತ್ತಿಲ್ಲ’ ಎನ್ನುತ್ತಾರೆ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.