ಇಳಕಲ್: ನಗರದಿಂದ ಸಾವಿರಾರು ಭಕ್ತರು ಬಾದಾಮಿಯ ಬನಶಂಕರಿದೇವಿ ಜಾತ್ರೆಗೆ ಪಾದಯಾತ್ರೆಯ ಮೂಲಕ ತೆರಳಿದರು. ನಗರದ 20ಕ್ಕೂ ದಾನಿಗಳು, ವಿವಿಧ ಸಂಘಸಂಸ್ಥೆಗಳು ಮಾರ್ಗದುದ್ದಕ್ಕೂ ಪಾದಯಾತ್ರಿಗಳಿಗೆ ಊಟ, ಉಪಾಹಾರ ಸೇರಿ ಎಲ್ಲ ಅಗತ್ಯಗಳನ್ನು ವಿತರಿಸಿ ಸೇವೆ ಮಾಡಿದರು.
ಪಾದಯಾತ್ರಿಗಳು ಹೂಲಗೇರಿ, ಕಾಟಾಪೂರ, ಗುಡೂರ, ಭೀಮನಗಡ, ಶಿವಯೋಗಮಂದಿರ ಮಾರ್ಗವಾಗಿ ಬನಶಂಕರಿ ತಲುಪುವರು. ಪಾದಯಾತ್ರೆಯ ಮೂಲಕ ಬನಶಂಕರಿದೇವಿಯ ದರ್ಶನಕ್ಕೆ ಹೋಗುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಮಾರ್ಗದುದ್ದಕ್ಕೂ ಹಲವಾರು ದಾನಿಗಳು, ಸಂಘ–ಸಂಸ್ಥೆಗಳು ಯಾತ್ರಿಕರಿಗೆ ನೀರು, ತಂಪು ಪಾನೀಯ, ಊಟ, ಉಪಹಾರ ಹಾಗೂ ಔಷಧೋಪಚಾರ ವ್ಯವಸ್ಥೆ ಮಾಡಿದ್ದರು.
ಪಾದಯಾತ್ರಿಗಳ ಲಗೇಜ್‌ನ್ನು ಉಚಿತವಾಗಿ ಬನಶಂಕರಿಗೆ ತಲುಪಿಸುವ ವ್ಯವಸ್ಥೆ ಕೂಡಾ ಮಾಡಲಾಗಿತ್ತು. ಮಾರ್ಗದುದ್ದಕ್ಕೂ ಅಲ್ಲಲ್ಲಿ ಟೆಂಟ್‌ಗಳನ್ನು ಹಾಕಿ ಸೇವಾರ್ಥಿಗಳು ಪಾದಯಾತ್ರಿಕರ ಸೇವೆ ಮಾಡುತ್ತಿರುವುದು ಕಂಡು ಬಂದಿತು.
ಹುಡೇದ ಮಹಾಲಕ್ಷ್ಮೀ ಯುವಕ ಸಂಘ, ಶ್ರೀ ಗ್ರೂಪ್ಸ್, ಬ್ಲೂ ಸರ್ಕಲ್ ಗ್ರುಪ್, ಎಸ್‌ವಿಕೆ ಗ್ರಾನೈಟ್ ಹಾಗೂ ವಿಶ್ವಾ ಗ್ರಾನೈಟ್ಸ್, ಉದಯೋನ್ಮುಖ ಚಿಟ್ಸ್, ಜೈಮಾತಾದಿ ಸಂಘ, ಸ್ನೇಹ ಚಿಟ್ಸ್, ಬನಶಂಕರಿ ಸೇವಾ ಸಮಿತಿ, ಯಾತ್ರಿಕರಿಗೆ ನಗರದ ಗೌಳೇರಗುಡಿಯ ವೀರಾಂಜನೇಯ ಯುವಕ ಮಂಡಳಿ, ಸ್ನೇಹಜೀವಿ ಸೇವಾ ಬಳಗ, ಕೊಪ್ಪರದ ಪೇಟೆಯ ಮಿತ್ರಮಂಡಳಿ, ಚವ್ಹಾಣ ಪ್ಲಾಟ್ ವೀರಾಂಜನೇಯ ಯುವಕ ಮಂಡಳಿ, ಯಾತಾಳಪ್ಪನ ಕಟ್ಟೆ ಬಳಗ, ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಎಸ್.ಆರ್. ನವಲಿ ಹಿರೇಮಠ, ಉದ್ಯಮಿಗಳಾದ ಅರವಿಂದ ಮಂಗಳೂರ, ಮಲ್ಲಿಕಾರ್ಜುನ ಅಗ್ನಿ, ಅರುಣ ಕೊಡ್ಲಿ, ಎಸ್.ಎನ್. ಪಾಟೀಲ ಹಾಗೂ ಎಸ್.ಎಸ್. ಬಂಡಿ ಅವರು ಪಾದಯಾತ್ರೆಗೆ ತೆರಳುವ ಭಕ್ತರಿಗೆ ವಿವಿಧ ರೀತಿಯಲ್ಲಿ ದಾಸೋಹ ಸೇವೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.