ADVERTISEMENT

ಬಾಗಲಕೋಟೆ ನಗರ ಸಂಪೂರ್ಣ ಬಂದ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 8:36 IST
Last Updated 7 ಜನವರಿ 2018, 8:36 IST
ದಲಿತ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಕರೆ ನೀಡಿದ್ದ ಬಾಗಲಕೋಟೆ ನಗರ ಬಂದ್‌ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಬಾಗಲಕೋಟೆಯ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು
ದಲಿತ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಕರೆ ನೀಡಿದ್ದ ಬಾಗಲಕೋಟೆ ನಗರ ಬಂದ್‌ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಬಾಗಲಕೋಟೆಯ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು   

ಬಾಗಲಕೋಟೆ: ಮಹಾರಾಷ್ಟ್ರದ ಭೀಮಾ–ಕೋರೆಗಾಂವ್‌ ಯುದ್ಧದ 200ನೇ ವರ್ಷದ ವಿಜಯೋತ್ಸವ ಆಚರಿಸುತ್ತಿದ್ದ ದಲಿತರ ಮೇಲೆ ನಡೆದ ಹಿಂಸಾಚಾರ ಹಾಗೂ ವಿಜಯಪುರ ನಗರದ ದಲಿತ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಕರೆ ನೀಡಿದ್ದ ಬಾಗಲಕೋಟೆ ನಗರ ಬಂದ್‌ ಸಂಪೂರ್ಣ ಯಶಸ್ವಿಯಾಯಿತು.

ಅಂಗಡಿ, ವ್ಯಾಪಾರ ಮಳಿಗೆಗಳು, ಹೋಟೆಲ್‌ಗಳು ಬಂದ್‌ ಆಗಿದ್ದವು. ಬೀದಿಬದಿ ವ್ಯಾಪಾರಸ್ಥರು ಕೂಡ ಇರಲಿಲ್ಲ. ಆಟೊರಿಕ್ಷಾಗಳು ಕೂಡ ರಸ್ತೆಗೆ ಇಳಿದಿರಲಿಲ್ಲ. ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಬೇರೆ ಊರುಗಳಿಗೆ ತೆರಳಬೇಕಾದವರಿಗೆ ತೊಂದರೆಯಾಯಿತು. ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೂ ಬಂದ್ ಬಿಸಿ ತಟ್ಟಿತು.

ಹೋಟೆಲ್‌ಗಳು ಬೆಳಿಗ್ಗೆಯಿಂದಲೇ ಮುಚ್ಚಿದ್ದರಿಂದ ಸಾರ್ವಜನಿಕರು ಪರದಾಡಿದ ಘಟನೆಗಳು ನಡೆದವು. ವಿದ್ಯಾಗಿರಿಯ ಕೆಲವೆಡೆ ಬಲವಂತದಿಂದ ಅಂಗಡಿಗಳನ್ನು ಮುಚ್ಚಿಸುತ್ತಿರುವುದು ಕಂಡುಬಂತು. ನಗರದ ಪ್ರಮುಖ ವೃತ್ತಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ADVERTISEMENT

ಹಳೆಬಾಗಲಕೋಟೆಯ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದ ಪ್ರತಿಭಟನಾಕಾರರು ನಗ ರದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಂಚರಿಸಿದರು. ವಿದ್ಯಾಗಿರಿಯ ಎಂಜಿನಿಯರಿಂಗ್ ಕಾಲೇಜು ವೃತ್ತ, ಕಾಳಿದಾಸ ವೃತ್ತ, ಎಲ್‌ಐಸಿ ಸರ್ಕಲ್‌, ನವನಗರ ಬಸ್ ನಿಲ್ದಾಣ ಮಾರ್ಗವಾಗಿ ಜಿಲ್ಲಾಡಳಿತ ಭವನದ ಎದುರು ಸಮಾವೇಶಗೊಂಡಿತು.

ವಿಜಯಪುರದಲ್ಲಿ ದಲಿತ ಬಾಲಕಿಯ ಮೇಲೆ ನಡೆದ ದುಷ್ಕೃತ್ಯದಿಂದ ಬುದ್ಧ, ಬಸವ, ಅಂಬೇಡ್ಕರ್‌ರವರ ಅನುಯಾಯಿಗಳು, ಪ್ರಜ್ಞಾವಂತರು, ಪ್ರಗತಿಪರ ಚಿಂತಕರು, ಸಾಹಿತಿಗಳು, ಬುದ್ಧಿಜೀವಿಗಳು ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶಾಂತಿಯುತವಾಗಿ ವಿಜಯೋತ್ಸವ ಆಚರಿಸುತ್ತಿದ್ದ ದಲಿತ ಸಮುದಾಯದ ಚಿಂತಕರ ಮೇಲೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಏಕಾಏಕಿ ಮೇಲೆ ಹಲ್ಲೆ ನಡೆಸಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.

ಹಿಂಸೆ ಮೂಲಕ ಕೋಮುವಾದತನ ಪ್ರದರ್ಶಿಸಿರುವ ಸಂಘಟನೆಗಳ ವರ್ತನೆ ಹೊಣೆಹೊತ್ತು ದೇಶದಲ್ಲಿರುವ ಮತಾಂಧ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘಟನೆಯ ಮುಖಂಡ ಮಹಾದೇವ ಹಾದಿಮನಿ, ‘ವಿಜಯಪುರ ನಗರದ ದಲಿತ ಬಾಲಕಿಯ ಮೇಲೆ ದುಷ್ಕೃತ್ಯ ಎಸಗಿದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಪ್ರಕರಣದ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ ರಾಜೀನಾಮೆ ನೀಡಬೇಕು. ಮಹಾರಾಷ್ಟ್ರದ ಕೋರೆಗಾಂವನಲ್ಲಿ ವಿಜಯೋತ್ಸವ ಆಚರಿಸುತ್ತಿದ್ದ ದಲಿತ ಸಂಘಟನೆಗಳ ಮೇಲೆ ಹಲ್ಲೆ ನಡೆಸಿರುವ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

‘ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಸ್ವಾತಂತ್ರ್ಯವಿದೆ. ಕೇವಲ ಈ ದೇಶ ಕೋಮುವಾದಿಗಳು ಹಾಗೂ ಜಾತಿವಾದಿಗಳ ಆಸ್ತಿಯಲ್ಲ. ಇಲ್ಲಿನ ಮೂಲ ನಿವಾಸಿಗಳಾದ ದಲಿತರ ಆಸ್ತಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ರಾಜು ನೀಲನಕೇರಿ ಮಾತನಾಡಿ, ‘ನಾವು ಬುದ್ಧ, ಬಸವ, ಅಂಬೇಡ್ಕರ್‌ ಅವರ ತತ್ವ ಸಿದ್ಧಾಂತಗಳಡಿ ಬದುಕುತ್ತಿದ್ದೇವೆ. ದಲಿತರು ಮಹಾನ್ ಸ್ವಾಭಿಮಾನಿಗಳಾಗಿದ್ದಾರೆ. ಅವರ ತಾಳ್ಮೆಯನ್ನು ಪರೀಕ್ಷಿಸುವ ಕೆಲಸ ಮಾಡಬೇಡಿ. ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬೇಡಿ. ಧೈರ್ಯವಿದ್ದರೆ ಎದುರು ನಿಂತು ಹೋರಾಟ ನಡೆಸಿ. ದೇಶದಲ್ಲಿ ಶೇ.3ರಷ್ಟಿರುವ ನಿಮಗೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ದಲಿತರು ಹೋರಾಟಕ್ಕೆ ಅಣಿಯಾದರೆ ದೇಶದಲ್ಲಿ ಅಲ್ಲೋಲ ಕಲ್ಲೋಲವೇ ಉಂಟಾಗಲಿದೆ. ಭಾರತ ಮಾತೆಯನ್ನು ತಾಯಿ ಎಂದು ಕರೆಯುವ ಮತಾಂಧ ಸಂಘಟನೆಗಳು, ವಿಜಯಪುರದ ದಲಿತ ಬಾಲಕಿಯ ಮೇಲೆ ದೌರ್ಜನ್ಯ ನಡೆದಾಗ ಎಲ್ಲಿ ಹೋಗಿದ್ದೀರಿ’ ಎಂದು ಕಿಡಿಕಾರಿದರು.

ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ಧೀನ್ ಖಾಜಿ ಮಾತನಾಡಿ, ‘ದಲಿತರು ದುರ್ಬಲರಲ್ಲ. ಬಹುಸಂಖ್ಯಾತರಾಗಿದ್ದು, ಅತ್ಯಾಚಾರಿಗಳ ಮನೆಗೆ ಹೊಕ್ಕು ಹೊಡೆಯುವ ಕೆಲಸ ಮಾಡಬೇಕಿದೆ. ಸಂವಿಧಾನ ಬದಲಿಸುವ ಹೇಳಿಕೆ ನೀಡಿರುವವರ ನಾಲಿಗೆ ಕತ್ತರಿಸಬೇಕು’ ಎಂದು ಹೇಳಿದರು.

ಒಕ್ಕೂಟದ ಎನ್‌.ಬಿ.ಗಸ್ತಿ, ಪ್ರೇಮ ನಾಥ ಗರಸಂಗಿ, ತಿಪ್ಪಣ್ಣ ನೀಲನಾಯಕ, ಯಮನಪ್ಪ ಚಲವಾದಿ, ಶರಣಕುಮಾರ ಕಂಬಾಗಿ, ವೈ.ವೈ.ತಿಮ್ಮಾಪುರ, ಶಫೀಕ್ ದೊಡಕಟ್ಟಿ, ಭೀಮಣ್ಣ ಬಜನ್ನವರ ಸೇರಿದಂತೆ ನೂರಾರು ಜನರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.