ADVERTISEMENT

‘ವಚನ ಪಠಣ ಒಂದು ಧಾರ್ಮಿಕ ವಿಧಿ’

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 6:47 IST
Last Updated 10 ಜನವರಿ 2018, 6:47 IST

ಕೂಡಲಸಂಗಮ: ಕೂಡಲಸಂಗಮ ಬಸವ ಧರ್ಮಪೀಠದ ಶರಣ ಲೋಕದಲ್ಲಿ 31ನೇ ಶರಣ ಮೇಳದ ಅಖಂಡ ವಚನ ಪಠಣ ಸಪ್ತಾಹ ಸಮಾರಂಭವನ್ನು ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಮಾತೆ ಜ್ಞಾನೇಶ್ವರಿ ಧ್ವಜಾರೋಹಣ ಮಾಡಿ ಉದ್ಘಾಟಿದರು.

‘ಬಸವ ಧರ್ಮಪೀಠದ ಮಾಹಾ ದೇಶ್ವರ ಸ್ವಾಮೀಜಿ ಉದಕದೊಳಗೆ ಬಚ್ಚಿಟ್ಟ ಬಯಕೆಯ ಕಿಚ್ಚಿನಂತಿದ್ದಿತ್ತು’ ಎಂಬ ವಚನ ಹೇಳುವುದರ ಮೂಲಕ ಶರಣ ಮೇಳದ ವಚನ ಪಠಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ದಿನನಿತ್ಯ ಸುಪ್ರಭಾತದಲ್ಲಿ ಇಷ್ಟಲಿಂಗಾರ್ಚನೆ ನೆರವೇರಿಸಿದ ಬಳಿಕ ಕನಿಷ್ಠ ಐದು ವಚನಗಳನ್ನಾದರೂ ಪಾರಾಯಣ ಮಾಡಬೇಕು. ಜಾತಿವಾದಿಗಳು ವಚನ ಸಾಹಿತ್ಯವನ್ನು ನಾಶಮಾಡಬೇಕೆಂದು ಪಣ ತೊಟ್ಟಾಗ 12ನೇ ಶತಮಾನದಲ್ಲಿ ಶರಣರು ಖಡ್ಗ ಹಿಡಿದು ಹೋರಾಟ ಮಾಡಿ ಪ್ರಾಣತೆತ್ತು ವಚನ ಸಾಹಿತ್ಯ ಉಳಿಸಿಕೊಟ್ಟಿದ್ದಾರೆ.

ADVERTISEMENT

ಅವರು ಪ್ರಾಣಕೊಟ್ಟು ಉಳಿಸಿದ ಸಾಹಿತ್ಯವನ್ನು ನಾವು ಅಭಿಮಾನವಿಟ್ಟು ಕಾಪಾಡಿಕೊಳ್ಳಬೇಕು. ಅಸಂಖ್ಯಾತ ಶರಣ-ಶರಣಿಯರ ಕೊಡುಗೆಯಾದ ವಚನ ಸಾಹಿತ್ಯ ವಿಶ್ವದ ಅನುಭಾವ ಸಾಹಿತ್ಯಕ್ಕೆ ಮಹಾನ್ ಕೊಡುಗೆ, ನಮಗೆಲ್ಲ ದಾರಿದೀಪವಾಗಿದೆ’ ಎಂದು ಜ್ಞಾನೇಶ್ವರಿ ಹೇಳಿದರು.

ಮಂಗಳವಾರ ಆರಂಭಗೊಂಡ ಈ ವಚನ ಪಠಣ ಜನವರಿ 15ರ ರಾತ್ರಿ 10 ಗಂಟೆಗೆ ಮುಕ್ತಾಯಗೊಳ್ಳುವುದು. ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾಗಿ ರಾತ್ರಿ 10 ಗಂಟೆಯವರೆಗೆ ಈ ವಚನ ಪಠಣ ನಡೆಯುವುದು.

ವಚನ ಪಠಣದ ಮಧ್ಯ ‘ಓಂ ಶ್ರೀಗುರು ಬಸವ ಲಿಂಗಾಯನಮಃಶ್’ ಮಂತ್ರ ಪಠಣವೂ, ವಿಶೇಷ ಪೂಜೆ ಆಗಾಗ ನಡೆಯುತ್ತದೆ. ವಚನ ಪಠಣದಲ್ಲಿ ಭಾಗವಹಿಸುವವರು ಸ್ನಾನ ಮಾಡಿ ಮಡಿವಸ್ತ್ರಗಳನ್ನುಟ್ಟು ಅಲ್ಲಿ ಒದಗಿಸುವ ವಿಶೇಷ ಪವಿತ್ರ ಮೇಲು ವಸ್ತ್ರವನ್ನು ಹೊದ್ದು ಪಠಣ ಮಾಡಬೇಕು. ವಚನ ಪಠಣಕ್ಕೆ ನೆರವಾಗುವಂತೆ ವಚನ ಸಂಗಮ ಎಂಬ ಪುಸ್ತಕವು ಕನ್ನಡ, ಮರಾಠಿ, ತೆಲಗು, ತಮಿಳು ಭಾಷೆಯಲ್ಲಿ ಇರುವುದು ಪ್ರತಿಯೊಬ್ಬ ಶರಣರು ಒಂದು ಗಂಟೆಗಳ ಕಾಲ ವಚನ ಪಠಣ ಮಾಡಬಹುದು.

ಕೂಡಲಸಂಗಮ ಬಸವ ಧರ್ಮ ಪೀಠದ ಚಂದ್ರಶೇಖರಾನಂದ ಸ್ವಾಮೀಜಿ, ಮಾತೆ ದಾನೇಶ್ವರಿ, ಲಿಂಗಾಯತ ಧರ್ಮ ಮಹಾಸಭಾ ಅಧ್ಯಕ್ಷ ಕೆ.ಬಸವರಾಜ, ಕಡೂರ ರಾಷ್ಟ್ರೀಯ ಬಸವ ದಳದ ಲೋಕೇಶಪ್ಪ, ಬಿಜಾಪೂರದ ಮಲ್ಲಿಕಾರ್ಜುನ ಪಲದಿನ್ನಿ, ಭದ್ರಾವತಿಯ ಬಸವರಾಜಪ್ಪ, ಧಾರವಾಡದ ಚಂದ್ರಮ್ಮ ಸದಾನಂದ ಸ್ವಾಮೀಜಿ ಇದ್ದರು.

* * 

ವಚನ ಸಾಹಿತ್ಯ ವಿಶ್ವಮಟ್ಟದ ಸಾಹಿತ್ಯವನ್ನೂ ಶ್ರೀಮಂತಗೊಳಿಸಿದೆ. ಅದನ್ನು ಜಗತ್ತಿನ ಎಲ್ಲ ಭಾಷೆಗಳಲ್ಲಿ ಬಿತ್ತರಿಸುವ ಕಾರ್ಯ ಮಾಡುತ್ತಿದ್ದೇವೆ
ಮಹಾದೇಶ್ವರ ಸ್ವಾಮೀಜಿ ಬಸವ ಧರ್ಮ ಪೀಠ, ಕೂಡಲಸಂಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.