ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಧಕ್ಕೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 6:33 IST
Last Updated 13 ಜನವರಿ 2018, 6:33 IST
ಶಿವಶರಣ ಮಾದಾರ ಚನ್ನಯ್ಯ ಭವನವನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಉದ್ಘಾಟಿಸಿದರು
ಶಿವಶರಣ ಮಾದಾರ ಚನ್ನಯ್ಯ ಭವನವನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಉದ್ಘಾಟಿಸಿದರು   

ಮಹಾಲಿಂಗಪುರ: ‘ರಾಜ್ಯದಲ್ಲಿ ಕಾಂಗ್ರೆಸ್‌ಗೆ ಯಾವುದೇ ಧಕ್ಕೆ ಇಲ್, ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು. ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡ ಳಿತ ಮತ್ತು ಪುರಸಭೆಗಳ ಆಶ್ರಯದಲ್ಲಿ ಜರುಗಿದ ಶಿವಶರಣ ಮಾದಾರ ಚನ್ನಯ್ಯ ಸಮುದಾಯ ಭವನವನ್ನು ಉದ್ಘಾಟಿಸಿ ಗುರುವಾರ ಸಂಜೆ ಮಾತನಾಡಿದರು.

‘ರಾಜ್ಯದಲ್ಲಿ ಹಿಂದುಳಿದವರು ಸೇರಿದಂತೆ ಎಲ್ಲಾ ಸಮಾಜಗಳ, ಧರ್ಮಗಳ ಸಮುದಾಯ ಭವನಗಳಿಗೆ ₹500 ಕೋಟಿ ಅನುದಾನ ನೀಡಲಾಗಿದೆ. ತೇರದಾಳ ಮತಕ್ಷೇತ್ರದ ವಿವಿಧ ಭವನಗಳಿಗೆ ₹8 ಕೋಟಿ ಹಣ ನೀಡಲಾಗಿದೆ. ಬಹಿಷ್ಕಾರಕ್ಕೆ ಒಳಗಾಗಿದ್ದ ಹಿಂದುಳಿದ ಸಮಾಜಕ್ಕೆ ಸಮಾನತೆ ತಂದು ಕೊಟ್ಟಿದ್ದು ವಿಶ್ವಗುರು ಬಸವಣ್ಣ. ಅವರ ಕಾಯಕ ಸಿದ್ಧಾಂತ ಮತ್ತು ಸಮಾನತೆಯ ತತ್ವದಡಿಯಲ್ಲೇ ನಾನು ಸಮಾಜ ಕಲ್ಯಾಣ ಇಲಾಖೆಯ ಸಚಿವನಾಗಿ ಪ್ರತಿಯೊಂದು ಸಮಾಜಗಳಿಗೆ, ಸಮಾನತೆ ಮತ್ತು ಜಾತ್ಯತೀತ ತತ್ವಗಳನ್ನು ಹೊಂದಿರುವ ಮಠ ಮಾನ್ಯಗಳಿಗೆ ಹೆಚ್ಚಿನ ಅನುದಾನವನ್ನು ನೀಡಿದ್ದೇನೆ’ ಎಂದರು.

‘ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಸ್‌ಸಿಪಿಟಿಎಸ್‌ಪಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಅಭಿವೃದ್ಧಿಗೆ ಹೊಸ ಅಧ್ಯಾಯ ಬರೆಯಲಾಗಿದೆ. ಹಿಂದುಳಿದ ವರ್ಗದವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ದಿ ಹೊಂದಲು ಶೇ 50 ಸಬ್ಸಿಡಿ ಸಾಲ ವಿತರಣೆ, ಪಿಡಬ್ಲೂಡಿಯಲ್ಲಿ ಹಿಂದುಳಿದ ವರ್ಗದ ಗುತ್ತಿಗೆದಾರರಿಗೆ ಶೇ 50 ಮೀಸಲಾತಿ ಸೇರಿದಂತೆ ಹಲವು ಯೋಜನೆಗಳ ಮೂಲಕ ಸಮಾಜದ ಅಭಿವೃದ್ದಿಗೆ ಶ್ರಮಿಸಲಾಗಿದೆ’ ಎಂದು ವಿವರ ನೀಡಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಮಾತನಾಡಿ ‘ಶಿವಶರಣ ಎಂಬ ಶಬ್ದದಲ್ಲಿ ಜಗತ್ತಿನ ಎಲ್ಲಾ ಧರ್ಮ, ಜಾತಿಗಳು ಕೂಡಿರುವದರಿಂದ ಈ ಭವನವು ಸರ್ವ ಜನಾಂಗಕ್ಕೂ ಸದ್ಬಳಕೆಯಾಗಲಿ. ಸಮಾಜದಲ್ಲಿ ಜಾತಿ, ಧರ್ಮವೆಂಬ ಭೇದಗಳು ಅಳಿದು ಮಾನವ ಧರ್ಮ ಒಂದೇ ಎಂಬ ವಿಶಾಲ ಮನೋಭಾವನೆ ಮೂಡಲಿ’ ಎಂದರು.

ಮುಧೋಳ ಶಾಸಕ ಗೋವಿಂದ ಕಾರಜೋಳ ಮಾತನಾಡಿ ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮುದಾಯ ಭವನಕ್ಕೆ ಚಾಲನೆ ನೀಡಿ, ನಾನು ಸಚಿವನಾಗಿದ್ದ ವೇಳೆ ಭವನಕ್ಕೆ ವಿವಿಧ ಇಲಾಖೆಯ ಮೂಲಕ ಒಂದು ಕೋಟಿ ಅನುದಾನ ನೀಡಿದ್ದೆ. ಅಪೂರ್ಣಗೊಂಡ ಭವನಕ್ಕೆ ₹60 ಲಕ್ಷ ನೀಡಿದ್ದೆ. ಭವ್ಯವಾದ ಈ ಭವನವು ಹಿಂದುಳಿದ ಸಮಾಜಕ್ಕೆ ಸೇರಲಿ. ಜೊತೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್. ಆಂಜನೇಯ ರಾಜ್ಯದಲ್ಲಿ ಸರ್ಕಾರದಿಂದ ನಿರ್ಮಿಸಿದ ಅಂಬೇಡ್ಕರ್‌, ವಾಲ್ಮೀಕಿ, ಬಾಬು ಜಗಜೀವನ ರಾಮ್ ಭವನ ಸೇರಿದಂತೆ ಎಲ್ಲವನ್ನು ಆಯಾ ಸಮುದಾಯಗಳಿಗೆ ಹಸ್ತಾಂತರಿಸುವ ಕಾಯಿದೆಯನ್ನು ಜಾರಿಗೆ ತರಲಿ’ ಎಂದು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿದರು. ಪುರಸಭೆ ಅಧ್ಯಕ್ಷ ಬಸವರಾಜ ರಾಯರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು, ಹಂಪಿಯ ಪೂರ್ಣಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ರಬಕವಿ -ನಗರಸಭೆ ಅಧ್ಯಕ್ಷೆ ರಮೀಜಾ ಜಾರೆ, ಸವಿತಾ ದೊಡಮನಿ, ಹೊಳೆಪ್ಪ ಬಾಡಗಿ, ಸುಜಾತಾ ಸಿಂಗಾಡಿ, ಪರಶುರಾಮ ಬಸವ್ವಗೋಳ, ಮುತ್ತಣ್ಣ ಬೆನ್ನೂರ, ನಾಗಪ್ಪ ಗೌಂಡಿ, ಯಲ್ಲನಗೌಡ ಪಾಟೀಲ, ರಂಗನಗೌಡ ಪಾಟೀಲ, ವೀಣಾ ದೇಸಾಯಿ ಪುರಸಭೆಯ ಸರ್ವ ಸದಸ್ಯರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.

‘ಕೌಜಲಗಿ ನಿಂಗಮ್ಮ ಹೆಸರು ಉಳಿಯಲಿ’

‘ರಂಗಭೂಮಿ ಪ್ರಥಮ ಕಲಾವಿದೆ, ಹಿಂದುಳಿದ ವರ್ಗದ ಮಹಿಳೆ ಕೌಜಲಗಿ ನಿಂಗಮ್ಮ ಹೆಸರಿನ ರಂಗ ಮಂದಿರವನ್ನು ಮಹಾಲಿಂಗಪುರದಲ್ಲಿ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಅದಕ್ಕೆ ಹೆಚ್ಚುವರಿಯಾಗಿ ₹2 ಕೋಟಿ ಮಂಜೂರಿ ಮಾಡುವ ಮೂಲಕ ಮಾದರಿ ಭವನ ನಿರ್ಮಿಸಿ ಕೌಲಜಗಿ ನಿಂಗಮ್ಮನ ಹೆಸರನ್ನು ಅಜರಾಮರವಾಗಿ ಉಳಿಸಲು ಪ್ರಯತ್ನಿಸುತ್ತಿದ್ದೇನೆ. ಇಂತಹ ಅವಕಾಶ ಕಲಾವಿದೆ, ಶಾಸಕಿಯಾದ ನನಗೆ ಸಿಕ್ಕಿದ್ದು ನನ್ನ ಸೌಭಾಗ್ಯ’ ಎಂದು ಸಚಿವೆ ಉಮಾಶ್ರೀ ಹೇಳಿದರು.

* * 

ಸಿದ್ದರಾಮಯ್ಯನವರು ಶ್ರೀರಾಮ, ನಾನು ಆಂಜನೇಯನಂತೆ ಅವರಿಗೆ ಬೆಂಬಲವಾಗಿ ಪಕ್ಷ ಸಂಘಟನೆಗೆ ರಾಜ್ಯ ದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ
ಎಚ್. ಆಂಜನೇಯ ಸಮಾಜ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.