ADVERTISEMENT

ಕನ್ನಡದ ಚೆಕ್‌ ನಿರಾಕರಣೆ: ಆರ್‌ಬಿಐಗೆ ಗ್ರಾಹಕರ ದೂರು!

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 6:54 IST
Last Updated 17 ಜನವರಿ 2018, 6:54 IST
ಬಾದಾಮಿ ಎಸ್‌ಬಿಐ ಬ್ಯಾಂಕಿನ ಚೆಕ್‌ನಲ್ಲಿ ರೂಪಾಯಿಗಳ ಸಂಖ್ಯೆಯನ್ನು ಕನ್ನಡದಲ್ಲಿ ಬರೆಯಲಾಗಿದೆ.
ಬಾದಾಮಿ ಎಸ್‌ಬಿಐ ಬ್ಯಾಂಕಿನ ಚೆಕ್‌ನಲ್ಲಿ ರೂಪಾಯಿಗಳ ಸಂಖ್ಯೆಯನ್ನು ಕನ್ನಡದಲ್ಲಿ ಬರೆಯಲಾಗಿದೆ.   

ಬಾದಾಮಿ: ಅಂಕಿಯನ್ನು ಕನ್ನಡದಲ್ಲಿ ಬರೆದುಕೊಟ್ಟ ಚೆಕ್‌ ಅನ್ನು ಹುಬ್ಬಳ್ಳಿಯ ಕಾರ್ಪೋರೇಶನ್‌ ಬ್ಯಾಂಕಿನಲ್ಲಿ ಅಧಿಕಾರಿಗಳು ನಿರಾಕರಿಸಿ ತಿಳಿಯದ ಭಾಷೆ (ಅನ್ನೋನ್‌ ಭಾಷೆ) ಎಂದು ಮರಳಿ ಕಳಿಸಿದ್ದಾರೆ ಎಂದು ಸ್ಥಳೀಯ ವೀರಭದ್ರೇಶ್ವರ ಇಲೆಕ್ಟ್ರಿಕಲ್‌ ಅಂಗಡಿಯ ಮಾಲೀಕ ಮತ್ತು ಬ್ಯಾಂಕಿನ ಗ್ರಾಹಕ ಡಿ.ಎನ್‌. ಶಿರೂರ ಆರೋಪಿಸಿ ಆರ್‌ಬಿಐ ಕುಂದುಕೊರತೆ ವಿಭಾಗಕ್ಕೆ ದೂರು ಸಲ್ಲಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ಥಳೀಯ ಎಸ್‌ಬಿಐ ಬ್ಯಾಂಕಿನ ಖಾತೆಯ ಮೂಲಕ ಚೆಕ್‌ನಲ್ಲಿ ₹ 35,175 ಅಂಕಿಯನ್ನು ಕನ್ನಡದಲ್ಲಿ ಬರೆದು ಮೈಕ್ರೋ ಪಂಪ್ಸ್ ಮತ್ತು ಕೇಬಲ್‌ ಹುಬ್ಬಳ್ಳಿಗೆ ಡಿ.30ರಂದು ಕಳಿಸಿದ್ದೆನು. ಮೈಕ್ರೋದವರು ಜ. 2ರಂದು ಬ್ಯಾಂಕಿಗೆ ಚೆಕ್‌ ಜಮೆ ಮಾಡಿದ್ದಾರೆ. ಚೆಕ್ಕಿನಲ್ಲಿ ಬರೆದ ಭಾಷೆ ತಿಳಿಯುವುದಿಲ್ಲ ಎಂದು ಹುಬ್ಬಳ್ಳಿಯ ಮೈಕ್ರೋ ಪಂಪ್ಸ್‌ನವರಿಗೆ ಜ. 3ರಂದು ಚೆಕ್‌ ಅನ್ನು ಮರಳಿ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ನಾನು ಇಲ್ಲಿಯವರೆಗೆ ಬ್ಯಾಂಕಿನಲ್ಲಿ ಕನ್ನಡದಲ್ಲಿಯೇ ವ್ಯವಹರಿಸಿದ್ದೇನೆ. ಹುಬ್ಬಳ್ಳಿ ಕಾರ್ಪೋರೇಶನ್‌ ಬ್ಯಾಂಕಿನ ವ್ಯವಸ್ಥಾಪಕರಿಗೆ ಕನ್ನಡ ಭಾಷೆ ಬರದಿದ್ದರೆ ಇನ್ನುಳಿದ ಸಿಬ್ಬಂದಿಗೂ ಕನ್ನಡ ಬರುವುದಿಲ್ಲವೇ ಹೇಗೆ ? ಎಂದು ಪ್ರಶ್ನಿಸಿ, ಸಿಬ್ಬಂದಿ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಗ್ರಾಹಕ ಶಿರೂರ ಒತ್ತಾಯಿಸಿದ್ದಾರೆ.

ADVERTISEMENT

ಚಲಾವಣೆಯಲ್ಲಿರುವ ಕರೆನ್ಸಿಯಲ್ಲಿ 5ನೇ ಭಾಷೆಯೇ ಕನ್ನಡವಾಗಿದೆ. ಪ್ರಾದೇಶಿಕ ಭಾಷೆ ಬಲ್ಲವರನ್ನು ಗ್ರಾಹಕರ ಸೇವೆ ನಿಯೋಜಿಸಬೇಕು. ಸೂಕ್ತ ಕ್ರಮವನ್ನು ಕೈಗೊಳ್ಳದಿದ್ದರೆ ಕನ್ನಡ ಪರ ಸಂಘಟನೆಗಳ ಮೂಲಕ ಬ್ಯಾಂಕ್‌ ಸಿಬ್ಬಂದಿ ವಿರುದ್ಧ ಹೋರಾಟಕ್ಕೆ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.