ADVERTISEMENT

‘ಹಾಲಿ ಶಾಸಕರಿಗೆ ಮೊದಲ ಮನ್ನಣೆ’

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 8:59 IST
Last Updated 30 ಜನವರಿ 2018, 8:59 IST
ಬಾಗಲಕೋಟೆಯಲ್ಲಿ ವಸಂತ ಲದವಾ ಹಾಗೂ ಕೆಪಿಸಿಸಿ ವೀಕ್ಷಕರಾದ ಯು.ಆರ್.ಸಭಾಪತಿ ಟಿಕೆಟ್‌ ಆಕಾಂಕ್ಷಿಗಳ ಅಹವಾಲು ಸೋಮವಾರ ಆಲಿಸಿದರು. ಕೆಪಿಸಿಸಿ ಜಿಲ್ಲೆಯ ಉಸ್ತುವಾರಿ ಪಾರಸಮಲ್‌ಜೈನ್ ಇದ್ದಾರೆ
ಬಾಗಲಕೋಟೆಯಲ್ಲಿ ವಸಂತ ಲದವಾ ಹಾಗೂ ಕೆಪಿಸಿಸಿ ವೀಕ್ಷಕರಾದ ಯು.ಆರ್.ಸಭಾಪತಿ ಟಿಕೆಟ್‌ ಆಕಾಂಕ್ಷಿಗಳ ಅಹವಾಲು ಸೋಮವಾರ ಆಲಿಸಿದರು. ಕೆಪಿಸಿಸಿ ಜಿಲ್ಲೆಯ ಉಸ್ತುವಾರಿ ಪಾರಸಮಲ್‌ಜೈನ್ ಇದ್ದಾರೆ   

ಬಾಗಲಕೋಟೆ: ‘ಜಿಲ್ಲೆಯಲ್ಲಿ ಆರು ಮಂದಿ ಪಕ್ಷದ ಶಾಸಕರಿದ್ದಾರೆ. ಯಾರ ಮೇಲೂ ಗಂಭೀರವಾದ ಆರೋಪಗಳು ಕೇಳಿ ಬಂದಿಲ್ಲ ಎಂದು ಕೆಪಿಸಿಸಿ ವೀಕ್ಷಕರೂ ಆದ ಉಡುಪಿಯ ಮಾಜಿ ಶಾಸಕ ಯು.ಆರ್. ಸಭಾಪತಿ ಹೇಳಿದರು.

ವಿಧಾನಸಭೆಯ ಚುನಾವಣೆಯ ಟಿಕೆಟ್ ನೀಡಿಕೆಯ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಅಹವಾಲು ಆಲಿಸಲು ಪಕ್ಷದ ವತಿಯಿಂದ ವೀಕ್ಷಕರಾಗಿ ಬಂದಿದ್ದ ಅವರು, ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಯಾವುದೇ ರಾಜಕೀಯ ಪಕ್ಷದಲ್ಲಿ ಹಾಲಿ ಇರುವ ಶಾಸಕರ ಬದಲಿಗೆ ಬೇರೆಯವರಿಗೆ ಟಿಕೆಟ್‌ ನೀಡಬೇಕು ಎಂದರೆ ಮೇಲೆ ಗಂಭೀರ ಆರೋಪಗಳು ಕೇಳಿಬಂದಿರಬೇಕು. ಕ್ರಿಮಿನಲ್ ಮೊಕದ್ದಮೆ ದಾಖಲಾಗಿರಬೇಕು. ಇಲ್ಲವೇ ಯಡಿಯೂರಪ್ಪ ಜೈಲಿಗೆ ಹೋಗಿ ಬಂದಂತಹ ಗಂಭೀರ ಆರೋಪಗಳಿರಬೇಕು. ಆಗ ಮಾತ್ರ ಪರ್ಯಾಯ ನಾಯಕರಿಗೆ ಮಣೆ ಹಾಕಲಾಗುವುದು’ ಎಂದರು.

ADVERTISEMENT

ಈಗಾಗಲೇ ಜಿಲ್ಲೆಯ ಬಾದಾಮಿ, ಮುಧೋಳ, ತೇರದಾಳ, ಜಮಖಂಡಿ ಹಾಗೂ ಬೀಳಗಿ ಮತಕ್ಷೇತ್ರಗಳಲ್ಲಿ ಪ್ರವಾಸ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಶಾಸಕರು, ವಿವಿಧ ಬ್ಲಾಕ್ ಘಟಕಗಳ ಅಧ್ಯಕ್ಷರು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಅನಿಸಿಕೆ ಹಾಗೂ ಅಭಿಪ್ರಾಯಗ ಸಂಗ್ರಹಿಸಿ ಆಯಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಅಹವಾಲು ಸ್ವೀಕರಿಸಲಾಗಿದೆ. ಯಾರೆಲ್ಲ ಆಕಾಂಕ್ಷಿಗಳಿದ್ದಾರೆ ಎಂಬುದರ ಬಗ್ಗೆ ಇದೇ 30 ರಂದು ಕೆಪಿಸಿಸಿ ಅಧ್ಯಕ್ಷರಿಗೆ ಮಧ್ಯಂತರ ವರದಿಯನ್ನು ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ಟಿಕೆಟ್ ಸಿಗದ ಆಕಾಂಕ್ಷಿಗಳು ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಭಿನ್ನಮತ ಸೃಷ್ಟಿಸುವ ಸಂದರ್ಭವೇ ಬರುವುದಿಲ್ಲ. ಹೈಕಮಾಂಡ್ ನಿರ್ಣಯಕ್ಕೆ ಬದ್ಧರಾಗಿ ಅಭ್ಯರ್ಥಿಯ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಲಿದ್ದಾರೆ. ಆಕಾಂಕ್ಷಿಗಳ ಪಟ್ಟಿ ತಯಾರಿಸಿ, ಮೊದಲು ಮಧ್ಯಂತರ ವರದಿಯನ್ನು ಸಲ್ಲಿಸುತ್ತೇವೆ. ಹೊಸ ಮುಖಗಳಿಗೆ ಮಣೆ ಹಾಕುವುದು, ಬಿಡುವುದು ಮುಂದೆ ನೋಡೋಣ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಅಲ್ಲಿನ ಶಾಸಕ ಚಿಮ್ಮನಕಟ್ಟಿ ಅವರಿಂದ ವಿರೋಧ ವ್ಯಕ್ತವಾಗಿಲ್ಲ. ಸಿಎಂ ನಿಲ್ಲುವುದಾದರೆ ತಮ್ಮದೇನು ಆಕ್ಷೇಪಣೆ ಇಲ್ಲ ಎಂದು ಹೇಳಿದ್ದಾರೆ. ಬೇರೆಯವರಿಗೆ ಟಿಕೆಟ್ ನೀಡುವುದಕ್ಕೆ ಮಾತ್ರ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವಸಂತ ಲದ್ವಾ ಹಾಜರಿದ್ದರು.

ಕ್ಷೇತ್ರವಾರು ಆಕಾಂಕ್ಷಿಗಳು...

ಕಳೆದ ಮೂರು ದಿನಗಳಿಂದ ವೀಕ್ಷಕರು ಆಕಾಂಕ್ಷಿಗಳ ಅಹವಾಲು ಆಲಿಸಿದ್ದಾರೆ. ಬಾದಾಮಿಯಲ್ಲಿ ಅತಿ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.

ಬಾಗಲಕೋಟೆ: ಶಾಸಕ ಎಚ್.ವೈ.ಮೇಟಿ, ಮಾಜಿ ಶಾಸಕ ಪಿ.ಎಚ್.ಪೂಜಾರ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಶ್ರೀನಿವಾಸ ಬಳ್ಳಾರಿ.

ತೇರದಾಳ: ಸಚಿವೆ ಉಮಾಶ್ರೀ, ಡಾ.ಎಂ.ಎಸ್.ದಡ್ಡೇನವರ, ಯೂನಸ್ ಚೌಗುಲಾ.

ಮುಧೋಳ: ಸಚಿವ ಆರ್.ಬಿ.ತಿಮ್ಮಾಪುರ, ಸತೀಶ ಬಂಡಿವಡ್ಡರ, ಮುತ್ತಣ್ಣ ಬೆನ್ನೂರ,ರವೀಂದ್ರ ಲಕ್ಷಣ್ಣವರ, ಕಲ್ಲೂರಪ್ಪ ಬಂಡಿವಡ್ಡರ.

ಬೀಳಗಿ: ಶಾಸಕ ಜೆ.ಟಿ.ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡರ, ಶಿವಾನಂದ ನಿಂಗನೂರ, ರಮೇಶ ಯಡಹಳ್ಳಿ, ಶಂಭುಗೌಡ ಪಾಟೀಲ.

ಜಮಖಂಡಿ: ಶಾಸಕ ಸಿದ್ದು ನ್ಯಾಮಗೌಡ, ಸುಶೀಲ್‌ಕುಮಾರ ಬೆಳಗಲಿ, ಶ್ರೀಶೈಲ ದಳವಾಯಿ, ಮುತ್ತಣ್ಣ ಹಿಪ್ಪರಗಿ.

ಬಾದಾಮಿ: ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಡಾ.ದೇವರಾಜ ಪಾಟೀಲ, ಎಂ.ಬಿ.ಕಿತ್ತಲಿ, ಮಹೇಶ ಹೊಸಗೌಡ್ರ, ಎಸ್.ಡಿ.ಜೋಗಿನ, ಎಸ್.ವೈ.ಕುಳಗೇರಿ, ರೇಣುಕಾ ದಂಟಾನ, ಪ್ರಕಾಶ ನಾಯ್ಕರ.

ಹುನಗುಂದ: ಶಾಸಕ ವಿಜಯಾನಂದ ಕಾಶಪ್ಪನವರ.

* * 

ಪಕ್ಷದ ಟಿಕೆಟ್ ವಿಚಾರದಲ್ಲಿ ಜಿಲ್ಲೆಯಲ್ಲಿ ಯಾವುದೇ ಗೊಂದಲವಿಲ್ಲ. ಮುಂದಿನ ವಾರ ಮತ್ತೆ ಬಂದು ಎರಡನೇ ಸುತ್ತಿನಲ್ಲಿ ಅಹವಾಲು ಆಲಿಸಲಾಗುವುದು
ವಸಂತ ಲದವಾ
ಕೆಪಿಸಿಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.