ADVERTISEMENT

ಜನಾಶೀರ್ವಾದಕ್ಕೆ ಜಿಲ್ಲಾ ಕಾಂಗ್ರೆಸ್ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 8:40 IST
Last Updated 19 ಫೆಬ್ರುವರಿ 2018, 8:40 IST
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಪ್ರವಾಸದ ನಿಮಿತ್ತ ಭಾನುವಾರ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಚರ್ಚೆ ನಡೆಸಿದರು
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಪ್ರವಾಸದ ನಿಮಿತ್ತ ಭಾನುವಾರ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಚರ್ಚೆ ನಡೆಸಿದರು   

ಬಾಗಲಕೋಟೆ: ಜನಾಶೀರ್ವಾದ ಯಾತ್ರೆ ಅಂಗವಾಗಿ ಫೆಬ್ರುವರಿ 25ರಂದು ನಗರಕ್ಕೆ ಬರಲಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಇಲ್ಲಿನ ಸಕ್ರಿ ಹೈಸ್ಕೂಲ್‌ ಮೈದಾನದಲ್ಲಿ ಪಕ್ಷದ ವತಿಯಿಂದ ಆಯೋಜಿಸುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ರಾಹುಲ್‌ಗಾಂಧಿಗೆ ಸಾಥ್ ನೀಡಲಿದ್ದಾರೆ.

ಹೈದರಾಬಾದ್ ಕರ್ನಾಟಕ ಭಾಗದ ನಂತರ ಇದೀಗ ಎರಡನೇ ಹಂತದಲ್ಲಿ ಮುಂಬೈ ಕರ್ನಾಟಕದಲ್ಲಿ ಜನಾಶಿರ್ವಾದ ಕೇಳಲು ಬರುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಸ್ವಾಗತಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಭಾನುವಾರ ಇಲ್ಲಿನ ಪಕ್ಷದ ಜಿಲ್ಲಾ ಕಚೇರಿ ಆವರಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ ನೇತೃತ್ವದಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

ಬೀಳಗಿಯಲ್ಲಿ ರೋಡ್‌ ಶೋ, ಮುಧೋಳದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡು ಮೊದಲ ಬಾರಿಗೆ ಬಾಗಲಕೋಟೆಗೆ ಬರುತ್ತಿರುವ ಎಐಸಿಸಿ ಅಧ್ಯಕ್ಷರನ್ನು ಸ್ವಾಗತಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಎಸ್.ಆರ್.ಪಾಟೀಲ ಮುಖಂಡರಿಗೆ ಸೂಚನೆ ನೀಡಿದರು. ಶೇ 50ರಷ್ಟು ಮಹಿಳೆಯರು, ಯುವಕರು ಒಳಗೊಂಡಂತೆ 70ರಿಂದ 80 ಸಾವಿರ ಜನರನ್ನು ಸೇರಿಸುವಂತೆ ತಿಳಿಸಿದರು.

ADVERTISEMENT

ಬಲಾಬಲ ಪ್ರದರ್ಶನ: ಜನರನ್ನು ಕರೆತರುವ ಹೊಣೆಯನ್ನು ಟಿಕೆಟ್‌ ಆಕಾಂಕ್ಷಿಗಳಿಗೆ ಸಭೆ ವಹಿಸಿತು. ಇದಕ್ಕೆ ವೇದಿಕೆಯಲ್ಲಿದ್ದ ಶಾಸಕ ಎಚ್.ವೈ.ಮೇಟಿ, ಮಾಜಿ ಶಾಸಕ ಪಿ.ಎಚ್.ಪೂಜಾರ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹಾಗೂ ಸಭೆಯಲ್ಲಿ ಪಾಲ್ಗೊಂಡಿದ್ದ ಬಳ್ಳಾರಿ ಸಹೋದರರು ಸಮ್ಮತಿ ಸೂಚಿಸಿದರು.

ಎಐಸಿಸಿ ಪ್ರತಿನಿಧಿಯಾಗಿ ಸಭೆಗೆ ಬಂದಿದ್ದ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಮಾತನಾಡಿ, ಅಂದು ಬಾಗಲಕೋಟೆ ನಗರ ಮೇಲೆ ಇಡೀ ದೇಶದ ಗಮನ ಸೆಳೆಯಲಿದೆ. ಸಂವಾದ, ರ್‍ಯಾಲಿ, ಸಭೆಗಳ ಮೂಲಕ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ರೋಡ್ ಶೋಗೆ ಆದ್ಯತೆ ಸಲ್ಲ: ರಾಹುಲ್ ಭದ್ರತೆಗೆ ನಿಯೋಜಿಸಿರುವ ಎಸ್‌ಪಿಜಿಯವರ ಆಕ್ಷೇಪದ ಕಾರಣ ಈ ಬಾರಿಯ ಪ್ರವಾಸದಲ್ಲಿ ರೋಡ್‌ ಶೋಗಿಂತ ಜನರೊಂದಿಗೆ ಸಂವಾದ, ಸಭೆ,ಸಮಾರಂಭಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಭಿಪ್ರಾಯ ವ್ಯಕ್ತವಾಯಿತು.

ಭಿನ್ನಾಭಿಪ್ರಾಯ ಇಲ್ಲ: ಶಾಸಕ ಎಚ್.ವೈ.ಮೇಟಿ ಮಾತನಾಡಿ, ‘ಪಕ್ಷದ ಮುಖಂಡರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತದೆಯೋ ಅವರ ಗೆಲುವಿಗೆ ಉಳಿದವರು ಸೇರಿ ಶ್ರಮಿಸೋಣ. ನಾನು, ನೀನು, ಮೇಲೆ, ಕೆಳಗೆ ಭಾವನೆ ಬೇಡ. ಎಲ್ಲರೂ ಸ್ವಯಂ ಸೇವಕರಾಗಿ ಕೆಲಸ ಮಾಡೋಣ. ಎಐಸಿಸಿ ಅಧ್ಯಕ್ಷರಿಗೆ ಅಪಮಾನ ಸಲ್ಲ. ಜಿಲ್ಲೆಯ ಎಲ್ಲಾ ನಾಯಕರು ಒಟ್ಟಾಗಿ ಜನರನ್ನು ಕರೆತರೋಣ’ ಎಂದರು.

ರಾಹುಲ್ ಪ್ರವಾಸ ಯಶಸ್ಸಿಗೆ ಜಿಲ್ಲಾ ಘಟಕದ ವತಿಯಿಂದ ಎಲ್ಲಾ ಸಹಕಾರ ನೀಡಲಾಗುವುದು. ಬಾದಾಮಿ, ಹುನಗುಂದ, ತೇರದಾಳ, ಜಮಖಂಡಿಗೆ ಮುಂದಿನ ಹಂತದಲ್ಲಿ ರಾಹುಲ್‌ಗಾಂಧಿ ಅವರನ್ನು ಕರೆತರಲಾಗುವುದು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ್ ಹೇಳಿದರು.

ಶಾಸಕ ಜೆ.ಟಿ.ಪಾಟೀಲ, ಪಕ್ಷದ ಜಿಲ್ಲೆಯ ಉಸ್ತುವಾರಿಗಳಾದ ಡಿ.ಆರ್.ಪಾಟೀಲ, ಪಾರಸ್‌ಮಲ್‌ ಜೈನ್, ಪಿ.ಎಚ್.ಪೂಜಾರ, ಪ್ರಕಾಶ ತಪಶೆಟ್ಟಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ಯುವ ಮುಖಂಡರಾದ ಮುತ್ತಣ್ಣ ಬೆನ್ನೂರ, ನಾಗರಾಜ ಹದ್ಲಿ, ಮಂಜುನಾಥ ವಾಸನದ, ವಿಜುಗೌಡ ಪಾಟೀಲ ಪಾಲ್ಗೊಂಡಿದ್ದರು.

ತುಳಸಿಗಿರಿ ದೇವಸ್ಥಾನಕ್ಕೆ ಭೇಟಿ?

ಸಕ್ರಿ ಹೈಸ್ಕೂಲ್‌ ಮೈದಾನದಲ್ಲಿ ಅಂದು ಸಂಜೆ ಸಮಾವೇಶದಲ್ಲಿ ಪಾಲ್ಗೊಳ್ಳುವ ರಾಹುಲ್‌ಗಾಂಧಿ ನಂತರ ನವನಗರದ ಹೊಸ ಪ್ರವಾಸಿ ಮಂದಿರದಲ್ಲಿ ರಾಹುಲ್ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಬೆಳಿಗ್ಗೆ ರಾಮದುರ್ಗಕ್ಕೆ ತೆರಳಿ ಬೆಳಗಾವಿ ಜಿಲ್ಲೆಯ ಪ್ರವಾಸ ಆರಂಭಿಸಲಿದ್ದಾರೆ.

ಮುಧೋಳದಿಂದ ಬಾಗಲಕೋಟೆಗೆ ಬರುವ ಮಾರ್ಗದಲ್ಲಿ ತುಳಸಿಗಿರಿಯ ಆಂಜನೇಯ ದೇವಸ್ಥಾನಕ್ಕೆ ರಾಹುಲ್‌ ಅವರನ್ನು ಕರೆದೊಯ್ಯೋಣ ಎಂದು ಮುಖಂಡ ಮಂಜುನಾಥ ವಾಸನದ ಸಲಹೆ ನೀಡಿದರು.

* *

ಭದ್ರತೆಗೆ ಎಸ್‌ಪಿಜಿಯವರು ಇರುವ ಕಾರಣ ರೋಡ್‌ ಶೋ ವೇಳೆ ಸಿದ್ದರಾಮಯ್ಯ ಅವರನ್ನು ಮೆರೆಸಿದಂತೆ ರಾಹುಲ್‌ಗಾಂಧಿ ಅವರನ್ನು ಮೆರೆಸಲು ಆಗೊಲ್ಲ ಹಸನ್‌ಸಾಬ್ ದೋಟಿಹಾಳ ಕೆಪಿಸಿಸಿ ವೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.